ಯುವಕರ ಹಾದಿ ತಪ್ಪಿಸುತ್ತಿದೆಯಾ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್..?

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ, ಏ.20-ಒಂದು ಓವರ್‍ಗೆ ಇಂತಿಷ್ಟು ರನ್; ಈ ಓವರ್‍ನಲ್ಲಿ ಬ್ಯಾಟ್ಸ್‍ಮನ್ ಔಟಾಗಲಿದ್ದಾರೆ ಹಾಗೂ ಈ ಓವರ್‍ನಲ್ಲಿ ಒಂದು ನೊ ಬಾಲ್ ಆಗಲಿದೆ… ಎಂದೆಲ್ಲಾ ಬೆಟ್ಟಿಂಗ್ ಕಟ್ಟುವುದರಿಂದ ಐಪಿಎಲ ಬೆಟ್ಟಿಂಗ್ ದಂಧೆ ಜೋರಾಗಿ ನಡೆಯುತ್ತಿದ್ದು, ಯುವ ಪೀಳಿಗೆ ಇದರಿಂದ ದಾರಿ ತಪ್ಪುತ್ತಿದೆ.

ಈ ಬೆಟ್ಟಿಂಗ್ ಬೃಹತ್ ದಂಧೆಯಾಗಿ ಬೆಳೆಯುತ್ತಿರುವ ಬೆಟ್ಟಿಂಗ್ ಯುವ ಜನತೆಯನ್ನು ಮೃತ್ಯು ಕೂಪಕ್ಕೆ ತಳ್ಳುತ್ತಿದೆ. ಹಾಗೂ ಯುವ ಸಮಾಜವನ್ನು ಹಾಳುಗೆಡವುತ್ತಿದೆ. ಕಳೆದ ಕೆಲ ದಿನದಿಂದ ಆರಂಭವಾಗಿರುವ ಜಾಗತಿಕ ವಿಶ್ವ ಕಪ್ ಕ್ರಿಕೆಟ್ ಕೇವಲ ಕ್ರಿಕೆಟ್ ಆಟವಾಗದೆ ಅಕ್ರಮ ಸಟ್ಟೆ ಬಾಜಿ (ಜೂಜು ಆಟ) ಆಡಿಸುವವರಿಗೆ ವರವಾಗಿದೆ. ಅಷ್ಟರ ಮಟ್ಟಿಗೆ ಇಂದು ಇದು ಬೆಳೆದು ಹೆಮ್ಮರವಾಗಿ ಇಡೀ ದೇಶ ಹಾಗೂ ವಿಶ್ವವನ್ನೇ ವ್ಯಾಪಿಸಿದೆ.

ಕ್ರಿಕೆಟ್ ವೀಕ್ಷಿಸುವ ಕ್ರೀಡಾ ಪ್ರಿಯರಿಗೆ ರಸದೌತಣವೆ ಸರಿ: ಹಿಂದೆ ಇದ್ದ ಕುತೂಹಲ, ಕೌತುಕತೆ, ಸಂತಸ ಇಂದು ಕಾಣ ಸಿಗದು. ಕಾರಣ ಯಾವುದೇ ಆಟ ನಡೆಯುವಾಗ ಅದನ್ನು ಕೇವಲ ಆಟವಾಗಿ ನೋಡುತ್ತಿದ್ದ ಜನರು ಇಂದು ಸೋತರೂ ಗೆದ್ದರೂ ಅದಕ್ಕೆ ಈ ಮ್ಯಾಚ್ ಫಿಕ್ಸ್ ಎಂಬ ಹಣೆ ಪಟ್ಟಿ ಕಟ್ಟುತ್ತಾರೆ.

ಕಾರಣ ಇದಕ್ಕೆ ಕೆಲವು ವರ್ಷದಿಂದ ಕೆಲ ಆಟಗಾರರು ಈ ಫಿಕ್ಸಿಂಗ್ ಎಂಬ ದಂಧೆಗೆ ಸಿಲುಕಿರುವುದು ಖಚಿತವಾಗಿದ್ದರಿಂದ ಐಸಿಸಿ ಹಾಗೂ ಬಿಸಿಸಿಐ ಆಟಗಾರರಿಗೆ ಕಠಿಣ ನಿಯಮವನ್ನು ಹೇರುವ ಮೂಲಕ ಸ್ವಲ್ಪ ಮಟ್ಟಿಗೆ ಇದನ್ನು ತಹಬದಿಗೆ ತಂದಿರುವುದು ಪ್ರಶಂಸಾರ್ಹ.

ಆದರೂ ಇದನ್ನು ಮೀರಿ ಬೆಳೆಯುತ್ತಿರುವ ಬೆಟ್ಟಿಂಗ್ ದಂಧೆಕೋರರು ಹೇಗೋ ಇಡೀ ವಿಶ್ವದಲ್ಲಿ ತಮ್ಮ ನೆಟ್‍ವರ್ಕ್ ಬೆಳೆಸಿಕೊಂಡು ತಮ್ಮ ದಂಧೆಯನ್ನು ನಿರಾಯಾಸವಾಗಿ ಮಾಡುತ್ತ ಕೋಟ್ಯಾಂತರ ರೂ. ಗಳಿಸುತ್ತಿದ್ದಾರೆ ಹಾಗೂ ಈ ಅಕ್ರಮ ಚಟುವಟಿಕೆಯನ್ನು ತಿಳಿಯದೆ ಯಾಮಾರುತ್ತಿರುವ ಯುವ ಪೀಳಿಗೆ ಬೆಟ್ಟಿಂಗ್ ಎಂಬ ಮೃತ್ಯು ಪಾಶಕ್ಕೆ ಬೀಳುತ್ತಿದ್ದಾರೆ.

ಮ್ಯಾಚ್ ಫಿಕ್ಸಿಂಗ್ ದಂಧೆಕೋರರು ಒಂದು ಪಂದ್ಯಕ್ಕೆ ಕೋಟ್ಯಾಂತರ ರೂ. ಗಳಿಸುತ್ತಿದ್ದಾರೆ ಎಂಬುದು ಗುಟ್ಟಾಗಿ ಉಳಿದಿಲ್ಲ! ಬೆಟ್ಟಿಂಗ್‍ನಲ್ಲಿ ತಮ್ಮ ನಿರೀಕ್ಷೆಗೆ ತಕ್ಕಂತೆ ಹಣ ಗಳಿಸಿ ಕೆಲವರು ಇದರಲ್ಲಿ ಯಶಸ್ವಿಯಾದರೆ, ನೂರಕ್ಕೆ 90 ರಷ್ಟು ಮಂದಿ ತಮ್ಮ ಹಣವನ್ನು ಕಳೆದುಕೊಳ್ಳುತ್ತಾರೆ. ಕ್ರಿಕೆಟ್‍ಎಂಬ ಮಾಯಾ ಕ್ರೀಡೆ ಇಂದು ವಿಶ್ವವನ್ನೆ ತನ್ನತ್ತ ಸೆಳೆದು ಎಲ್ಲರ ಗಮನವನ್ನು ಕೇಂದ್ರೀಕರಿಸಿದೆ.

ಇದನ್ನೇ ತಮ್ಮ ಅಕ್ರಮ ಬೆಟ್ಟಿಂಗ್‍ಗೆ ಬಂಡವಾಳವನ್ನಾಗಿ ಮಾಡಿ ಕೊಳ್ಳುತ್ತಿರುವ ದಂಧೆಕೋರರು ಹಲವು ವರ್ಷದಿಂದ ತಮ್ಮ ಅಕ್ರಮ ಚಟುವಟಿಕೆ ಮುಂದುವರೆಸಿ ಯುವ ಪೀಳಿಗೆಯತ್ತ ಮುಷ್ಠಿ ಚಾಚಿದೆ. ವಿದ್ಯಾರ್ಥಿಗಳಿಂದ ಹಿಡಿದು ಬೆಟ್ಟಿಂಗ್ ದಂಧೆ ಪ್ರೇರೇಪಿಸುವ ಬೆಟ್ಟಿಂಗ್ ಏಜೆಂಟ್‍ಗಳು ವಿದ್ಯಾರ್ಥಿಗಳ ಪ್ರಾಣಕ್ಕೂ ಎರವಾಗಿದ್ದಾರೆ.

ಒಂದೂ ಪಂದ್ಯ ವೀಕ್ಷಿಸದ ಯುವಕರು ಇಂದು ಇದನ್ನು ತಮ್ಮ ಆದಾಯದ ಮೂಲ ಹಾಗೂ ಕೆಲವೇ ದಿನದಲ್ಲಿ ಶ್ರೀಮಂತರಾಗುವ ಭ್ರಮೆಗೆ ಬಿದ್ದು ತಮ್ಮ ತಂದೆ ತಾಯಿ ನೀಡಿದ ಇಂತಿಷ್ಟು ಹಣವನ್ನು ಬೆಟ್ಟಿಂಗ್‍ನಲ್ಲಿ ತೊಡಗಿಸುತ್ತಿದ್ದಾರೆ.

ಇನ್ನು ಕೆಲವು ವಿದ್ಯಾರ್ಥಿಗಳು ಸೋತ ನಂತರ ಮನೆಯಿಂದ ತಲೆಮರೆಸಿಕೊಳ್ಳುತ್ತಿದ್ದು, ಗೆದ್ದ ಮೇಲೆ ಇನ್ನೂ ಹೆಚ್ಚು ಸಂಪಾದಿಸಬೇಕು ಎಂಬ ಆಸೆಗೆ ಬಿದ್ದು ಮನೆಯಲ್ಲಿ ಸಿಗುವ ಬೈಕ್, ಸೈಕಲ್, ಮೊಬೈಲ್ ಒಡವೆಗಳನ್ನು ಕದ್ದು ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿದೆ.

ಹಾಸನ ನಗರದಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಅಲೂರು ತಾಲ್ಲೂಕಿನ ಯುವಕ ಲತೇಶ್‍ಕುಮಾರ್ ಕ್ರಿಕೆಟ್ ಬೆಟ್ಟಿಂಗ್ ಹಣ ನೀಡಲಾರದೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಂತಹ ಘಟನೆಗಳು ಜನರಲ್ಲಿ ಆತಂಕ ಹೆಚ್ಚಿಸಿದೆ. ಈ ಬೆಟ್ಟಿಂಗ್ ದಂಧೆ ಎಷ್ಟರ ಮಟ್ಟಿಗೆ ವ್ಯಾಪಿಸಿದೆ ಎಂದರೆ ಇದರ ಕಡಿವಾಣ ಅಷ್ಟು ಸುಲಭವಲ್ಲ ಎಂಬ ಮಟ್ಟಿಗೆ ಇಂದು ಬೆಳೆದು ನಿಂತಿದೆ.

ಈ ದಂಧೆಯಲ್ಲಿ ಸಿಲುಕುವ ಮಕ್ಕಳು ಹದಿ ಹರೆಯ ದವರಾ ಗಿದ್ದು ಇವರ ಮೇಲೆ ಯಾವುದೇ ರೀತಿಯ ಕೇಸ್ ದಾಖಲಿಸಿದರೆ ಅದು ಅವರ ಮುಂದಿನ ಶಿಕ್ಷಣಕ್ಕೆ ಹಾಗೂ ಉದ್ಯೋಗಕ್ಕೆ ತೊಡಕಾಗಲಿದೆ ಎಂಬ ಕಾರಣ ನೀಡಿ ಹಲವು ಪೋಷಕರು ಪೊಲೀಸರಿಗೆ ಮನವಿ ಮಾಡಿರುವುದರಿಂದ ಪ್ರಕರಣ ದಾಖಲಾಗದೆ ಮುಚ್ಚಿ ಹೋಗುತ್ತದೆ.

ಇನ್ನೂ ಕೆಲವು ಪ್ರಕರಣದ ಪ್ರಮುಖ ರೂವಾರಿಗಳಾದ ದಂಧೆಕೋರರು ಹಲವು ಪ್ರಭಾವಿ ವ್ಯಕ್ತಿಗಳ ಶಿಫಾರಸ್ಸನ್ನು ಬಳಸಿ ತಮ್ಮ ದಂಧೆಯನ್ನು ವಿಸ್ತರಿಸುತ್ತಲೇ ಇದ್ದಾರೆ. ಇನ್ನು ನಗರದಲ್ಲಿ ಹಾಗೂ ಜಿಲ್ಲೆಯಲ್ಲಿ ನಡೆಯುವ ಕೆಲವು ಬೆಟ್ಟಿಂಗ್ ಅಡ್ಡೆ ಮೇಲೆ ಪೊಲೀಸರ ದಾಳಿ ಕೇವಲ ಒಂದು ಎರಡು ದಿನಕ್ಕೆ ಸೀಮಿತವಾಗಿ ಇದಕ್ಕೆ ಪೂರ್ಣ ವಿರಾಮ ಹಾಕುವಲ್ಲಿ ಪೊಲೀಸರು ಸಹ ತಮ್ಮ ಅಸಹಾಯಕತೆ ತೋರುತ್ತಿದ್ದಾರೆ ಎಂಬ ದೂರುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಒಟ್ಟಾರೆ ಇನ್ನೂ ಒಂದೂವರೆ ತಿಂಗಳ ಕಾಲ ಐಪಿಎಲï ಪಂದ್ಯಾವಳಿ ಇದ್ದು ನಂತರ ವಿಶ್ವಕಪ್ ಕ್ರಿಕೆಟ್ ಪ್ರಾರಂಭವಾಗಲಿದೆ. ಈ ಅವಕಾಶವನ್ನು ಸಂಪೂರ್ಣವಾಗಿ ಉಪಯೋಗಿಸಿಕೊಳ್ಳುತ್ತಿರುವ ಬೆಟ್ಟಿಂಗ್ ದಂಧೆಕೊರರು ತಮ್ಮ ಚಟುವಟಿಕೆ ವಿಸ್ತರಿಸುತ್ತಿದ್ದಾರೆ.

ಕೂಡಲೇ ಈ ಬೆಟ್ಟಿಂಗ್ ದಂಧೆಯನ್ನು ನಿಯಂತ್ರಿಸಲು ರಾಜ್ಯ-ಕೇಂದ್ರ ಸರ್ಕಾರಗಳು ಹೆಚ್ಚಿನ ಕಾಳಜಿ ತೋರಬೇಕು ಹಾಗೂ ಪೊಲೀಸ್ ವ್ಯವಸ್ಥೆಯೂ ಬಿಗಿಯಾಗಬೇಕು ಎಂಬುದು ಹಲವು ಜನಪರ ಸಂಘಟನೆಗಳ ಹಾಗೂ ಸಾರ್ವಜನಿಕರ ಕಳಕಳಿಯಾಗಿದೆ.

– ಸಂತೋಷ್.ಸಿ.ಬಿ., ಹಾಸನ

Facebook Comments