ಮರಳುಗಾಡಿನಲ್ಲಿ ಐಪಿಎಲ್ ಬಿರುಗಾಳಿ

ಈ ಸುದ್ದಿಯನ್ನು ಶೇರ್ ಮಾಡಿ

ಕೊರೊನಾ ಆರ್ಭಟ ನಡುವೆಯೂ ಮರಳುಗಾಡಿನಲ್ಲಿ ಇಂದಿನಿಂದ ಐಪಿಎಲ್ ಬಿರುಗಾಳಿ ಆರಂಭಗೊಂಡಿದೆ. ಹಲವು ಪ್ರಥಮಗಳಿಗೆ ಕಾರಣವಾಗಿರುವ ಐಪಿಎಲ್13ನೆ ಆವೃತ್ತಿಯಲ್ಲಿ ಚಾಂಪಿಯನ್ಸ್ ಆಗಲು 8 ತಂಡಗಳು 53 ದಿನ ಜಿದ್ದಾಜಿದ್ದಿನ ಹೋರಾಟ ನಡೆಸಲಿದ್ದು ದೀಪಾವಳಿಯ ಸಡಗರದ ನಡುವೆಯೇ ನೂತನ ಚಾಂಪಿಯನ್ಸ್ ಯಾರಾಗುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ.

ಜೈವಿಕ ಸುರಕ್ಷತೆ ನಡುವೆಯೇ ನಡೆಯುವ ಈ ಬಾರಿ ಐಪಿಎಲ್ ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ವಿದೇಶದಲ್ಲಿ ನಡೆಯುತ್ತಿದೆ, ಮಾರ್ಚ್‍ನಲ್ಲಿ ನಡೆಯುವ ಪಂದ್ಯಾವಳಿಯು ಮೊದಲ ಬಾರಿಗೆ ಸೆಪ್ಟೆಂಬರ್‍ನಲ್ಲಿ ನಡೆಯುತ್ತಿದ್ದು, ಚೊಚ್ಚಲ ಐಪಿಎಲ್ ಚಾಂಪಿಯನ್ಸ್ ಆಗಲು ಆರ್‍ಸಿಬಿ, ಡೆಲ್ಲಿಕ್ಯಾಪಿಟಲ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್ ಕಾತರಿಸುತ್ತಿದೆ.

ಇಂದು ಆರಂಭಗೊಳ್ಳಲಿರುವ ಆರಂಭಿಕ ಪಂದ್ಯದಲ್ಲಿ ರೋಹಿತ್‍ಶರ್ಮಾ ಸಾರಥ್ಯದ ಮುಂಬೈ ಇಂಡಿಯನ್ಸ್ ಹಾಗೂ ಧೋನಿ ಸಾರಥ್ಯದ ಸಿಎಸ್‍ಕೆ ವಿರುದ್ಧ ಹೈವೋಲ್ಟೇಜ್ ಪಂದ್ಯ ಐಪಿಎಲ್ ರಂಗನ್ನು ಹೆಚ್ಚಿಸಿ ಪ್ರೇಕ್ಷಕರ ಮನ ಗೆಲ್ಲಲಿದ್ದಾರೆ.

# ಮುಂಬೈಗೆ ಬೆಸ ಸಂಖ್ಯೆ ಅದೃಷ್ಟ: 2013ರಲ್ಲಿ ಮೊದಲ ಬಾರಿಗೆ ಚಾಂಪಿಯನ್ಸ್ ಆದ ಪ್ರಸಕ್ತ ಐಪಿಎಲ್ ಚಾಂಪಿಯನ್ ಮುಂಬೈಇಂಡಿಯನ್ಸ್‍ಗೆ ಬೆಸೆ ಸಂಖ್ಯೆಯ ಅದೃಷ್ಟ ಇದೆ. ಒಂದು ವರ್ಷ ಬಿಟ್ಟು ಮತ್ತೊಂದು ವರ್ಷದಲ್ಲಿ ಚಾಂಪಿಯನ್ಸ್ ಆಗುವ ರೋಹಿತ್‍ಶರ್ಮಾ ನಾಯಕತ್ವದ ಮುಂಬೈ ಈ ಬಾರಿ ಚಾಂಪಿಯನ್ಸ್ ಆಗುವ ಮೂಲಕ ಆ ಸೂತ್ರದಿಂದ ಹೊರಬರಬೇಕಾಗಿದೆ.

ಮುಂಬೈನಲ್ಲಿ ರೋಹಿತ್‍ಶರ್ಮಾ, ಕೀರನ್‍ಪೋಲಾರ್ಡ್, ಹಾರ್ದಿಕ್‍ಪಾಂಡ್ಯರಂತಹ ಘಟಾನುಘಟಿ ಬ್ಯಾಟ್ಸ್‍ಮನ್‍ಗಳಿರುವುದರಿಂದ 5ನೆ ಬಾರಿ ಚಾಂಪಿಯನ್ಸ್ ಆಗುವ ಲಕ್ಷಣಗಳಿವೆ. ಆದರೆ ಕಳೆದ ಋತುವಿನಲ್ಲಿ 1 ರನ್‍ನಿಂದ ಗೆಲುವು ತಂದುಕೊಟ್ಟ ಮಾಲಿಂಗ ಅನುಪಸ್ಥಿತಿ ಕಾಡುತ್ತಿದೆ.

# 4ನೇ ಬಾರಿಗೆ ಚಾಂಪಿಯನ್ಸ್ ಆಗ್ತಾರಾ ಧೋನಿ..? ಕಳೆದ ಬಾರಿ ರನ್ನರ್‍ಅಪ್ ಆಗಿರುವ ಧೋನಿ ನಾಯಕತ್ವದ ಸಿಎಸ್‍ಕೆ ಐಪಿಎಲ್ ಇತಿಹಾಸದಲ್ಲಿ 3 ಬಾರಿ ಚಾಂಪಿಯನ್ಸ್ ಆಗಿದ್ದು ಈಗ 4ನೆ ಬಾರಿಗೆ ಚಾಂಪಿಯನ್ಸ್ ಆಗುವತ್ತ ಚಿತ್ತ ಹರಿಸಿದೆ. ಮಿಸ್ಟರ್ ಐಪಿಎಲ್ ಎಂದೇ ಖ್ಯಾತರಾಗಿರುವ ರೈನಾ ಹಾಗೂ ಖ್ಯಾತ ಸ್ಪಿನ್ನರ್À ಹರ್ಭಜನ್‍ಸಿಂಗ್‍ರ ಗೈರುಹಾಜರಿ ಎದ್ದುಕಂಡರೂ ತಂಡದಲ್ಲಿ ಬ್ರಾವೋ, ವಾಟ್ಸನ್, ಡ್ಲುಪೆಸ್ಲಿಸ್, ಇಮ್ರಾನ್ ತಾಹೀರ್‍ರಂತಹ ಆಟಗಾರರು ಆ ಕೊರತೆಯನ್ನು ನೀಗಲಿದ್ದಾರೆ. ವೇಗದ ಬೌಲಿಂಗ್ ಪಡೆಯನ್ನು ನೆಚ್ಚಿಕೊಂಡಿರುವ ತಂಡದಲ್ಲಿ ಸ್ಪಿನ್ನರ್‍ಗಳ ಕೊರತೆ.

# ಚೊಚ್ಚಲ ಚಾಂಪಿಯನ್ಸ್ ಆಗುತ್ತಾ ಆರ್‍ಸಿಬಿ..? ಪ್ರತಿ ಬಾರಿ ಐಪಿಎಲ್ ಆವೃತ್ತಿ ಆರಂಭ ವಾದಾಗಲೂ ಈ ಬಾರಿ ಕಪ್ ನಮ್ದೆ ಎಂದು ಹೇಳುವ ವಿರಾಟ್ ಕೊಹ್ಲಿ ಸಾರಥ್ಯದ ಆರ್‍ಸಿಬಿ ಮೂರು ಬಾರಿ ರನ್ನರ್‍ಅಪ್‍ಗೆ ತೃಪ್ತಿಪಟ್ಟುಕೊಂಡಿದೆ. ಈ ಬಾರಿ ಚಾಂಪಿಯನ್ಸ್ ಆಗುವ ಹಾಟ್‍ಫೇವರಿಟ್ ತಂಡವಾಗಿರುವ ಆರ್‍ಸಿಬಿಗೆ ಡಿವಿಲಿಯರ್ಸ್, ವಿರಾಟ್ ಕೊಹ್ಲಿ, ಕ್ರಿಸ್‍ಮೋರಿಸ್, ಡೇಲ್‍ಸ್ಟೇನ್, ಆರೋನ್‍ಫಿಂಚ್‍ರಂತಹ ಸ್ಟಾರ್ ಆಟಗಾರರು ವರದಾನವಾಗಿದ್ದು ಚೊಚ್ಚಲ ವಿಶ್ವಕಪ್ ಗೆಲ್ಲುವ ಲಕ್ಷಣಗಳು ಗೋಚರಿಸಿವೆಯಾದರೂ ಡೆತ್ ಓವರ್ ಸಮಸ್ಯೆ ಕಾಡಿದರೆ ಪಂದ್ಯ ಸೋಲುವುದು ಖಚಿತ.

# ಸನ್‍ರೈಸರ್ಸ್‍ಗೆ ಚಾಂಪಿಯನ್ಸ್ ಆಗುವ ಕನಸು: ಐಪಿಎಲ್‍ನ ಚೊಚ್ಚಲ ಋತುವಿನಲ್ಲಿ ಅಂತಿಮ ಸ್ಥಾನ ಪಡೆದರೂ, ನಂತರ ಋತುವಿನಲ್ಲಿ ಚಾಂಪಿಯನ್ಸ್ ಆಗಿದ್ದ ಡೆಕ್ಕನ್‍ಚಾರ್ಜರ್ಸ್, ನಂತರ ಸನ್‍ರೈಸರ್ಸ್ ಹೈದ್ರಾಬಾದ್ ಆಗಿ ಬದಲಾವಣೆಗೊಂಡು 2016ರಲ್ಲಿ ಮತ್ತೊಮ್ಮೆ ಚಾಂಪಿಯನ್ಸ್ ಆಗಿದ್ದು , 2020ರ ಐಪಿಎಲ್‍ನಲ್ಲೂ ಮತ್ತೊಮ್ಮೆ ಚಾಂಪಿಯನ್ಸ್ ಆಗುವ ಕನಸು ಕಂಡಿದೆ. ಅದಕ್ಕೆ ತಕ್ಕಂತೆ ಈ ತಂಡದಲ್ಲಿ ಚುಟುಕು ಕ್ರಿಕೆಟ್‍ಗೆ ಹೇಳಿಮಾಡಿಸಿದಂತಹ ಡೇವಿಡ್‍ವಾರ್ನರ್, ಬ್ಯಾರಿಸ್ಟೋವ್, ವಿಲಿಯಮ್ಸ್, ಮನೀಷ್‍ಪಾಂಡೆಯಂತಹ ಸ್ಫೋಟಕ ಆಟಗಾರರು, ರನ್ ದಾಹಕ್ಕೆ ಕಡಿವಾಣ ಹಾಕಲು ಭುವನೇಶ್ವರ್‍ಕುಮಾರ್, ರಶೀದ್‍ಖಾನ್‍ರಂತಹ ಸ್ಟಾರ್ ಆಟಗಾರರು ಇರುವುದರಿಂದ ಎಸ್‍ಆರ್‍ಎಚ್‍ಗೆ ಈ ಬಾರಿ ಚಾಂಪಿಯನ್ಸ್ ಆಗುವ ಅದೃಷ್ಟವಿದೆ. ಹೆಚ್ಚಾಗಿ ವಿದೇಶಿ ಆಟಗಾರರೇ ಇರುವುದು.

# ಕಿಂಗ್ಸ್‍ಗೆ `ರಾಹು’ಲ್ ಬಲ: ಕನ್ನಡ ತಂಡವೆಂದೇ ಬಿಂಬಿಸಿ ಕೊಂಡಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ಚೊಚ್ಚಲ ಐಪಿಎಲ್ ಚಾಂಪಿಯನ್ಸ್ ಆಗುವ ಕನಸು ಕಾಣುತ್ತಿದೆ. ಈ ಬಾರಿ ಈ ತಂಡವನ್ನು ಕನ್ನಡಿಗ ಕೆ.ಎಲ್.ರಾಹುಲ್ ಪ್ರತಿನಿಧಿಸುತ್ತಿದ್ದು, ಮಯಾಂಕ್, ಕೃಷ್ಣಪ್ಪಗೌತಮ್, ಕರುಣ್‍ನಾಯರ್ ಸ್ಥಾನಪಡೆದಿದ್ದಾರೆ, ಕ್ರಿಸ್‍ಗೇಲ್, ಮಹಮದ್‍ಶಮಿರಂತಹ ಅನುಭವಿ ಆಟಗಾರರನ್ನು ಒಳಗೊಂಡಿರುವ ತಂಡವು ಚಾಂಪಿಯನ್ಸ್ ಆಗುವತ್ತ ಚಿತ್ತ ಹರಿಸಿದ್ದು, ಕನ್ನಡಿಗ ಅನಿಲ್‍ಕುಂಬ್ಳೆ ನಾಯಕತ್ವದಲ್ಲಿ ಈ ಬಾರಿ ಕಿಂಗ್ಸ್ ಚಾಂಪಿಯನ್ಸ್ ಆಗಿ ಕನ್ನಡಿಗರ ಹೆಮ್ಮೆ ಹೆಚ್ಚಿಸಲಿ ಎಂಬುದು ನಮ್ಮ ಹಾರೈಕೆಯಾದರೂ ತಂಡದಲ್ಲಿರುವ ಸ್ಟಾರ್ ಆಟಗಾರರ ವೈಫಲ್ಯತೆ ಎದ್ದು ಕಾಣುತ್ತಿದೆ.

# ಕೆಕೆಆರ್‍ಗೆ ಒಲಿಯುವುದೇ ಅದೃಷ್ಟ:  ಆ್ಯಂಡ್ರಿ ರಸಲ್, ಸುನೀಲ್‍ನರೈನ್‍ರಂತಹ ಸ್ಟಾರ್ ಆಟಗಾರರ ಬಲವನ್ನೇ ಹೊಂದಿದ್ದರೂ 2012, 2014ರ ಚಾಂಪಿ ಯನ್ಸ್ ಆಗಿರುವ ಕೆಕೆಆರ್ ಫೈನಲ್ ಹಂತಕ್ಕೆ ತಲುಪಲು ಹೆಣಗಾಡುತ್ತಿದ್ದು, ದಿನೇಶ್‍ಕಾರ್ತಿಕ್ ಸಾರಥ್ಯದಲ್ಲಿ ಈ ಬಾರಿ ಸ್ಫೋಟಕ ಬ್ಯಾಟ್ಸ್‍ಮನ್‍ಗಳು, ಸ್ಟಾರ್ ಬೌಲರ್‍ಗಳನ್ನು ಒಳಗೊಂಡಿರುವುದರಿಂದ ಮತ್ತೊಮ್ಮೆ ಚಾಂಪಿಯನ್ಸ್ ಆಗುವ ಕನಸನ್ನು ಕಾಣುತ್ತಿದ್ದು ಕಪ್ ಗೆಲ್ಲುವ ಅದೃಷ್ಟ ಒಲಿಯುವುದೇ ಎಂಬುದನ್ನು ಕಾದುನೋಡಬೇಕು.ಸಿಪಿಎಲ್‍ನಲ್ಲಿ ರಸಲ್, ನರೇನ್‍ರ ವೈಫಲ್ಯತೆ.

# ಶ್ರೇಯಾಸ್‍ಗೆ ದೊರೆಯುವುದೇ ಶ್ರೇಯಾ..? ಐಪಿಎಲ್‍ನಲ್ಲಿ ಅತ್ಯಂತ ಕಿರಿಯ ನಾಯಕ ನೆಂದೇ ಬಿಂಬಿಸಿಕೊಂಡಿ ರುವ ಶ್ರೇಯಾಸ್ ಐಯ್ಯರ್‍ಗೆ ಈ ಬಾರಿ ಚಾಂಪಿಯನ್ಸ್ ನಾಯಕ ಎಂದು ಕರೆಸಿಕೊಳ್ಳುವ ಹಂಬಲವಿದ್ದು, ಅವರ ಕನಸನ್ನು ನನಸು ಮಾಡುವಂತಹ ಸ್ಟಾರ್ ಆಟಗಾರರಾದ ಅಜೆಂಕ್ಯಾ ರಹಾನೆ, ಹಿಟ್‍ಮೇರ್, ಆಲಕ್ಸ್ ಕ್ಯಾರಿ, ರವಿಚಂದ್ರನ್ ಅಶ್ವಿನ್, ಶಿಖರ್‍ಧವನ್‍ರ ಬಲವಿದ್ದು ಎದುರಾಳಿ ತಂಡಗಳಿಗೆ ಸೋಲುಉಣಿಸಿ ಫೈನಲ್ಸ್‍ಗೇರಿ ಕಪ್ ಗೆಲ್ಲುವ ಕಾತರದಲ್ಲಿದೆ. ಸ್ಪಿನ್ನರ್‍ಗಳ ಕೊರತೆ.

# ರಾಯಲ್ಸ್‍ಗೆ ಸ್ಟಾರ್ ಆಟಗಾರರ ಆಸರೆ: ಚೊಚ್ಚಲ ಐಪಿಎಲ್ ಚಾಂಪಿಯನ್ಸ್ ಆಗಿರುವ ರಾಜಸ್ಥಾನ್ ರಾಯಲ್ಸ್ ತದನಂತರ ಫೈನಲ್ಸ್‍ಗೇರಲು ಸಾಧ್ಯವಾಗದಿದ್ದರೂ ಈ ಬಾರಿ ಉತ್ತಮ ಪ್ರದರ್ಶನ ತೋರಿ ಕಪ್ ಗೆಲ್ಲುವ ಹುಮ್ಮಸ್ಸಿನಲ್ಲಿದೆ. ತಂಡದ ನಾಯಕ ಸ್ಟೀವ್‍ಸ್ಮಿತ್‍ರ ಕಪ್ ಗೆಲ್ಲುವ ಆಸೆಯನ್ನು ಜೀವಂತವಾಗಿಸಲು ಜೋಸ್‍ಬಟ್ಲರ್, ಜೋಫ್ರಾಅರ್ಚರ್, ರಾಬಿನ್‍ಉತ್ತಪ್ಪ, ಡೇವಿಡ್‍ಮಿಲ್ಲರ್‍ರ ಆಸರೆ ಇದೆ ಆದರೆ ಬೆನ್‍ಸ್ಟೋಕ್‍ರ ಅನುಪಸ್ಥಿತಿ ತಂಡವನ್ನು ಕಾಡಲಿದೆ.

ಇಂದಿನಿಂದ ಆರಂಭಗೊಳ್ಳುವ ಐಪಿಎಲ್ 53 ದಿನಗಳ ಕಾಲ ನಡೆಯಲಿದ್ದು ಚಾಂಪಿಯನ್ಸ್ ಪಟ್ಟ ಅಲಂಕರಿಸಲು ತಂಡದ ಭವಿಷ್ಯ ತಿಳಿಯಲು ನವೆಂಬರ್ 10ರವರೆಗೂ ಕಾಯಲೇಬೇಕು.

# ರನ್ ಸರದಾರರು: ಚುಟುಕು ಮಾದರಿಯಲ್ಲಿ ಸ್ಫೋಟಕ ರನ್‍ಗಳನ್ನು ಹರಿಸುವ ಆಟಗಾರರಿಗೆ ಮನ್ನಣೆ ಹಾಕುವುದು ಸಹಜ. ಟೀಂ ಇಂಡಿಯಾ ನಾಯಕ ವಿರಾಟ್‍ಕೊಹ್ಲಿ ಸ್ಪೋಟಕ ಬ್ಯಾಟಿಂಗ್‍ಗೆ ಖ್ಯಾತರಾದವರು, ಆರ್‍ಸಿಬಿ ತಂಡದ ನಾಯಕತ್ವದ ಜೊತೆಗೆ ತಂಡಕ್ಕೆ ಉಪಯುಕ್ತ ರನ್ ಕಾಣಿಕೆಯನ್ನು ನೀಡಿದ್ದರಿಂದಲೇ ಐಪಿಎಲ್‍ನ ಇತಿಹಾಸದಲ್ಲಿ ಟಾಪ್ 1 ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. 2016ರ ಆವೃತ್ತಿಯಲ್ಲಿ 973 ರನ್‍ಗಳನ್ನು ಕಲೆಹಾಕಿದ ಕೊಹ್ಲಿ, ಇದುವರೆಗೂ 5412 ರನ್‍ಗಳ ಕಾಣಿಕೆ ನೀಡಿದ್ದಾರೆ.

ಕೊಹ್ಲಿ ನಂತರ ಸ್ಥಾನದಲ್ಲಿ ಮಿಸ್ಟರ್ ಐಪಿಎಲ್ ಖ್ಯಾತಿಯ ಸುರೇಶ್‍ರೈನಾ ( 5368ರನ್, 193 ಪಂದ್ಯ), ಐಪಿಎಲ್ ಚಾಂಪಿಯನ್ ನಾಯಕ ರೋಹಿತ್‍ಶರ್ಮಾ( 4898ರನ್, 188 ಪಂದ್ಯ), ಡೇವಿಡ್ ವಾರ್ನರ್ (4706 ರನ್, 126 ಪಂದ್ಯ), ಶಿಖರ್‍ಧವನ್ (4579, 159 ಪಂದ್ಯ).

# ಬೌಲಿಂಗ್ ಮಾಂತ್ರಿಕರು  ಟ್ವೆಂಟಿ -20, ಐಪಿಎಲ್‍ನಂತಹ ಚುಟುಕು ಕ್ರಿಕೆಟ್‍ನಲ್ಲಿ ಬ್ಯಾಟ್ಸ್‍ಮನ್‍ಗಳ ವೈಭವ ಮೇಳೈಸುವುದೇ ಹೆಚ್ಚು, ಇದರ ನಡುವೆಯೂ ಘಟಾನುಘಟಿ ಬ್ಯಾಟ್ಸ್‍ಮನ್‍ಗಳಿಗೆ ಕಡಿವಾಣ ಹಾಕಿ ತಂಡಕ್ಕೆ ಗೆಲುವು ತಂದುಕೊಟ್ಟ ಬೌಲರ್‍ಗಳಿಗೇನೂ ಕಡಿಮೆ ಇಲ್ಲ, ಕಳೆದ ಐಪಿಎಲ್ ಋತುವಿನ ಅಂತಿಮ ಓವರ್‍ನಲ್ಲಿ ಉತ್ತಮ ಬೌಲಿಂಗ್ ಮಾಡಿ 1 ರನ್‍ನಿಂದ ಮುಂಬೈ ಇಂಡಿಯನ್ಸ್ ತಂಡವನ್ನು ಚಾಂಪಿಯನ್ಸ್ ಆಗಿಸಿದ್ದ ಕೀರ್ತಿ ಶ್ರೀಲಂಕಾದ ವೇಗದ ಬೌಲರ್ ಲಸಿತ್ ಮಾಲಿಂಗಗೆ ದೊರೆಯುತ್ತದೆ, ಆದ್ದರಿಂದಲೇ ಅವರು ಐಪಿಎಲ್‍ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಗುರತಿಸಿಕೊಂಡಿದ್ದಾರೆ.

ಲಸಿತ್ ಮಾಲಿಂಗ 122 ಐಪಿಎಲ್ ಪಂದ್ಯಗಳಿಂದ 170 ವಿಕೆಟ್ ಕಬಳಿಸಿದ್ದರೆ, ಅಮಿತ್‍ಮಿಶ್ರಾ(157 ವಿಕೆಟ್), ಹರ್ಭಜನ್‍ಸಿಂಗ್, ಪಿಯೂಸ್ ಚಾವ್ಲಾ (150 ವಿಕೆಟ್),ಡ್ವೇನ್ ಬ್ರಾವೋ (147 ವಿಕೆಟ್) ಕೆಡವಿದ್ದಾರೆ.

# ದುಬಾರಿ ಆಟಗಾರರು ಐಪಿಎಲ್‍ನಲ್ಲಿ ಸ್ಫೋಟಕ ಆಟಗಾರರಿಗೆ ಮಣೆ ಹಾಕುವುದೇ ಹೆಚ್ಚು ಆದ್ದರಿಂದಲೇ ತಂಡವನ್ನು ಮುನ್ನಡೆಸುವ ನಾಯಕನಿಗಿಂತ ಆಕ್ರಮಣಕಾರಿ ಆಟಗಾರರಿಗೇ ಮಣೆ ಹಚ್ಚಿದ್ದಾರೆ. 2007ರ ಚುಟುಕು ವಿಶ್ವಕಪ್‍ನಲ್ಲಿ ಸಿಕ್ಸರ್‍ಗಳ ಸುರಿಮಳೆ ಸುರಿಸಿದ್ದರಿಂದಲೇ ಯುವರಾಜ್‍ಸಿಂಗ್‍ಗೆ 2014ರಲ್ಲಿ 14 ಕೋಟಿ ರೂ.ಗಳನ್ನು ವಹಿಸಿ ಆರ್‍ಸಿಬಿ ತಂಡಕ್ಕೆ ಆಯ್ಕೆ ಮಾಡಿಕೊಳ್ಳಲಾಗಿತ್ತು.

ಇದು ಆಟಗಾರನೊಬ್ಬನಿಗೆ ನೀಡಿದ್ದ ಅತಿ ಹೆಚ್ಚು ಸಂಭಾವನೆಯಾಗಿದೆ. 2016ರಲ್ಲೂ ಡೆಲ್ಲಿಡೇರ್‍ಡೆವಿಲ್ಸ್ 16 ಕೋಟಿ ವ್ಯಯಿಸಿ ಯುವರಾಜ್‍ರನ್ನು ಬಿಕರಿ ಮಾಡಿಕೊಂಡಿತ್ತು. 2016ರಲ್ಲಿ ಆರ್‍ಸಿಬಿ ಪಾಲಾದ ಶೇನ್ ವಾಟ್ಸನ್ (9.5 ಕೋಟಿ), 2017ರಲ್ಲಿ ಬೆನ್‍ಸ್ಟೋಕ್ಸ್(14.5 ಕೋಟಿ), 2018ರಲ್ಲೂ 12.5 ಕೋಟಿ ವ್ಯಯಿಸಿ ರಾಜಸ್ಥಾನ್ ರಾಯಲ್ಸ್ ಸ್ಟ್ರೋಕ್ಸ್ ಅನ್ನು ತಮ್ಮಲ್ಲೇ ಉಳಿಸಿಕೊಂಡಿತು. ಈ ಬಾರಿಯೂ ಆಸ್ಟ್ರೇಲಿಯಾ ವೇಗಿ ಪ್ಯಾಟ್ ಕಮ್ಮಿನ್ಸ್‍ಗೆ 15.5 ಕೋಟಿ ನೀಡಿ ಕೆಕೆಆರ್ ತನ್ನ ಬಳಗಕ್ಕೆ ಸೇರಿಸಿಕೊಂಡಿದೆ.

Facebook Comments