ಪುರುಷರು ಮತ್ತು ಮಹಿಳೆಯರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ : ಖಂಡ್ರೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.8- ಮಹಿಳೆಯರ ಮೇಲಿನ ಅತ್ಯಾಚಾರ ಮತ್ತು ಕೊಲೆಯಂತಹ ಗಂಭೀರ ಸ್ವರೂಪದ ಅಪರಾಧದ ಕುರಿತ ವಿಚಾರಣೆ ನಡೆಸಿ ಆರು ತಿಂಗಳಲ್ಲೇ ಶಿಕ್ಷೆ ವಿಧಿಸುವಂತಹ ಕಾನೂನು ರೂಪಿಸಬೇಕಿದೆ. ಈ ನಿಟ್ಟಿನಲ್ಲಿ ಮಹಿಳಾ ಸಂಘಟನೆಗಳು ಒಟ್ಟಾಗಿ ಹೋರಾಟ ನಡೆಸಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸಲಹೆ ನೀಡಿದರು. ನಗರದಲ್ಲಿಂದು ಕೆಪಿಸಿಸಿ ಮಹಿಳಾ ಘಟಕದ ವತಿಯಿಂದ ಆಯೋಜಿಸಲಾಗಿದ್ದ ಮಹಿಳಾ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪುರುಷರು ಮತ್ತು ಮಹಿಳೆಯರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಜೀವನ ಚಕ್ರ ತಿರುಗಬೇಕಾದರೆ ಈ ಇಬ್ಬರೂ ಅಗತ್ಯ.

ಮಹಿಳೆಯರು ಇಲ್ಲವೆಂದರೆ ಸಮಾಜವೇ ಮುಂದೆ ಹೋಗುವುದಿಲ್ಲ. ಆದರೂ ಮಹಿಳೆಯರನ್ನು ಅಬಲೆಯರು ಎಂದು ಪರಿಗಣಿಸಲಾಗುತ್ತಿದೆ. ನಿರಂತರವಾಗಿ ಅವರ ಮೇಲೆ ಶೋಷಣೆ, ದೌರ್ಜನ್ಯ ನಡೆಯುತ್ತಿದೆ. ಯಾವ ಕ್ಷೇತ್ರದಲ್ಲೂ ಮಹಿಳೆಯರು ಕಡಿಮೆ ಇಲ್ಲ. ಪುರುಷರಿಗೆ ಸರಿಸಮಾನವಾಗಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಪಕ್ಷದಲ್ಲೇ ಶ್ರೀಮತಿ ಇಂದಿರಾಗಾಂಧಿ ಅವರು ತೊಟ್ಟಿಲು ತೂಗುವ ಕೈ ದೇಶವನ್ನು ಆಳಬಹುದು ಎಂಬುದನ್ನು ಸಾಧಿಸಿ ತೋರಿಸಿದ್ದಾರೆ ಎಂದರು.

ಆಡಳಿತದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಎಷ್ಟು ಎಂಬುದನ್ನು ಆಧರಿಸಿ, ಆ ದೇಶದ ಅಭಿವೃದ್ಧಿಯನ್ನು ಲೆಕ್ಕಾಚಾರ ಹಾಕಲಾಗುತ್ತದೆ. ಮಹಿಳೆಯರಿಗೆ ಸಮಾನ ಅವಕಾಶಗಳು, ಪೂಜ್ಯನೀಯ ಸ್ಥಾನ ನೀಡಿದ್ದು, ಶರಣರ ಕಾಲದಲ್ಲಿ ಎಂದ ಅವರು, ಕ್ರಾಂತಿಕಾರಿ ಬಸವಣ್ಣನವರು ಅನುಭವ ಮಂಟಪದಲ್ಲಿ ಅಕ್ಕ ಮಹಾದೇವಿ, ಗಂಗಾಂಬಿಕೆ, ನಾಗಲಾಂಬಿಕೆಯಂತ ಮಹಿಳೆಯರಿಗೆÉ ಅವಕಾಶ ಕೊಟ್ಟು ಸ್ವತಂತ್ರ್ಯ ಸ್ಥಾನಮಾನ ಕಲ್ಪಿಸಿದರು. ಅನಂತರ ಮಹಿಳೆಯರ ಹಕ್ಕುಗಳ ಬಗ್ಗೆ ಚರ್ಚೆಗಳು ಆರಂಭವಾದವು ಎಂದು ಹೇಳಿದರು.

ಸಾಮಾಜಿಕ ನ್ಯಾಯಕ್ಕೆ ಕಾಂಗ್ರೆಸ್ ಬದ್ಧವಾಗಿದೆ. ಸಾಕಷ್ಟು ಕಾನೂನುಗಳನ್ನು ತಂದಿದ್ದೇವೆ. ಆದರೂ ಶೋಷಣೆಗಳು ನಿಂತಿಲ್ಲ. ದೇಶದಲ್ಲಿ ಹೆಣ್ಣು ಭ್ರೂಣ ಹತ್ಯೆ ತಡೆಯಬೇಕು. ಈಗಾಗಲೇ ಸಾಕಷ್ಟು ಕ್ರಮ ಕೈಗೊಂಡಿರುವುದರಿಂದ ಪುರುಷರ ಮತ್ತು ಮಹಿಳೆಯರ ನಡುವೆ ಉಂಟಾಗಿದ್ದ ಅನುಪಾತದಲ್ಲಿನ ಅಂತರ ಕಡಿಮೆಯಾಗಿದೆ. ಆದರೆ, ಪೂರ್ಣ ಪ್ರಮಾಣದಲ್ಲಿಸಮಾನತೆ ಬಂದಿಲ್ಲ.

ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಶೇ.33ರಷ್ಟು ಮೀಸಲಾತಿ ಜಾರಿಗೊಳಿಸಲು ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಹಲವಾರು ವರ್ಷಗಳಿಂದ ಸುದೀರ್ಘ ಹೋರಾಟ ನಡೆಸುತ್ತಿದ್ದಾರೆ. ಇದುವರೆಗೂ ಅದು ಸಾಧ್ಯವಾಗಿಲ್ಲ. ಮಹಿಳಾ ಮೀಸಲಾತಿ ಜಾರಿಯಾಗಬೇಕು. ಸಮಾನತೆ ಸಿಗಬೇಕು ಎಂದು ಹೇಳಿದರು.

ಕಾಂಗ್ರೆಸ್‍ನ ಮಹಿಳಾ ಘಟಕ ಮನೆ ಮನೆಗೆ ತೆರಳಿ ಹೆಣ್ಣು ಭ್ರೂಣ ಹತ್ಯೆ, ದೌರ್ಜನ್ಯ, ಲೈಂಗಿಕ ಶೋಷಣೆ ಬಗ್ಗೆ ಜಾಗೃತಿ ಮೂಡಿಸಬೇಕು. ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ 6 ತಿಂಗಳಲ್ಲೇ ಕಠಿಣ ಶಿಕ್ಷೆ ಜಾರಿಯಾಗುವಂತ ಕಾನೂನು ರೂಪಿಸುವಂತೆ ಸುಪ್ರೀಂಕೋರ್ಟ್ ಸಲಹೆ ನೀಡಿದೆ. ಅದನ್ನು ಅನುಷ್ಠಾನಗೊಳಿಸಲು ಎಲ್ಲಾ ಮಹಿಳೆಯರು ಹೋರಾಟ ಮಾಡಬೇಕೆಂದು ಕರೆ ನೀಡಿದರು.

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರ್‍ನಾಥ್ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕೆಪಿಸಿಸಿ ಕಚೇರಿಯಿಂದ ರೇಸ್‍ಕೋರ್ಸ್ ರಸ್ತೆ ಬಳಿ ಇರುವ ಕಚೇರಿವರೆಗೂ ಮಹಿಳಾ ದಿನಾಚರಣೆ ಅಂಗವಾಗಿ ಬೈಕ್ ರ್ಯಾಲಿ ಆಯೋಜಿಸಲಾಗಿತ್ತು. ನೂರಾರು ಮಹಿಳೆಯರು, ಕಾಂಗ್ರೆಸ್ ಕಾರ್ಯಕರ್ತರು ರ್ಯಾಲಿಯಲ್ಲಿ ಭಾಗವಹಿಸಿದ್ದರು.

Facebook Comments