ಪ್ಲೇಆಫ್ಗೇರಲು ಪಂಜಾಬ್ ಕಿಂಗ್ಸ್ ತವಕ ; ಹ್ಯಾಟ್ರಿಕ್ ಗೆಲುವಿನತ್ತ ಆರ್ಸಿಬಿ
ಮುಂಬೈ, ಮೇ 13- ಸೋಲು ಗೆಲುವಿನ ಸುಳಿಗೆ ಸಿಲುಕಿದ್ದರೂ ಕೂಡ ಈ ಬಾರಿ ಪ್ಲೇಆಫ್ಗೇರುವ ಹುಮ್ಮಸ್ಸು ಮೂಡಿಸಿರುವ ಪಾಫ್ ಡುಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇಂದು ನಡೆಯಲಿರುವ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯ ಗೆಲ್ಲುವ ಮೂಲಕ ಪ್ಲೇಆಫ್ ಅನ್ನು ಖಾತ್ರಿ ಪಡಿಸಿಕೊಳ್ಳಲು ಹೋರಾಟ ನಡೆಸುತ್ತಿದೆ.
ಹ್ಯಾಟ್ರಿಕ್ ಸೋಲು ಕಂಡಿದ್ದರೂ ಕೂಡ ಕಳೆದೆರಡು ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (13 ರನ್) ಹಾಗೂ ಸನ್ರೈಸರ್ಸ್ ಹೈದ್ರಾಬಾದ್ (67 ರನ್)ಗಳ ಭರ್ಜರಿ ಗೆಲುವು ಸಾಧಿಸಿರುವ ಆರ್ಸಿಬಿ ಇಂದು ಹ್ಯಾಟ್ರಿಕ್ ಗೆಲುವಿನ ಹೊಸ್ತಿನಲ್ಲಿದ್ದು, ಪಂದ್ಯ ಗೆಲ್ಲುವ ಮೂಲಕ ಪಂಜಾಬ್ ಕಿಂಗ್ಸ್ ವಿರುದ್ಧ ಸೇಡು ತೀರಿಸಿಕೊಳ್ಳಲು ಹೊರಟಿದೆ.
ಮಡು ಇಲ್ಲವೇ ಮಡಿ:
ಮತ್ತೊಂದೆಡೆ ಕನ್ನಡಿಗ ಮಯಾಂಕ್ ಅಗರ್ವಾಲ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡವು ಪ್ಲೇಆಫ್ಗೇರಬೇಕಾದರೆ ಆರ್ಸಿಬಿ ವಿರುದ್ಧದ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಪಂಜಾಬ್ ತಾನಾಡಿರುವ 11 ಪಂದ್ಯಗಳಲ್ಲಿ 5ರಲ್ಲಿ ಗೆಲುವು ಸಾಧಿಸಿ 10 ಅಂಕಗಳನ್ನು ಕಲೆ ಹಾಕುವ ಮೂಲಕ ಪಾಯಿಂಟ್ಸ್ ಪಟ್ಟಿಯಲ್ಲಿ 8ನೆ ಸ್ಥಾನದಲ್ಲಿದ್ದರೂ ಇಂದಿನ ಪಂದ್ಯವನ್ನು ಗೆಲ್ಲುವ ಮೂಲಕ 6ನೆ ಸ್ಥಾನಕ್ಕೆ ಜಿಗುವತ್ತ ಚಿತ್ತ ಹರಿಸಿದೆ.
ಮತ್ತೆ ಮಿಂಚುವರೇ ಪಾಫ್:
ಪಂಜಾಬ್ ಕಿಂಗ್ಸ್ ವಿರುದ್ಧದ ಹಿಂದಿನ ಪಂದ್ಯದಲ್ಲಿ ಆರ್ಸಿಬಿ ನಾಯಕ ಪಾಫ್ ಡುಪ್ಲೆಸಿಸ್ ಅವರು ಆಕ್ರಮಣಕಾರಿ ಆಟ ಪ್ರದರ್ಶಿಸಿ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ಆ ಪಂದ್ಯದಲ್ಲಿ ಪಾಫ್ 57 ಎಸೆತಗಳಲ್ಲಿ 88 ರನ್ ಬಾರಿಸಿದ್ದರು ಇಂದಿನ ಪಂದ್ಯದಲ್ಲೂ ಅದೇ ಪ್ರದರ್ಶನ ನೀಡಿದರೆ ಆರ್ಸಿಬಿ ಬೃಹತ್ ಮೊತ್ತ ಕಲೆ ಹಾಕಬಹುದು.
ಕೊಹ್ಲಿ ಚಿಂತೆ:
ಆರ್ಸಿಬಿಗೆ ದೊಡ್ಡ ತಲೆ ನೋವಾಗಿರುವುದು ಮಾಜಿ ನಾಯಕ ವಿರಾಟ್ ಕೊಹ್ಲಿಯ ಕಳಪೆ ಫಾರ್ಮ್, ವಿರಾಟ್ ಈ ಋತುವಿನಲ್ಲಿ 3 ಬಾರಿ ಡಕ್ ಔಟ್ ಆಗಿರುವುದು ತಂಡದ ಫಲಿತಾಂಶದ ಮೇಲೆ ಹೊಡೆತ ಬಿದ್ದಿದೆ. ಇಂದಿನ ಪಂದ್ಯದಲ್ಲಿ ಕೊಹ್ಲಿ ಫಾರ್ಮ್ಗೆ ಬರುತ್ತಾರೆಯೇ ಎಂದು ಕಾದುನೋಡಬೇಕಾಗಿದೆ.
ಆರ್ಸಿಬಿ ತಂಡದ ಅಂತಿಮ ಓವರ್ಗಳಲ್ಲಿ ರನ್ ವೇಗ ಹೆಚ್ಚಿಸುವ ದಿನೇಶ್ ಕಾರ್ತಿಕ್, ರಜತ್ ಪಟ್ಟಿದಾರ್, ಗ್ಲೆನ್ ಮ್ಯಾಕ್ಸ್ವೆಲ್ರ ಬ್ಯಾಟ್ನಿಂದಲೂ ರನ್ಗಳ ಸುರಿಸಲು ಸಜ್ಜಾಗಿದ್ದಾರೆ. ಆರ್ಸಿಬಿ ಬೌಲಿಂಗ್ ಕೂಡ ಕಳೆದೆರಡು ಪಂದ್ಯಗಳಿಂದ ಬಲಿಷ್ಠವಾಗಿದ್ದು, ವೇಗಿಗಳಾದ ಹರ್ಷಲ್ ಪಟೇಲ್, ಜೋಶ್ ಹೇಜಲ್ವುಡ್, ಸ್ಪಿನ್ನರ್ ವಾಹಿಂದು ಹಸರಂಗ ಎದುರಾಳಿ ತಂಡದ ಬ್ಯಾಟ್ಸ್ಮನ್ಗಳಿಗೆ ಲಗಾಮು ಹಾಕುವಲ್ಲಿ ಯಶಸ್ವಿಯಾಗಿದ್ದರೂ ಮೊಹಮ್ಮದ್ ಶಿರಾಜ್ ದುಬಾರಿಯಾಗಿರುವುದು ಬೌಲಿಂಗ್ ವಿಭಾಗ ಕಲೆಕುಂದಿದಂತಿದೆ.
ಪಂಜಾಬ್ಗೆ ಗೆಲುವೊಂದೇ ಮಂತ್ರ:
ಕಳೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋಲು ಕಂಡಿರುವ ಮಯಾಂಕ್ ಪಡೆಗೆ ಪ್ಲೇಆಫ್ಗೇರಲು ಗೆಲುವೊಂದೇ ಮಂತ್ರವಾಗಿದೆ. ಆ ತಂಡದಲ್ಲಿರುವ ಸ್ಟಾರ್ ಆಟಗಾರರಾದ ಜಾನಿ ಬ್ಯಾರಿಸ್ಟೌ, ಶಿಖರ್ಧವನ್, ಲಿವಿಂಗ್ಸ್ಟನ್ರವರು ಉತ್ತಮ ಲಯದಲ್ಲಿದ್ದರೂ ಕೂಡ ನಾಯಕ ಮಯಾಂಕ್ ಅಗರ್ವಾಲ್, ಭಾನುಕಾ ರಾಜಪಕ್ಸೆಯ ಕಳಪೆ ಬ್ಯಾಟಿಂಗ್ ರನ್ ವೇಗ ಕುಸಿಯಲು ಕಾರಣವಾಗಿದೆ.
ಆರ್ಸಿಬಿ ವಿರುದ್ಧ ಪಂಜಾಬ್ ಕಿಂಗ್ಸ್ ಬೌಲರ್ ಸಂದೀಪ್ ಶರ್ಮಾ ಉತ್ತಮ ಪ್ರದರ್ಶನ ನೀಡಿದ್ದು ಇಂದಿನ ಪಂದ್ಯದಲ್ಲಿ ಹೆಚ್ಚಿನ ಗಮನ ಹರಿಸಲಾಗಿದೆ. ಹರ್ಷದೀಪ್ ಸಿಂಗ್, ಕಗಸೊ ರಬಾಡ, ರಿಶಿ ಧವನ್, ರಾಹುಲ್ ಚಾಹರ್ ಅವರು ಕೂಡ ಆರ್ಸಿಬಿಯ ಬ್ಯಾಟ್ಸ್ಮನ್ಗಳಿಗೆ ಲಗಾಮು ಹಾಕಲು ಹೊರಟಿದೆ.
ಪ್ಲೇಆಫ್ಗೇರಲು ಪ್ರಮುಖವಾಗಿ ರುವ ಇಂದಿನ ಪಂದ್ಯವೂ ರೋಚಕತೆಯಿಂದ ಕೂಡಿರಲಿದೆ.