ಐಫೋನ್ ಕಂಪನಿ ಮೇಲಿನ ದಾಳಿ, ಆಸ್ತಿ ನಷ್ಟ ಖಂಡನೀಯ : ಮಾಜಿ ಸಭಾಪತಿ ಸುದರ್ಶನ್

ಈ ಸುದ್ದಿಯನ್ನು ಶೇರ್ ಮಾಡಿ

ಕೋಲಾರ, ಡಿ.14- ತೈವಾನ್ ಮೂಲದ ಐಫೋನ್ ವಿಸ್ಟ್ರಾನ್ ಕಂಪನಿ ಮೇಲೆ ದಾಳಿ ನಡೆಸಿ ನಷ್ಟವುಂಟು ಮಾಡಿರುವ ಘಟನೆ ಜಿಲ್ಲಾ ಹಾಗೂ ರಾಜ್ಯದ ಘನತೆ ಮಾರಕವಾದದ್ದು ಎಂದು ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಬೇಸರ ವ್ಯಕ್ತಪಡಿಸಿದ್ದಾರೆ. ವಿಸ್ಟ್ರಾನ್ ಕಂಪನಿಗೆ ಭೇಟಿ ನೀಡಿ ಅಲ್ಲಿನ ದುಸ್ಥಿತಿಯನ್ನು ಗಮನಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉದ್ಯೋಗ ಸೃಷ್ಟಿ, ಬಂಡವಾಳ ಆಕರ್ಷಣೆ ವಿಷಯದಲ್ಲಿ ಈ ಘಟನೆ ಒಳ್ಳೆಯ ಬೆಳವಣಿಗೆ ಅಲ್ಲ. ಇದೊಂದು ಅಘಾತಕಾರಿ ಘಟನೆ ಎಂದರು.

ಇಂತಹ ಘಟನೆಗಳು ಮರುಕಳಸದಂತೆ ಸರ್ಕಾರ, ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ತುರ್ತಾಗಿ ಅಧಿಕಾರಿಗಳು, ಕಾರ್ಮಿಕರು, ಸಂಸ್ಥೆಯ ಪ್ರತಿನಿಧಿಗಳ ಸಭೆ ನಡೆಸಿ ಸೌಹಾರ್ದಯುತ ವಾತಾವರಣ ನಿರ್ಮಿಸಿ ಕಂಪನಿ ಪುನರಾರಂಭಕ್ಕೆ ಕ್ರಮವಹಿಸಬೇಕು ಎಂದು ಅವರು ಒತ್ತಾಯಿಸಿದರು.

ಕಂಪನಿಯ ಹಿತದಷ್ಟೆ ಕಾರ್ಮಿಕರ ಹಿತವೂ ಮುಖ್ಯ. ಕಾರ್ಮಿಕರ ಹೊರಗುತ್ತಿಗೆ ಪಡೆದವರು ವೇತನ ಬಟವಾಡೆಯಲ್ಲಿ ಲೋಪದೋಷ ಎಸಗಿದ್ದರೆ ಆ ಬಗ್ಗೆಯೂ ತನಿಖೆಯಾಗಲಿ. ಕೈಗಾರಿಕಾ ಸಚಿವರು ಕೇವಲ ಭೇಟಿ ನೀಡಿ ಹೋದರೆ ಸಾಲದು, ಕೈಗಾರಿಕೆಗಳ ಬೆಳವಣಿಗೆ, ಕಾರ್ಮಿಕರ ಸಮಸ್ಯೆಗಳ ಕುರಿತು ಕನಿಷ್ಠ 6 ತಿಂಗಳಿಗೊಮ್ಮೆಯಾದರೂ ಪ್ರಗತಿ ಪರಿಶೀಲನೆ ನಡೆಸಬೇಕು. ಮೂಲಸೌಲಭ್ಯಗಳ ಕುರಿತು ಗಮನಹರಿಸಬೇಕು ಎಂದರು.

#ಪೊಲೀಸ್ ಠಾಣೆ ಉನ್ನತಿಗೆ ಒತ್ತಾಯ:
ಸರ್ಕಾರ ಕೂಡಲೇ ನರಸಾಪುರ ಠಾಣೆಯನ್ನು ಉನ್ನತೀಕರಿಸಿ ಪ್ರತ್ಯೇಕ ಠಾಣೆಯನ್ನು ಕೈಗಾರಿಕಾ ಪ್ರದೇಶಕ್ಕೆ ಮಂಜೂರು ಮಾಡಬೇಕು.ಇಂತಹ ಪ್ರತಿಷ್ಟಿತ ಕಂಪನಿಗಳು ಸ್ವಯಂ ಭದ್ರತೆ ಹಾಗೂ ಗುಪ್ತದಳ ವ್ಯವಸ್ಥೆಯನ್ನು ಹೊಂದಿರಬೇಕು ಎಂದು ಸಲಹೆ ನೀಡಿದರು.

Facebook Comments