ಚಿದುಗೆ ಜೈಲಾ, ಬೈಲಾ..? ಸುಪ್ರೀಂ ನ.26ಕ್ಕೆ ನಿರ್ಧಾರವಾಗಲಿದೆ ಭವಿಷ್ಯ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ನ.20- ಬಹುಕೋಟಿ ರೂ.ಗಳ ಐಎನ್‍ಎಕ್ಸ್ ಮೀಡಿಯಾ ಲಂಚ ಹಗರಣ ಸಂಬಂಧ ಕಳೆದ ಮೂರು ತಿಂಗಳಿನಿಂದ ತಿಹಾರ್ ಜೈಲಿನಲ್ಲಿರುವ ಕಾಂಗ್ರೆಸ್ ಪ್ರಭಾವಿ ನಾಯಕ ಮತ್ತು ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರಿಗೆ ಜಾಮೀನು ನೀಡಬೇಕೆ ಅಥವಾ ಬೇಡವೇ ಎಂಬ ಬಗ್ಗೆ ಸುಪ್ರೀಂಕೋರ್ಟ್ ನ.26ರಂದು ನಿರ್ಧರಿಸಲಿದೆ.

ತಮಗೆ ಜಾಮೀನು ನೀಡುವಂತೆ ಕೋರಿ ಚಿದಂಬರಂ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಆರ್.ಭಾನುಮತಿ ನೇತೃತ್ವದ ನ್ಯಾಯಪೀಠ ಈ ಸಂಬಂಧ ಪ್ರತ್ಯುತ್ತರ ನೀಡುವಂತೆ ಜಾರಿ ನಿರ್ದೇಶನಾಲಯಕ್ಕೆ ಇಂದು ನೋಟಿಸ್ ಜಾರಿಗೊಳಿಸಿದೆ. ಇಡಿ ಪರವಾಗಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮಹೆತಾ ನ.25ರಂದು ಈ ನೋಟಿಸ್‍ಗೆ ಪ್ರತ್ಯುತ್ತರ ನೀಡುವುದಾಗಿ ತಿಳಿಸಿದರು.

ಚಿದಂಬರಂ ಪರ ವಾದ ಮಂಡಿಸಿದ ಹಿರಿಯ ವಕೀಲರಾದ ಕಪೀಲ್ ಸಿಬಾಲ್ ಮತ್ತು ಅಭಿಷೇಕ್ ಮನುಸಿಂಘ್ವಿ ಕಳೆದ ಮೂರು ತಿಂಗಳಿನಿಂದ ಚಿದಂಬರಂ ಅವರು ಜೈಲಿನಲ್ಲಿದ್ದಾರೆ. ಅವರ ಆರೋಗ್ಯ ಹದಗೆಡುತ್ತಿದೆ. ಚಿದಂಬರಂ ಅವರಿಗೆ ಜಾಮೀನು ನೀಡಬೇಕೆಂದು ಕೋರಿದ್ದರು. ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ರುಷಿಕೇಶ್ ರಾಯ್ ಆವರನ್ನೊಳಗೊಂಡ ಪೀಠ ವಿಚಾರಣೆಯನ್ನು ನ.26ಕ್ಕೆ ಮುಂದೂಡಿದೆ.

ಐಎನ್‍ಎಕ್ಸ್ ಮೀಡಿಯಾ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ತಿಹಾರ್ ಜೈಲಿನಲ್ಲಿರುವ ಚಿದಂಬರಂ ತಮಗೆ ಜಾಮೀನು ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ನ.16ರಂದು ವಜಾ ಗೊಳಿಸಿತ್ತು. ಇದನ್ನು ಪ್ರಶ್ನಿಸಿ ಚಿದಂಬರಂ ಸುಪ್ರೀಂಗೆ ಮೇಲ್ಮನವಿ ಸಲ್ಲಿಸಿದ್ದಾರೆ.

Facebook Comments