ಮತ್ತೊಂದು ವಿಸ್ಮಯ ಪತ್ತೆಮಾಡಿದ ಇಸ್ರೋ, ಮಂಗಳನ ಅಂಗಳದಲ್ಲಿ ಮತ್ತೊಂದು ಚಂದ್ರ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.4-ಈ ಬ್ರಹ್ಮಾಂಡದ ಅನೇಕಾನೇಕ ಕೌತುಕಗಳನ್ನು ಬೆಳಕಿಗೆ ತಂದಿರುವ ದೇಶದ ಹೆಮ್ಮೆಯ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಂಗಳಗ್ರಹದಲ್ಲಿ ಅತಿದೊಡ್ಡ ಚಂದ್ರ ಇರುವ ವಿಸ್ಮಯವೊಂದನ್ನು ಪತ್ತೆ ಮಾಡಿದೆ.

ಮಂಗಳಯಾನದಲ್ಲಿ ಕಾರ್ಯೋನ್ಮುಖವಾಗಿರುವ ಇಸ್ರೋದ ಗಗನನೌಕೆಯ ಮಾರ್ಸ್ ಕಲರ್ ಕ್ಯಾಮೆರಾ (ಎಂಸಿಸಿ ಅಂಗಾರಕನ ಅಂಗಳದಲ್ಲಿ ಅತಿ ಸಮೀಪ ಮತ್ತು ಅತ್ಯಂತ ದೊಡ್ಡ ಚಂದ್ರನಿರುವ ಸಂಗತಿಯ ದೃಶ್ಯವನ್ನು ಸೆರೆಹಿಡಿದಿದೆ.

ಗ್ರಹಗಳಲ್ಲಿ ಕಂಡುಬರುವ ಚಂದ್ರನನ್ನೇ ಹೋಲುವ ಬೃಹತ್ ಆಕಾಶಕಾಯಗಳನ್ನು ಖಗೋಳ ವಿಜ್ಞಾನ ಪರಿಭಾಷೆಯಲ್ಲಿ ಫೋಬೋಸ್ ಎಂದು ಕರೆಯಲಾಗುತ್ತದೆ. ಮಂಗಳ ಗ್ರಹದ ಅತ್ಯಂತ ಒಳ ಪ್ರದೇಶದಲ್ಲಿ ಇರುವ ಸ್ವಾಭಾವಿಕ ಉಪಗ್ರಹವನ್ನೂ ಸಹ ಫೋಬೋಸ್ ಎನ್ನುವರು.

ಗ್ರೀಕ್ ಪುರಾಣಪುಣ್ಯ ಕಥೆಗಳಲ್ಲಿ ಫೋಬೋಸ್‍ನನ್ನು ಮಂಗಳನ ಪುತ್ರ ಮತ್ತು ಭಯ ವಿಮೋಚಕ ಎಂದು ಉಲ್ಲೇಖಿಸಲಾಗಿದೆ. ಮಂಗಳಯಾನ ನಿಮಿತ್ತ ಎಂಒಎಂ (ಮಾರ್ಸ್ ಆರ್ಬಿಟರ್ ಮಿಷನ್ ಅಥವಾ ಮಂಗಳ ಕಕ್ಷೆ ಅನ್ವೇಷಣೆ) ಕಾರ್ಯಾಚರಣೆಯಲ್ಲಿರುವ ಎಸಿಸಿ ಕ್ಯಾಮೆರಾ ಕಣ್ಣು ಸೆರೆ ಹಿಡಿದಿರುವ ಈ ಖಗೋಳ ವಿಸ್ಮಯವು ಫೋಬೋಸ್‍ಗಳ ಮೇಲೆ ಮತ್ತಷ್ಟು ಬೆಳಕು ಚೆಲ್ಲಲ್ಲು ಸಹಕಾರಿಯಾಗಿದೆ.

ಮಂಗಳ ಗ್ರಹದಿಂದ 7,200 ಕಿ.ಮೀ. ಮತ್ತು ಅದರ ಒಳ ಪ್ರದೇಶದಿಂದ 4,200 ಕಿ.ಮೀ. ದೂರದಲ್ಲಿದ್ದಾಗ ಜುಲೈ 1ರಂದು ಎಂಒಎಂ ಈ ವಿಸ್ಮಯ ಸಂಗತಿಯ ದೃಶ್ಯಗಳನ್ನು ದಾಖಲಿಸಿದೆ.

ಈ ಹಿಂದೆ ಬೃಹತ್ ಆಕಾಶಕಾಯಗಳು ಪರಸ್ಪರ ಅಪ್ಪಳಿಸಿದ ಪರಿಣಾಮ ಉಂಟಾದ ದೊಡ್ಡ ಹಳ್ಳದ ರೂಪಾಂತರದ ವೇಳೆ ಈ ಸ್ವಾಭಾವಿಕ ಉಪಗ್ರಹ ಸೃಷ್ಟಿಯಾಗಿದ್ದು, ಇದರಲ್ಲಿ ಇಂಗಾಲದ ಅಂಶ ಅಧಿಕವಾಗಿ ಇರುವ ಸಾಧ್ಯತೆ ಇದೆ ಇಸ್ರೋ ತಿಳಿಸಿದೆ.

ಹೊಸದಾಗಿ ಕಂಡುಬಂದಿರುವ ಚಂದ್ರನಂಥ ಈ ಸ್ವಾಭಾವಿಕ ಉಪಗ್ರಹದ ಮೇಲೆ ಈಗ ಮತ್ತಷ್ಟು ಅಧ್ಯಯನ ಮತ್ತು ಸಂಶೋಧನೆ ನಡೆಸಲು ಇಸ್ರೋದ ಈ ಹೊಸ ಪ್ರತಿಬಿಂಬಗಳು ನೆರವಾಗಲಿದೆ.

Facebook Comments