ಬಿಗ್ ನ್ಯೂಸ್ : ಮಾಜಿ ಡಿಸಿಎಂ ಪರಮೇಶ್ವರ್‌ಗೆ ಐಟಿ ಶಾಕ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.10- ಮಾಜಿ ಉಪಮುಖ್ಯಮಂತ್ರಿ ಡಾ.ಪರಮೇಶ್ವರ್, ಮಾಜಿ ಸಚಿವ ಆರ್.ಎಲ್.ಜಾಲಪ್ಪ ಅವರ ಒಡೆತನದ ಶಿಕ್ಷಣ ಸಂಸ್ಥೆಗಳು, ನಿವಾಸ, ಕಚೇರಿ ಸೇರಿದಂತೆ ರಾಜ್ಯದ ಹಲವು ಕಡೆ ಇಂದು ಐಟಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.

ಕಾಂಗ್ರೆಸ್‍ನ ಪ್ರಭಾವಿ ಮುಖಂಡರಾಗಿರುವ ಡಾ.ಜಿ.ಪರಮೇಶ್ವರ್ ಒಡೆತನದ ತುಮಕೂರಿನ ಕುಣಿಗಲ್ ರಸ್ತೆಯ ಮರಳೂರು ದಿಣ್ಣೆಯಲ್ಲಿರುವ ಸಿದ್ದಾರ್ಥ ಇಂಜಿನಿಯರಿಂಗ್ ಕಾಲೇಜು, ನೆಲಮಂಗಲದಲ್ಲಿರುವ ವೈದ್ಯಕೀಯ ಕಾಲೇಜು, ಬೆಂಗಳೂರಿನ ಸದಾಶಿವನಗರದಲ್ಲಿರುವ ಅವರ ನಿವಾಸ, ಕಚೇರಿ ಹಾಗೂ ಸಹೋದರ ಒಡೆತನದ ಸಂಸ್ಥೆಗಳ ಮೇಲೂ ದಾಳಿ ನಡೆಸಲಾಗಿದೆ.

ಹಿಂದುಳಿದ ವರ್ಗಗಳ ಪ್ರಭಾವಿ ನಾಯಕ, ಮಾಜಿ ಸಚಿವ ಆರ್.ಎಲ್.ಜಾಲಪ್ಪ ಒಡೆತನದ ಶಿಕ್ಷಣ ಸಂಸ್ಥೆ ಮತ್ತು ಅವರ ನಿವಾಸದ ಮೇಲೂ ಐಟಿ ದಾಳಿ ಮಾಡಿದೆ. ಕೋಲಾರ ಹೊರವಲಯದ ಟಮಕ ರಸ್ತೆಯಲ್ಲಿರುವ ದೇವರಾಜ ಅರಸು ವೈದ್ಯಕೀಯ ಕಾಲೇಜು, ಆರ್.ಎಲ್.ಜಾಲಪ್ಪ ಆಸ್ಪತ್ರೆ, ದೊಡ್ಡಬಳ್ಳಾಪುರದ ಸೋಮೇಶ್ವರ ನಗರದಲ್ಲಿರುವ ಆರ್.ಜಾಲಪ್ಪ ಪುತ್ರ ರಾಜೇಂದ್ರ ಅವರ ನಿವಾಸದಲ್ಲೂ ದಾಳಿ ನಡೆಸಲಾಗಿದೆ.

ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ನೆಲಮಂಗಲದ ಸುಭಾಷ್‍ನಗರ ವಾರ್ಡ್‍ನ ಜೆಡಿಎಸ್ ಪುರಸಭಾ ಸದಸ್ಯ ಶಿವಕುಮಾರ್ ಅವರ ಮನೆ ಮೇಲೆ ಏಕಕಾಲಕ್ಕೆ ಐಟಿ ಅಧಿಕಾರಿಗಳು ದಾಳಿ ಮಾಡಿ ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

# ಪರಮೇಶ್ವರ್‍ಗೆ ಶಾಕ್:
ಕಾಂಗ್ರೆಸ್‍ನ ಪ್ರಭಾವಿ ನಾಯಕ, ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹಾಗೂ ಅವರ ಸಹೋದರ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ 100ಕ್ಕೂ ಹೆಚ್ಚು ಐಟಿ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಏಕಕಾಲಕ್ಕೆ ದಾಳಿ ನಡೆಸಿ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.  ಬೆಂಗಳೂರಿನ ಐಟಿ ವಿಭಾಗದ ಅಧಿಕಾರಿಗಳು ಕಳೆದ ಹಲವು ದಿನಗಳಿಂದ ಈ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆಸಲು ಪೂರ್ವ ತಯಾರಿ ನಡೆಸಿಕೊಂಡಿದ್ದರು.

ಇದರಂತೆ ಇಂದು ಬೆಳಗ್ಗೆ ತುಮಕೂರಿನ ಕುಣಿಗಲ್ ರಸ್ತೆಯಲ್ಲಿರುವ ಮರಳೂರಿನ ಸಿದ್ದಾರ್ಥ ಇಂಜಿನಿಯರಿಂಗ್ ಕಾಲೇಜು, ಪದವಿ ಕಾಲೇಜು, ನೆಲಮಂಗಲದಲ್ಲಿರುವ ವೈದ್ಯಕೀಯ ಕಾಲೇಜು, ಸಹೋದರ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ಮಾಡಲಾಗಿದೆ.

ದಾಳಿ ಸಂದರ್ಭದಲ್ಲಿ ಕಾಲೇಜಿನಲ್ಲಿದ್ದ ಎಲ್ಲ ಸಿಬ್ಬಂದಿಯನ್ನು ಐಟಿ ಅಧಿಕಾರಿಗಳು ಹೊರಗೆ ಕಳುಹಿಸಿ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಮೂಲಗಳ ಪ್ರಕಾರ ಈ ಶಿಕ್ಷಣ ಸಂಸ್ಥೆಯಲ್ಲಿ ಸರ್ಕಾರ ನಿಗದಿಪಡಿಸಿದ್ದಕ್ಕಿಂತ ಹೆಚ್ಚು ಶುಲ್ಕವನ್ನು ಪಡೆಯಲಾಗುತ್ತಿತ್ತು ಎಂಬ ಹಿನ್ನೆಲೆಯಲ್ಲಿ ದಾಳಿ ಮಾಡಲಾಗಿದೆ ಎಂದು ತಿಳಿದುಬಂದಿದೆ.

ತುಮಕೂರಿನಲ್ಲಿ ದಾಳಿ ನಡೆಸುತ್ತಿದ್ದ ಸಂದರ್ಭದಲ್ಲೇ ನೆಲಮಂಗಲದಲ್ಲಿರುವ ಪರಮೇಶ್ವರ್ ಒಡೆತನದ ವೈದ್ಯಕೀಯ ಕಾಲೇಜಿನಲ್ಲೂ ಐಟಿ ದಾಳಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಇಲ್ಲಿಯೂ ಕೂಡ ಐಟಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿ ಸಂದೇಹಾಸ್ಪದ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಬೆಂಗಳೂರಿನ ಸದಾಶಿವನಗರದಲ್ಲಿರುವ ಪರಮೇಶ್ವರ್ ನಿವಾಸದ ಮೇಲೂ ದಾಳಿ ಮಾಡಲಾಗಿದೆ. ಮುಂಜಾನೆ 5.30ಕ್ಕೆ ಆರಕ್ಕೂ ಹೆಚ್ಚು ಅಧಿಕಾರಿಗಳ ತಂಡ ದಾಳಿ ನಡೆಸಿದ್ದಾರೆ.
ಈ ವೇಳೆ ಪರಮೇಶ್ವರ್ ತಮ್ಮ ಕ್ಷೇತ್ರ ಕೊರಟಗೆರೆಯಲ್ಲಿದ್ದರು. ಮನೆಯಲ್ಲಿ ಪರಮೇಶ್ವರ್ ಅವರ ಪತ್ನಿ ಮತ್ತು ಕುಟುಂಬದ ಕೆಲವು ಸದಸ್ಯರು ಇದ್ದರು ಎನ್ನಲಾಗಿದೆ.
ದಾಳಿ ಸಂದರ್ಭದಲ್ಲಿ ಐಟಿ ಅಧಿಕಾರಿಗಳು ಕೇಳಿದ ಎಲ್ಲ ಮಾಹಿತಿಯನ್ನು ಪರಮೇಶ್ವರ್ ಕುಟುಂಬದವರು ನೀಡಿದ್ದಾರೆ ಎಂದು ತಿಳಿದುಬಂದಿದೆ.

# ಆಪ್ತನಿಗೂ ಶಾಕ್:
ಇನ್ನು ಪರಮೇಶ್ವರ್ ಆಪ್ತ ರಿಯಲ್ ಎಸ್ಟೇಟ್ ಉದ್ಯಮಿ ರಂಗನಾಥ ಎಂಬುವರ ಮನೆ ಹಾಗೂ ಕಚೇರಿ ಮೇಲೂ ಐಟಿ ದಾಳಿ ಮಾಡಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ಬೇಗೂರು ಎಂಬಲ್ಲಿ ಐಟಿ ಅಧಿಕಾರಿಗಳ ಮೂರು ತಂಡ ರಂಗನಾಥ್ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಪರಮೇಶ್ವರ್ ಅವರ ಆಪ್ತವಲಯದಲ್ಲಿ ರಂಗನಾಥ್ ಗುರುತಿಸಿಕೊಂಡಿದ್ದರು. ಅವರ ವ್ಯವಹಾರ, ವಹಿವಾಟು ಇವರಿಗೆ ತಿಳಿದಿರಬಹುದೆಂಬ ಶಂಕೆ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.

# ಆರ್.ಎಲ್.ಜಾಲಪ್ಪ ಕಾಲೇಜು ಮೇಲೆ ದಾಳಿ:
ಕೋಲಾರ ಹೊರವಲಯದ ಟಮಕದಲ್ಲಿರುವ ಮಾಜಿ ಸಚಿವ ಆರ್.ಎಲ್.ಜಾಲಪ್ಪನವರ ದೇವರಾಜ ಅರಸು ವೈದ್ಯಕೀಯ ಕಾಲೇಜು ಹಾಗೂ ಆರ್.ಎಲ್.ಜಾಲಪ್ಪ ಆಸ್ಪತ್ರೆ ಮೇಲೂ ದಾಳಿಯಾಗಿದೆ.
ಮುಂಜಾನೆಯೇ ಐಟಿ ಅಧಿಕಾರಿಗಳ ತಂಡ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲಿಸಿ ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.  ದೊಡ್ಡಬಳ್ಳಾಪುರ ಸೋಮೇಶ್ವರ ನಗರದಲ್ಲಿರುವ ಜಾಲಪ್ಪ ಪುತ್ರ ರಾಜೇಂದ್ರ ಅವರ ಮನೆ ಮೇಲೂ ದಾಳಿ ನಡೆದಿದೆ.

ಲೋಕಸಭೆ ಚುನಾವಣೆ ಮುಗಿದ ಬಳಿಕ ರಾಜ್ಯದಲ್ಲಿ ಐಟಿ ಅಧಿಕಾರಿಗಳು ಪ್ರಭಾವಿ ವ್ಯಕ್ತಿಗಳನ್ನು ಖೆಡ್ಡಾಕ್ಕೆ ಬೀಳಿಸಿರುವುದು ಮೊದಲ ಪ್ರಕರಣ ಇದಾಗಿದೆ. ಈ ಹಿಂದೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ನಿವಾಸ, ಕಚೇರಿ, ಸಂಬಂಧಿಕರು ಮತ್ತಿತರರ ಮೇಲೆ ದಾಳಿ ನಡೆದಿತ್ತು. ಬಳಿಕ ಈ ಪ್ರಕರಣವನ್ನು ಇಡಿ ಕೈಗೆತ್ತಿಕೊಂಡ ನಂತರ ಶಿವಕುಮಾರ್ ತಿಹಾರ್ ಜೈಲು ಪಾಲಾಗಿದ್ದಾರೆ.

Facebook Comments

Sri Raghav

Admin