ಕಡಾಡಿ ಸೇವೆಗೆ ಒಲಿದ ರಾಜ್ಯಸಭೆ ಟಿಕೆಟ್

ಈ ಸುದ್ದಿಯನ್ನು ಶೇರ್ ಮಾಡಿ

ಹುಬ್ಬಳ್ಳಿ, :  ಎರಡು ರಾಜ್ಯಸಭಾ ಸ್ಥಾನಗಳ ಮೇಲೆ ಬಿಜೆಪಿಯ ಘಟಾನುಘಟಿಗಳೇ ಕಣ್ಣಿಟ್ಟಿದ್ದರೂ ಪಕ್ಷದ ಹೈಕಮಾಂಡ್ ಆರ್‍ಎಸ್‍ಎಸ್ ಮೂಲದ ಈರಣ್ಣ ಕಡಾಡಿ ಅವರಿಗೆ ಟಿಕೆಟ್ ನೀಡುವ ಮೂಲಕ ಎಲ್ಲರ ಉಬ್ಬೇರಿಸುವಂತೆ ಮಾಡಿತ್ತು.

ಇದು ಆಶ್ಚರ್ಯವಾದರೂ ಕಡಾಡಿ ಮತ್ತು ಗಸ್ತಿ ಅವರು ಪಕ್ಷದ ಶಿಸ್ತಿನ ಸಿಪಾಯಿಗಳಾಗಿದ್ದರಿಂದಲೇ ಅವರಿಗೆ ಈ ಅದೃಷ್ಟ ಒಲಿದು ಬಂದಿರುವುದು. ಮೂಲತಃ ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಕಲ್ಲೊಳ್ಳಿ ಗ್ರಾಮದವರಾದ ಈರಣ್ಣ ಕಡಾಡಿ ಅವರು 1989ರಿಂದಲೂ ಬಿಜೆಪಿ ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತರಾಗಿದ್ದರು.

ಅರಭಾವಿ ಕ್ಷೇತ್ರದ ಬಿಜೆಪಿ ಯುವಮೋರ್ಚಾ ಅಧ್ಯಕ್ಷರಾಗಿ ರಾಜಕೀಯ ಜೀವನ ಪ್ರಾರಂಭಿಸಿದ ಅವರು, ಗೋಕಾಕ್ ತಾಲೂಕು ಬಿಜೆಪಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅರಬಾವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಕೌಜಲಗಿ ವಿರುದ್ಧ ಪರಾಭವಗೊಂಡಿದ್ದ ಕಡಾಡಿ ಅವರು ನಂತರ ಪಕ್ಷಕ್ಕಾಗಿ ತಮ್ಮ ಜೀವವನ್ನೇ ಮುಡುಪಾಗಿಟ್ಟಿದ್ದರು.

2004ರಲ್ಲಿ ಬೆಳಗಾವಿ ಗ್ರಾಮೀಣ ಘಟಕದ ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದರು. 2010ರಲ್ಲಿ ಬೆಳಗಾವಿ ಜಿಪಂ ಅಧ್ಯಕ್ಷರಾಗಿದ್ದರು. ಬಿಜೆಪಿ ರಾಜ್ಯ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಸದ್ಯ ಈರಣ್ಣ ಕಡಾಡಿ ಅವರು ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ವಿಜಯಪುರ, ಬೆಳಗಾವಿ ನಗರ, ಬೆಳಗಾವಿ ಗ್ರಾಮೀಣ ಭಾಗದ ಬಿಜೆಪಿ ವಿಭಾಗೀಯ ಪ್ರಭಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಪಕ್ಷ ಸಂಘಟನೆಯಲ್ಲಿ ತಮ್ಮದೇ ಛಾಪು ಮೂಡಿಸಿರುವ ಈರಣ್ಣ ಕಡಾಡಿಯವರಿಗೆ ಪಕ್ಷದ ಹೈಕಮಾಂಡ್ ಮಣೆ ಹಾಕುವ ಮೂಲಕ ಸಂಘಟನೆಗೆ ಮತ್ತಷ್ಟು ಬಲ ನೀಡಿದೆಯಲ್ಲದೆ ಸಾಮಾನ್ಯ ಕಾರ್ಯಕರ್ತನನ್ನು ಪಕ್ಷ ಎಂದಿಗೂ ಕೈ ಬಿಡದು ಎಂಬ ಸಂದೇಶವನ್ನು ರವಾನಿಸಿದೆ.

Facebook Comments