ಐಸಿಸ್ ಜತೆ ಸಂಪರ್ಕ : ಕರ್ನಾಟಕ ಸೇರಿ ವಿವಿಧೆಡೆ 122 ಆರೋಪಿಗಳ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಸೆ.16-ದಕ್ಷಿಣ ಭಾರತದ ರಾಜ್ಯಗಳು ಸೇರಿದಂತೆ ಅನೇಕ ರಾಜ್ಯಗಳಲ್ಲಿ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ(ಐಸಿಸ್) ಉಗ್ರಗಾಮಿ ಸಂಘಟನೆಗಳು ಸಕ್ರಿಯವಾಗಿದೆ ಎಂಬುದನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ.

ಸಂಸತ್‍ನ ಮುಂಗಾರು ಅಧಿವೇಶನದ 3ನೇ ದಿನವಾದ ಪ್ರಶ್ನೋತ್ತರ ಕಲಾಪದಲ್ಲಿ ಸಚಿವರ ಪ್ರಶ್ನೆಗಳಿಗೆ ಉತ್ತರಿಸಿದ ಗೃಹಖಾತೆ ರಾಜ್ಯ ಸಚಿವ ಕೃಷ್ಣಾರೆಡ್ಡಿ ಕರ್ನಾಟಕ, ಕೇರಳಾ, ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡಿನಲ್ಲಿ ಐಸಿಸ್ ಉಗ್ರಗಾಮಿ ಸಂಘಟನೆಗೆ ಬೆಂಬಲ ನೀಡಿದ ಒಟ್ಟು 17 ಪ್ರಕರಣಗಳು ದಾಖಲಾಗಿದ್ದು,

122 ಜನರನ್ನು ಬಂಧಿಸಲಾಗಿದೆ ಎಂದು ಹೇಳಿದರು. ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳ ಯುವಕರು ಐಸಿಸ್ ಉಗ್ರಗಾಮಿ ಸಂಘಟನೆಗಳನ್ನು ಸೇರುತ್ತಿರುವ ಮತ್ತು ಅದರೊಂದಿಗೆ ಸಂಪರ್ಕ ಹೊಂದಿರುವ ಪ್ರಕರಣಗಳು ಕೇಂದ್ರ ಸರ್ಕಾರದ ಗಮನಕ್ಕೆ ಬಂದಿದೆ.

ಈ ಬಗ್ಗೆ ಎನ್‍ಐಎ ತನಿಖೆ ತೀವ್ರಗೊಳಿಸಿದೆ ಎಂದು ರೆಡ್ಡಿ ತಿಳಿಸಿದರು.  ಕೇರಳ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಬಿಹಾರ, ಉತ್ತರಪ್ರದೇಶ, ಪಶ್ಚಿಮ ಬಂಗಾಳ, ರಾಜಸ್ಥಾನ ಹಾಗೂ ಜಮ್ಮುಕಾಶ್ಮೀರಗಳಲ್ಲಿ ಐಸಿಸ್ ಉಗ್ರಗಾಮಿ ಸಂಘಟನೆಗಳು ಸಕ್ರಿಯವಾಗಿದೆ. ಇವುಗಳ ವಿರುದ್ದ ಅಗತ್ಯವಾದ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

ಚೀನಾ ಬೇಹುಗಾರಿಕೆ ಪ್ರತಿಧ್ವನಿ:  ಸಂಸತ್ ಮೇಲ್ಮನೆ ಕಲಾಪದ ಶೂನ್ಯವೇಳೆಯಲ್ಲಿ ಕಾಂಗ್ರೆಸ್ ಸದಸ್ಯರು ಭಾರತದ 1350 ಗಣ್ಯ ವ್ಯಕ್ತಿಗಳ ಬಗ್ಗೆ ಬೇಹುಗಾರಿಕೆ ನಡೆಸುತ್ತಿರುವ ಆತಂಕಕಾರಿ ಸಂಗತಿ ಪ್ರತಿಧ್ವನಿಸಿತು.  ಕಾಂಗ್ರೆಸ್ ಸದಸ್ಯ ವೇಣುಗೋಪಾಲ್ ಈ ವಿಷಯವನ್ನು ಪ್ರಸ್ತಾಪಿಸಿ ಚೀನಾದ ತಂತ್ರಜ್ಞಾನ ಸಂಸ್ಥೆ ಮೂಲಕ ಭಾರತದ ಅತಿಗಣ್ಯ ವ್ಯಕ್ತಿಗಳ ಡೇಟಾ ಮಾಹಿತಿಗಳನ್ನು ಚೀನಾ ಕಲೆಹಾಕುತ್ತಿದೆ.

ಈ ಬಗ್ಗೆ ಸರ್ಕಾರ ಏನು ಕ್ರಮ ಕೈಗೊಳ್ಳುತ್ತಿದೆ ಎಂದು ಪ್ರಶ್ನಿಸಿದರು.  ಸಭಾಪತಿ ವೆಂಕಯ್ಯ ನಾಯ್ಡು ಈ ಬಗ್ಗೆ ಮತ್ತಷ್ಟು ಮಾಹಿತಿ ಸಂಗ್ರಹಿಸಿ ಉತ್ತರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದರು.

Facebook Comments