2021ರ ಐಪಿಎಲ್‍ನ ಹರಾಜಿನತ್ತ ಎಲ್ಲರ ಚಿತ್ತ, ಸ್ಟಾರ್ ಆಟಗಾರರೇ ಬಿಕರಿಯಾಗುವುದು ಡೌಟ್..!

ಈ ಸುದ್ದಿಯನ್ನು ಶೇರ್ ಮಾಡಿ

ಕೊರೊನಾ ಮಹಾಮಾರಿಯ ಕಾಟದ ನಡುವೆಯೇ ಐಪಿಎಲ್ 13ರ ಆವೃತ್ತಿಯು ಅರಬ್ ನಾಡಲ್ಲಿ ಯಶಸ್ವಿಯಾಗಿ ನಡೆದಿರುವ ಬೆನ್ನ ಹಿಂದೆಯೇ ಐಪಿಎಲ್ 14ರ ಹರಾಜಿನತ್ತ ಎಲ್ಲರ ದೃಷ್ಟಿ ನೆಟ್ಟಿದೆ. ಈ ಬಾರಿಯ ಐಪಿಎಲ್ ಹರಾಜು ಕೂಡ ಮಹತ್ತರವಾಗಿದ್ದು ತಂಡದಲ್ಲಿ 5 ಆಟಗಾರರನ್ನು ಮಾತ್ರ ಉಳಿಸಿಕೊಳ್ಳುವ ಅವಕಾಶ ನೀಡಲಾಗಿರುವುದರಿಂದ ಫ್ರಾಂಚೈಸಿಗಳು ಕೆಲವು ಸ್ಟಾರ್ ಆಟಗಾರರನ್ನು ಬಿಕರಿ ಮಾಡಿಕೊಂಡು ತಂಡವನ್ನು ಬಲಿಷ್ಠವಾಗಿಸಿಕೊಳ್ಳುವತ್ತ ಗಮನ ಹರಿಸಿದರೆ 2020ರ ಐಪಿಎಲ್‍ನಲ್ಲಿ ಕಳಪೆ ಪ್ರದರ್ಶನ ನೀಡಿದ ಆಟಗಾರರನ್ನು ತಂಡದಿಂದ ಕೈಬಿಡುವ ಸೂಚನೆಯನ್ನು ನೀಡಿದೆ. ಅಲ್ಲದೆ ಈ ಬಾರಿ ಹೆಚ್ಚುವರಿಯಾಗಿ ಒಂದೆರಡು ತಂಡಗಳನ್ನು ಸೇರ್ಪಡೆ ಮಾಡಿಕೊಂಡು ಕಳೆದ ಐಪಿಎಲ್‍ನಲ್ಲಿ ಆದ ನಷ್ಟವನ್ನು ಸರಿದೂಗಿಸಿಕೊಳ್ಳಲು ಬಿಸಿಸಿಐ ಅಧ್ಯಕ್ಷ ಸೌರವ್‍ಗಂಗೂಲಿ ನಿರ್ಧರಿಸಿದ್ದಾರೆ.

#ರೋಹಿತ್‍ಗೆ ನಾಯಕತ್ವ:
2020ರ ಐಪಿಎಲ್ ಚಾಂಪಿಯನ್ಸ್ ಆಗಿರುವ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಗಳು ರೋಹಿತ್ ಶರ್ಮಾರನ್ನೇ ಮುಂದಿನ ಆವೃತ್ತಿಗೂ ನಾಯಕನನ್ನಾಗಿ ಮಾಡುವ ನಿರ್ಧಾರವನ್ನು ಕೈಗೊಂಡಿದ್ದರೆ, ತಂಡದ ಖಾಯಂ ಸದಸ್ಯರಾಗಿರುವ ಕೀರಾನ್ ಪೋಲಾರ್ಡ್, ಪಾಂಡ್ಯಾ ಬ್ರದರ್ಸ್, ಬೂಮ್ರಾ ಹಾಗೂ ಬೌಲ್ಟ್‍ರನ್ನು ಉಳಿಸಿಕೊಳ್ಳಲು ಮುಂದಾಗಿದ್ದಾರೆ. ಆದರೆ ತಂಡದಲ್ಲಿ ಯಶಸ್ವಿ ಬ್ಯಾಟ್ಸ್‍ಮನ್ ಆಗಿದ್ದ ಇಶಾನ್‍ಕಿಶಾನ್‍ರನ್ನು ತಂಡದಲ್ಲಿ ಉಳಿಸಿಕೊಳ್ಳಬೇಕೋ ಅಥವಾ ರೈಟ್ ಟು ಮ್ಯಾಚ್ ಮೂಲಕ ಸೇರ್ಪಡೆ ಮಾಡಿಕೊಳ್ಳಬೇಕೋ ಎಂಬುದು ಇನ್ನು ನಿರ್ಧಾರವಾಗಿಲ್ಲದಿರುವುದರಿಂದ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ವಿರಾಟ್ ಕೊಹ್ಲಿ ನಾಯಕತ್ವದ ಆರ್‍ಸಿಬಿ ಸೇರಿದಂತೆ ಹಲವು ತಂಡಗಳು ಮುಂದಾಗಿವೆ.

#ರವಿಚಂದ್ರನ್‍ಅಶ್ವಿನ್‍ಗೆ ಕೊಕ್:
2020ರ ರನ್ನರ್‍ಅಪ್ ಆಗಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡವು ನಾಯಕ ಶ್ರೇಯಾಸ್ ಐಯ್ಯರ್, ಸ್ಟೋನಿಸ್, ರಬಡಾ, ಧವನ್, ಪಂತ್‍ರನ್ನು ಉಳಿಸಿಕೊಳ್ಳಲು ಮುಂದಾಗಿರುವುದರಿಂದ ಆ ತಂಡದಲ್ಲಿರುವ ಸ್ಟಾರ್ ಆಟಗಾರರಾದ ರವಿಚಂದ್ರನ್ ಅಶ್ವಿನ್, ಅಕ್ಷರ್‍ಪಟೇಲ್, ಹಿಟ್ಮೇಯರ್, ಇಶಾಂತ್‍ಶರ್ಮಾರನ್ನು ಕೈಬಿಡಲು ಮುಂದಾಗಿದ್ದಾರೆ.

#ಕೋಟಿ ವೀರನನ್ನು ಕೈಬಿಡಲು
ಆರ್‍ಸಿಬಿ ಚಿತ್ತ:
ಪ್ರತಿ ಬಾರಿಯು ಕಪ್ ನಮ್ದೇ ಎಂದು ಬಿಂಬಿಸಿಕೊಳ್ಳುವ ವಿರಾಟ್ ಕೊಹ್ಲಿ ನಾಯಕತ್ವದ ಆರ್‍ಸಿಬಿ ತಂಡದಲ್ಲೂ ಹಲವು ಮಹತ್ತರ ಬದಲಾವಣೆಗೆ ಮುಂದಾಗಿದೆ. ತಂಡದ ಭರವಸೆಯ ಆಟಗಾರನಾಗಿರುವ ದೇವದತ್ ಪಡಿಕ್ಕಲ್ ರನ್ನು ತಂಡದಲ್ಲಿ ಉಳಿಸಿಕೊಳ್ಳಲು ಮುಂದಾಗಿರುವ ಫ್ರಾಂಚೈಸಿಗಳು ತಂಡಕ್ಕೆ ಆಸರೆಯಾಗಿರುವ ವಿರಾಟ್ ಕೊಹ್ಲಿ, ಎಬಿಡಿವಿಯರ್ಸ್, ಯಜುವೇಂದ್ರ ಚಹಾಲ್, ವಾಷಿಂಗ್ಟನ್‍ಸುಂದರ್/ನವದೀಪ್ ಸೈನಿಯನ್ನು ಉಳಿಸಿಕೊಳ್ಳುವತ್ತ ಗಮನ ಹರಿಸಿದ್ದರೆ 10 ಕೋಟಿ ವೀರ ಕ್ರಿಸ್‍ಮೋರಿಸ್, ಫಿಂಚ್‍ರನ್ನು ರೈಟ್ ಟು ಮ್ಯಾಚ್ ಮೂಲಕ ತಂಡಕ್ಕೆ ಸೇರಿಸಿಕೊಳ್ಳಲು ನಿರ್ಧರಿಸಿದ್ದಾರಾದರೂ ದುಬಾರಿ ಬೌಲರ್‍ಗಳಾಗಿರುವ ಡೇಲ್‍ಸ್ಟೇನ್, ಉಮೇಶ್‍ಯಾದವ್, ಮೊಹಮ್ಮದ್ ಸಿರಾಜ್, ಆ್ಯಡಂ ಜಂಪಾ, ಪಾರ್ಥಿವ್‍ಪಟೇಲ್, ಪಿಲಿಪ್ಸ್‍ರನ್ನು ಕೈಬಿಡುವ ಸೂಚನೆಗಳನ್ನು ನೀಡಿವೆ.

ಕಿಂಗ್ಸ್‍ನಿಂದ ಮ್ಯಾಕ್ಸ್‍ವೆಲ್ ಹೊರಕ್ಕೆ:
ಕನ್ನಡಿಗ ಕೆ.ಎಲ್.ರಾಹುಲ್ ಸಾರಥ್ಯದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಫ್ರಾಂಚೈಸಿಯಾಗಿರುವ ಬಾಲಿವುಡ್ ನಟಿ ಪ್ರೀತಿಜಿಂಟಾ ಸ್ಟಾರ್ ಆಟಗಾರರಾದ ಕ್ರಿಸ್‍ಗೇಲ್, ಕೆ.ಎಲ್.ರಾಹುಲ್,ಮಯಾಂಕ್ ಅಗರ್‍ವಾಲ್, ಮೊಹಮದ್‍ಶಮಿ, ನಿಕೋಲಸ್ ಪೂರಾನ್‍ರಿಗೆ ತಂಡದಲ್ಲಿ ಸ್ಥಾನ ಕಲ್ಪಿಸಿ ಗ್ಲೇನ್ ಮ್ಯಾಕ್ಸ್‍ವೆಲ್, ಕ್ರಿಸ್ ಜೋರ್ಡಾನ್, ಶೆಲ್ಡಾನ್ ಕಾರ್ಟಲ್, ಜೇಮ್ಸ್ ನಿಶೀಮ್‍ಗೆ ಕೊಕ್ ಕೊಟ್ಟು ಯುವ ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡು 2021ರ ಐಪಿಎಲ್ ಟ್ರೋಫಿ ಗೆಲ್ಲುವತ್ತ ಗಮನ ಹರಿಸಿದ್ದಾರೆ.

#ಕಾರ್ತಿಕ್‍ಗಿಲ್ಲ ಶಾರುಖ್ ಒಲವು:
ಬಾಲಿವುಡ್ ನಟ ಶಾರುಖ್‍ಖಾನ್ ಮಾಲೀಕತ್ವದ ಕೆಕೆಆರ್ ತಂಡದಲ್ಲಿ ಈ ಬಾರಿ ಕಳಪೆ ಪ್ರದರ್ಶನ ನೀಡಿದ್ದ ದಿನೇಶ್‍ಕಾರ್ತಿಕ್, ಟಾಮ್‍ಬ್ಯಾಂಟನ್, ಕ್ರಿಸ್‍ಗ್ರೀನ್‍ರಿಗೆ ಕೊಕ್ ಕೊಡಲು ಮುಂದಾಗಿದ್ದರೆ, ಯುವ ಆಟಗಾರರಾದ ರಾಹುಲ್ ತ್ರಿಪಾಠಿ,ಶುಭಮನ್‍ಗಿಲ್, ಸುನೀಲ್‍ನರೇನ್, ಆ್ಯಂಡ್ರೂ ರಸಲ್, ಇಯಾನ್‍ಮಾರ್ಗನ್‍ರನ್ನು ಉಳಿಸಿಕೊಳ್ಳುವ ಸೂಚನೆ ನೀಡಿವೆ.

ಆರ್‍ಆರ್‍ನಿಂದ ಉತ್ತಪ್ಪ ಔಟ್:
ಸ್ಟೀವನ್ ಸ್ಮಿತ್ ನಾಯಕತ್ವದ ರಾಯಜಸ್ಥಾನ್ ರಾಯಲ್ಸ್ ತಂಡದ ಫ್ರಾಂಚೈಸಿಗಳು ವಿದೇಶಿ ಆಟಗಾರರತ್ತ ಹೆಚ್ಚು ಗಮನ ಹರಿಸಿದ್ದು ಸ್ಮಿತ್, ಸ್ಟ್ರೋಕ್ಸ್, ಬಟ್ಲರ್, ಸಮ್ಸನ್, ಆರ್ಚರ್‍ರನ್ನು ಉಳಿಸಿಕೊಂಡು ಉಳಿದ ಆಟಗಾರರೆಲ್ಲರನ್ನು ಹರಾಜಿಗಿಡಲು ಮುಂದಾಗಿದೆ.

ಸನ್‍ರೈಸರ್ಸ್ ಹೈದ್ರಾಬಾದ್‍ನಲ್ಲಿ ಡೇವಿಡ್ ವಾರ್ನರ್, ಬ್ಯಾರಿಸ್ಟೋವ್, ಮನೀಷ್‍ಪಾಂಡೆ, ರಶೀದ್‍ಖಾನ್, ಷಾರನ್ನು ಉಳಿಸಿಕೊಂಡರೆ, ಚೆನ್ನೈ ಸೂಪರ್ ಕಿಂಗ್ಸ್‍ನಲ್ಲಿ ಧೋನಿ, ರೈನಾ,ಡುಪ್ಲೆಸಿಸ್, ಜಡೇಜಾ, ರಾಯುಡು ಉಳಿದುಕೊಳ್ಳುವ ಸಾಧ್ಯತೆಗಳಿರುವುದರಿಂದ ಪಿಯೂಸ್‍ಚಾವ್ಲ, ಕೇದಾರ್‍ಜಾಧವ್, ಇಮ್ರಾನ್ ತಹೀರ್ ಸೇರಿದಂತೆ ಎಲ್ಲಾ ಆಟಗಾರರನ್ನು ಹರಾಜಿಗಿಡಲು ಫ್ರಾಂಚೈಸಿಗಳು ಮುಂದಾಗಿದ್ದಾರೆ.

2020ರ ಐಪಿಎಲ್ ಸರಣಿಯು ಏಪ್ರಿಲ್ ಅಥವಾ ಮೇನಲ್ಲಿ ನಡೆಯಲಿರುವುದರಿಂದ ಹರಾಜು ಪ್ರಕ್ರಿಯೆಯು ಫೆಬ್ರುವರಿ ಅಥವಾ ಮಾರ್ಚ್‍ನಲ್ಲಿ ನಡೆಯಲಿದ್ದು ಎಲ್ಲರ ಚಿತ್ತ ಈಗ ಹರಾಜಿನತ್ತ ನೆಟ್ಟಿದೆ.

Facebook Comments