ಮಹಿಳೆಯರ ರಕ್ಷಣೆಗೆ ಹೆಚ್ಚು ಆದ್ಯತೆ : ನಗರ ಪೊಲೀಸ್ ಆಯುಕ್ತ ರಾವ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.6- ಮಹಿಳೆಯರಿಗೆ ರಕ್ಷಣೆ ನೀಡದೇ ಇದ್ದರೆ ಅದನ್ನು ನಾಗರಿಕ ಸಮಾಜ ಎಂದು ಕರೆಯಲು ಸಾಧ್ಯವಿಲ್ಲ. ಹಾಗಾಗಿ ಬೆಂಗಳೂರು ಪೊಲೀಸರು ಮಹಿಳೆಯರ ರಕ್ಷಣೆಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್‍ರಾವ್ ಹೇಳಿದರು. ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿಂದು ಏರ್ಪಡಿಸಲಾಗಿದ್ದ ಸಮುದಾಯ ಪೊಲೀಸಿಂಗ್ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಮಹಿಳೆಯರ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು, ಮಹಿಳೆಯರನ್ನು ಗೌರವಿಸಬೇಕು ಎಂದರು.

ಮಹಿಳೆಯರ ರಕ್ಷಣೆಗೆ ಸಮಾಜ ಕೂಡ ಕೈ ಜೋಡಿಸಬೇಕು. ಬೀದಿ ದೀಪ, ಸಾರ್ವಜನಿಕ ಸಂಪರ್ಕ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಗಮನ ಹರಿಸಬೇಕೆಂದು ಮನವಿ ಮಾಡಿದರು. ಜರ್ಮನ್‍ನ ಸಂಸದರ ನಿಯೋಗ ಇಂದು ಬೆಂಗಳೂರಿಗೆ ಆಗಮಿಸಿದ್ದು, ಮಹಿಳೆಯರ ಸುರಕ್ಷತೆ ಬಗ್ಗೆ ಸಮಾಲೋಚನೆ ನಡೆಸಿದೆ. ಅಲ್ಲಿ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ವಿವರಣೆ ನೀಡಿದೆ. ನಾವು ನಮ್ಮ ಅನುಭವಗಳನ್ನು ಹಂಚಿಕೊಂಡಿದ್ದೇವೆ ಎಂದು ಹೇಳಿದರು.

ರಾ ಸಂಸ್ಥೆಯ ಮಾಜಿ ಅಧಿಕಾರಿ ಪಿ.ಕೆ.ಹಾರ್ಮಿಸ್ ತಾರಕನ್ ಮಾತನಾಡಿ, ಅಪರಾಧ ತಡೆಗೆ ಹೆಚ್ಚಿನ ಆದ್ಯತೆ ಕೊಡಬೇಕು. ಹಾಗೆಯೇ ಅಪರಾಧಕ್ಕೆ ಬಲಿಯಾದವರಿಗೆ ಮತ್ತು ಅವರ ಕುಟುಂಬಕ್ಕೂ ರಕ್ಷಣೆ ನೀಡಬೇಕು ಎಂದರು. ಜನಸಂಖ್ಯೆಗೆ ಅನುಗುಣವಾಗಿ ಪೊಲೀಸರನ್ನು ನಿಯೋಜಿಸುವಲ್ಲಿ ಭಾರತ ಹಿಂದೆ ಬಿದ್ದಿದೆ. ಸೌಲಭ್ಯಗಳು ಇಲ್ಲ. ರಕ್ಷಣೆ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದು ಸರಿಯಲ್ಲ ಎಂದು ಹೇಳಿದರು.

ನಿವೃತ್ತ ಡಿಜಿಪಿ ಡಾ.ಎಸ್.ಟಿ.ರಮೇಶ್ ಮಾತನಾಡಿ, ಯಾವುದೇ ಅತ್ಯಾಚಾರ ಪ್ರಕರಣ ನಡೆದಾಗ ಆರಂಭದಲ್ಲಿ ಬಹಳಷ್ಟು ಜನ ಜೋರು ಗಲಾಟೆ ಮಾಡುತ್ತಾರೆ. ಆನಂತರ ಎಲ್ಲರೂ ಮರೆತು ಹೋಗುತ್ತಾರೆ. ಪೊಲೀಸರು, ನ್ಯಾಯಾಂಗ, ಮಾಧ್ಯಮ, ಸರ್ಕಾರ ಎಲ್ಲವೂ ಘಟನೆಯನ್ನು ಮರೆತು ತಮ್ಮ ಪಾಡಿಗೆ ತಾವು ಬೇರೆ ಕೆಲಸದತ್ತ ಗಮನ ಹರಿಸುತ್ತಾರೆ. ಮಹಿಳೆಯರ ಸುರಕ್ಷತೆ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು. ಸೌಲಭ್ಯಗಳು ಇಲ್ಲ ಎಂಬ ನೆಪಗಳನ್ನು ಹೇಳಬಾರದು. ವ್ಯವಸ್ಥೆ ಸರಿಯಿಲ್ಲ ಎಂಬ ಉಡಾಫೆ ತನವೂ ಬೇಡ ಎಂದು ಹೇಳಿದರು.

ಜರ್ಮನ್‍ನ ಸಂಸದರ ನಿಯೋಗದ ಮುಖ್ಯಸ್ಥ ವೋಲ್ಕರ್ ಪ್ಲಾನ್ ಮಾತನಾಡಿ, ನಾವು ಬೆಂಗಳೂರಿಗೆ ಬಂದಿದ್ದು ಬಹಳಷ್ಟು ಖುಷಿಯಾಗಿದೆ. ಇಲ್ಲಿನ ವ್ಯವಸ್ಥೆಗಳ ಬಗ್ಗೆ ತಿಳಿದುಕೊಂಡಿದ್ದೇವೆ. ನಮ್ಮ ಅನುಭವಗಳನ್ನು ಹಂಚಿಕೊಂಡಿದ್ದೇವೆ ಎಂದು ಹರ್ಷ ವ್ಯಕ್ತಪಡಿಸಿದರು. ಜರ್ಮನ್ ಸಂಸದರಾದ ಡಾ.ಜಾರ್ಜ್‍ಕಿಪೆಲ್, ಡಾ.ಕಾಲೂಸ್‍ಪೀಠರ್, ಹೆಲಿನ್‍ವಿವರಿನ್ ಸೋಮರ್, ಸ್ಟೀಫನ್ ಕ್ಯೂಟ್ಯೂವರ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

Facebook Comments