ಹೊಸ ಮಾರ್ಗದ ಮೂಲಕ ಭಾರತಕ್ಕೆ ISI, D-ಕಂಪನಿಯಿಂದ ನಕಲಿ ನೋಟು ಪೂರೈಕೆ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜೂ.2-ಭಾರತದ ಪೂರ್ವ ಗಡಿ ಬಳಿ ಭಾರತೀಯ ಕರೆನ್ಸಿಗಳನ್ನು ನಕಲಿಯಾಗಿ ಮತ್ತೆ ಮುದ್ರಿಸಿ ಚಲಾವಣೆ ಮಾಡುತ್ತಿರುವ ಆಘಾತಕಾರಿ ಸಂಗತಿ ಬಯಲಾಗಿದೆ.

ಉತ್ತಮ ಗುಣಮಟ್ಟದ ನಕಲಿ ಭಾರತೀಯ ಕರೆನ್ಸಿ ನೋಟುಗಳನ್ನು(ಎಫ್‍ಐಸಿಎನ್) ಭಾರತದೊಳಗೆ ಚಲಾವಣೆ ಮಾಡುತ್ತಿರುವ ಕೃತ್ಯದಲ್ಲಿ ಪಾಕಿಸ್ತಾನ ಬೇಹುಗಾರಿಕೆ ಸಂಸ್ಥೆ-ಐಎಸ್‍ಐ ಮತ್ತು ಕುಖ್ಯಾತ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಒಡೆತನ ಡಿ-ಕಂಪನಿ ಕೈವಾಡವಿರುವುದನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ತನಿಖೆಯಿಂದ ಬಹಿರಂಗವಾಗಿದೆ.

ಭಾರತೀಯ ಗುಪ್ತಚರ ಸಂಸ್ಥೆಗಳ ಖಚಿತ ವರ್ತಮಾನದ ನಂತರ ನೇಪಾಳದಲ್ಲಿ ನಕಲಿ ನೋಟು ಚಲಾವಣೆ ದಂಧೆಯ ಕಿಂಗ್‍ಪಿನ್ ಯುನುಸ್ ಅನ್ಸಾರಿಯನ್ನು ಪೊಲೀಸರು ಬಂಧಿಸಿದ ಬಳಿಕ ಈ ಖೋಟಾ ಕರೆನ್ಸಿಯ ವ್ಯವಸ್ಥಿತ ಜಾಲ ಮತ್ತು ಐಎಸ್‍ಐ-ಡಿ ಕಂಪನಿ ಸಖ್ಯದ ಬಗ್ಗೆ ದೃಢಪಟ್ಟಿದೆ.

ನಕಲಿ ನೋಟು ದಂಧೆಯ ರೂವಾರಿ ಅನ್ಸಾರಿಗೆ ಐಎಸ್‍ಎಸ್ ಮತ್ತು ದಾವೂದ್ ಇಬ್ರಾಹಿಂ ಜೊತೆ ನಿಕಟ ಸಂಬಂಧವಿದೆ. ಈ ಖೋಟಾ ಕರೆನ್ಸಿ ಚಲಾವಣೆ ಜಾಲದ ಅತ್ಯಂತ ದೊಡ್ಡ ವಹಿವಾಟುದಾರ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅನ್ಸಾರಿ ಜೊತೆ ಮಹಮದ್ ಅಖ್ತರ್, ನಾಡಿಯಾ ಅನ್ವರ್ ಮತ್ತು ನಾಸಿರುದ್ಧೀನ್ ಎಂಬ ಮೂವರು ಪಾಕಿಸ್ತಾನಿಯರನ್ನು ಸಹ ಬಂಧಿಸಲಾಗಿದೆ. ಇವರನ್ನು ಬಂಧಿಸಿದಾಗ ಅವರ ಬಳಿ 7 ಕೋಟಿ ರೂ.ಗಳ ಮೌಲ್ಯದಷ್ಟು ಖೋಟಾ ನೋಟುಗಳು ಇದ್ದವು. ಅವುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಅನ್ಸಾರಿ ಮೂಲಕ ಈ ಹಿಂದೆ ನಕಲಿ ನೋಟುಗಳನ್ನು ಭಾರತದೊಳಗೆ ನುಸುಳುಸುತ್ತಿದ್ದ ಐಎಸ್‍ಐ ಮತ್ತು ಡಿ-ಕಂಪನಿ ಈಗ ತನ್ನ ದಂಧೆ ಮಾರ್ಗವನ್ನು ಬದಲಿಸಿದೆ. ಈ ಪ್ರದೇಶ ಮತ್ತು ದೇಶದ ಕೆಲವೆಡೆ ಹಿಂದೆಂದಿಗಿಂತಲೂ ಅಧಿಕ ಪ್ರಮಾಣದಲ್ಲಿ ಫೇಕ್ ಕರೆನ್ಸಿಗಳು ಚಲಾವಣೆಯಾಗುತ್ತಿವೆ. ಬಾಂಗ್ಲಾದೇಶದ ಪೂರ್ವ ಗಡಿ ಮೂಲಕ ಭಾರತಕ್ಕೆ ಖೋಟಾ ಕರೆನ್ಸಿಗಳನ್ನು ಪಂಪ್ ಮಾಡಲಾಗುತ್ತಿದೆ ಎಂದು ಎನ್‍ಐಎ ಇತ್ತೀಚೆಗೆ ನಡೆಸಿದ ತನಿಖೆಯಿಂದ ಬಹಿರಂಗವಾಗಿದೆ.

ಇದಕ್ಕೆ ಇಂಬು ನೀಡುವಂತೆ ಇತ್ತೀಚೆಗೆ ನವದೆಹಲಿ ಆನಂದ್ ವಿಹಾರ ರೈಲು ನಿಲ್ದಾಣದಲ್ಲಿ ಪಶ್ಚಿಮ ಬಂಗಾಳದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿ 10 ಲಕ್ಷ ರೂ. ಮುಖಬೆಲೆಯ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದರು. ತನಿಖೆ ವೇಳೆ ಈತ ಪಾಕ್ ಕುಮ್ಮಕಿನಿಂದ ಬಾಂಗ್ಲಾದೇಶದಲ್ಲಿ ನಕಲಿ ಕರೆನ್ಸಿಗಳನ್ನು ಮುದ್ರಿಸಲಾಗುತ್ತಿದೆ. ಅದನ್ನು ಭಾರತದಲ್ಲಿ ಚಲಾವಣೆ ಮಾಡಲಾಗುತ್ತಿದೆ ಎಂದು ಬಾಯಿಬಿಟ್ಟಿದ್ದ.

Facebook Comments