ರಾಮ ಮಂದಿರ ಶಂಕುಸ್ಥಾಪನೆ ಮೇಲೆ ಪಾ(ಪಿ)ಕಿಗಳ ಕಣ್ಣು..! ಅಯೋಧ್ಯೆ ಮೇಲೆ ದಾಳಿಗೆ ಸಂಚು

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜು.29- ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆಗಾಗಿ ಸಕಲ ಸಿದ್ಧತೆ ಭರದಿಂದ ಸಾಗಿದೆ. ಈ ನಡುವೆ ರಾಮ ಮಂದಿರದ ಮೇಲೆ ಪಾಕಿಸ್ತಾನದ ಇಂಟರ್ ಸರ್ವೀಸ್ ಇಂಟಲಿಜೆನ್ಸ್(ಐಎಸ್‍ಐ) ಕಣ್ಣು ಬಿದ್ದಿದೆ ಎಂದು ರಿಸರ್ಚ್ ಹಾಗೂ ಇಂಟಲಿಜೆನ್ಸ್ ವಿಂಗ್ ಮಾಹಿತಿ ನೀಡಿದೆ.

ಆಗಸ್ಟ್ 5ರಂದು ಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನಡೆಯಲಿದ್ದು, ಆಗಸ್ಟ್ 15ರಂದು ಅಯೋಧ್ಯೆ ಮೇಲೆ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದು, ಇದಕ್ಕೆ ಐಎಸ್‍ಐ ನೆರವು ನೀಡುತ್ತಿದೆ ಎಂಬ ಸುದ್ದಿ ಬಂದಿದೆ.

ಐಎಸ್‍ಐ ಬೆಂಬಲಿತ ಲಷ್ಕರ್ ಇ ತೋಯ್ಬಾ ಹಾಗೂ ಜೈಶ್ ಎ ಮೊಹಮ್ಮದ್ ಉಗ್ರರು, ಅಯೋಧ್ಯೆ ಸೇರಿದಂತೆ ಭಾರತದ ಧಾರ್ಮಿಕ ಕೇಂದ್ರಗಳ ಮೇಲೆ ದಾಳಿ ನಡೆಸಲು ಸಜ್ಜಾಗುತ್ತಿದ್ದಾರೆ. ಮೂರರಿಂದ ಐದು ಉಗ್ರ ಸಂಘಟನೆಗಳು ಈ ದುಷ್ಕೃತ್ಯ ಎಸಗಲು ಸಂಚು ರೂಪಿಸಿವೆ ಎಂದು ರಾ ವರದಿ ಮಾಡಿದೆ.

ಭಾರತದಲ್ಲಿ ಆಂತರಿಕ ಕಿತ್ತಾಟದಿಂದ ಧಾರ್ಮಿಕ ಕೇಂದ್ರಗಳಿಗೆ ಹಾನಿಯುಂಟಾಗುವಂಥ ಸಂಚು ರೂಪಿಸಲಾಗಿದೆ. ವಿವಿಐಪಿಗಳನ್ನು ಗುರಿಯನ್ನಾಗಿಸಿಕೊಂಡು ದಾಳಿ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಎಚ್ಚರಿಕೆ ಸಂದೇಶ ಬಂದಿದೆ. ಹೀಗಾಗಿ, ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಆಗಸ್ಟ್ 5ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಅಧಿಕಾರ ನೀಡಿದ್ದ ಆರ್ಟಿಕಲ್ 370 ರದ್ದುಗೊಳಿಸಿದ ದಿನವಾಗಿದೆ. ಅಂದೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ನೆರವೇರಿಸಲಿದ್ದಾರೆ.

ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವ ಸಂಭ್ರಮಕ್ಕೂ ದೇಶ ಸಿದ್ಧವಾಗುತ್ತಿದೆ. ಈ ನಿಟ್ಟಿನಲ್ಲಿ ಈ ಪ್ರಮುಖ ದಿನಾಂಕಗಳಂದು ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಎಚ್ಚರಿಕೆ ವಹಿಸಿ, ಪ್ರಮುಖ ತಾಣಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

Facebook Comments

Sri Raghav

Admin