ಸೆ.23ಕ್ಕೆ ಚಿದು ಜಾಮೀನು ಅರ್ಜಿ ವಿಚಾರಣೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಸೆ.12-ಬಹುಕೋಟಿ ರೂ.ಗಳ ಐಎನ್‍ಎಕ್ಸ್ ಮೀಡಿಯಾ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪಗಳಲ್ಲಿ ಬಂಧಿತರಾಗಿ ತಿಹಾರ್ ಜೈಲಿನಲ್ಲಿ ಕಸ್ಟಡಿಯಲ್ಲಿರುವ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಸೆ.23ಕ್ಕೆ ನಡೆಸಲಿದೆ.

ತಮಗೆ ಜಾಮೀನು ನೀಡುವಂತೆ ಹಾಗೂ 14 ದಿನಗಳ ಕಸ್ಟಡಿಗೆ ಒಪ್ಪಿಸಿರುವ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್‍ಗೆ ಮೊರೆ ಹೋಗಿದ್ದರು. ಈ ಕುರಿತು ದೆಹಲಿ ಹೈಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದ್ದ ಚಿದಂಬರಂ ಅವರ ವಿಚಾರಣೆ ನಡೆಸಿದ ಪೀಠವು ಅರ್ಜಿ ವಿಚಾರಣೆಯನ್ನು ಸೆ.23 ಸೋಮವಾರಕ್ಕೆ ಮುಂದೂಡಿದೆ. ಅಲ್ಲದೆ, ಈ ಸಂಬಂಧ ಸಿಬಿಐಗೆ ನೋಟಿಸ್ ಜಾರಿಗೊಳಿಸಿ ಪ್ರತ್ಯುತ್ತರ ಕೋರಿದೆ.

ಜಾಮೀನು ನಿರಾಕರಿಸಿರುವ ಹಾಗೂ ಕಸ್ಟಡಿಗೆ ಒಪ್ಪಿಸಿರುವ ವಿಚಾರಣಾ ನ್ಯಾಯಾಲಯ ಈ ಎರಡು ತೀರ್ಪುಗಳ ವಿರುದ್ಧ ಈ ಮೂಲಕ ಚಿದಂಬರಂ ಕಾನೂನು ಸಮರ ಮುಂದುವರಿಸಿದ್ದಾರೆ.

ಐಎನ್‍ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಆ.21ರಂದು ಸಿಬಿಐ ಕಾಂಗ್ರೆಸ್ ಮುಖಂಡರೂ ಆದ 73 ವರ್ಷದ ಚಿದಂಬರಂ ಅವರನ್ನು ಬಂಧಿಸಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ವಿಚಾರಣಾ ನ್ಯಾಯಾಲಯ ಸೆ.5ರಂದು ಆದೇಶ ನೀಡಿ ಸೆ.19ರ ವರೆಗೆ 14 ದಿನಗಳ ಕಾಲ ಕಸ್ಟಡಿಗೆ ಒಪ್ಪಿಸಿದೆ.

Facebook Comments