ಶಿವಮೊಗ್ಗ, ವಿಜಯಪುರ, ಬಾಗಲಕೋಟೆಯಲ್ಲಿ ಐಟಿ ದಾಳಿ, 4 ಕೋಟಿಗೂ ಅಧಿಕ ಹಣ ವಶ..!

ಈ ಸುದ್ದಿಯನ್ನು ಶೇರ್ ಮಾಡಿ

ಶಿವಮೊಗ್ಗ. ಏ.20 : ಉತ್ತರ ಕರ್ನಾಟಕ ಭಾಗದ 14 ಲೋಕಸಭಾ ಕ್ಷೇತ್ರಗಳಲ್ಲಿ 2 ನೇ ಹಂತದ ಮತದಾನಕ್ಕೆ ಇನ್ನೆರಡು ದಿನ ಬಾಕಿ ಇರುವಾಗಲೇ ಕಾಂಚಾಣ ಕುಣಿತ ಜೋರಾಗಿದೆ.

ಶಿವಮೊಗ್ಗ, ವಿಜಯಪುರ, ಬಾಗಲಕೋಟೆ ಸೇರಿದಂತೆ ಹಲವೆಡೆ ಐಟಿ ಅಧಿಕಾರಿಗಳು ಭರ್ಜರಿ ದಾಳಿ ನಡೆಸಿದ್ದು ಕೋಟ್ಯಂತರ ಹಣ ವಶಪಡಿಸಿಕೊಂಡಿದ್ದಾರೆ .

ಶಿವಮೊಗ್ಗ ಜಿಲ್ಲೆಯಲ್ಲಿ ಕಾರಿನ ಸ್ಟೆಪ್ನಿ ಟೈರ್‍ನೊಳಗೆ ಇಟ್ಟಿದ್ದ 2 ಕೋಟಿ 30 ಲಕ್ಷ ರೂಪಾಯಿಯನ್ನು ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಹಣವನ್ನು ಶಿವಮೊಗ್ಗ ಹಾಗೂ ಭದ್ರಾವತಿಗೆ ಚುನಾವಣೆಗೆ ಹಂಚಿಕೆ ಮಾಡಲು ಕೊಂಡೊಯ್ಯುತ್ತಿದ್ದರು ಎನ್ನಲಾಗಿದೆ.

ಇನ್ನು ಆರೋಗ್ಯ ಸಚಿವ ಶಿವಾನಂದ ಪಾಟೀಲ್, ವಿಜಯಪುರ ಲೋಕಸಭಾ ಕ್ಷೇತ್ರದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಡಾ.ಸುನೀತಾ ದೇವಾನಂದ ಚೌಹಾಣ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ, ವ್ಯಕ್ತಿಗಳ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶನಿವಾರ ದಾಳಿ ನಡೆಸಿದ್ದಾರೆ.

ನಾಗಠಾಣ ಶಾಸಕ ದೇವಾನಂದ ಚೌಹಾಣರ ಸಂಬಂಧಿ, ಆಪ್ತರ ಮನೆ ಮೇಲೆಯೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, 10.75 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಸಚಿವ ಶಿವಾನಂದ ಪಾಟೀಲ ಅವರ ಆಪ್ತರಾದ ಯಾಸೀನ್ ತುಂಬರಮಟ್ಟಿ, ಆರೀಫ್ ಕಾರಗಲೇಕರ್ ಅವರ ನಿವಾಸದ ಮೇಲೆ 10ಕ್ಕೂ ಅಧಿಕ ಅಧಿಕಾರಿಗಳ ತಂಡ ದಾಳಿ ನಡೆಸಿ, ಪರಿಶೀಲನೆ ನಡೆಸಿದರು ಎನ್ನಲಾಗಿದೆ.  ಪ್ರಮುಖವಾಗಿ ಯಾಸೀನ್ ತುಂಬರಮಟ್ಟಿ ಡಿಸಿಸಿ ಬ್ಯಾಂಕ್‌ನಲ್ಲಿ ಎಫ್‌ಡಿಸಿ ಆಗಿದ್ದು, ನಗದು ತೆಗೆದುಕೊಂಡು ಹೋಗುತ್ತಿದ್ದ ವೇಳೆ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ವಿಜಯಪುರ ಜಿಲ್ಲೆಯಲ್ಲಿ ಮೈತ್ರಿ ಅಭ್ಯರ್ಥಿ ಡಾ, ಸುನಿತಾ ಚಹ್ವಾಣ ಅವರ ಸಂಬಂಧಿಕರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಿದ್ದಾರೆ.

ನಾಗಠಾಣ ಜೆಡಿಎಸ್ ಶಾಸಕನ ಪತ್ನಿಯಾಗಿರುವ ಡಾ, ಸುನಿತಾ ಚವ್ವಾಣ ಜೆಡಿಎಸ್ ಅಭ್ಯರ್ಥಿ, ಶಾಸಕ ದೇವಾನಂದ ಸಂಬಂಧಿ ರಾಮಚಂದ್ರ ದೊಡ್ಡಮನಿ ಹಾಗೂ ಆಪ್ತ ದೇವಪ್ಪ ತದ್ದೇವಾಡಿ ಮನೆ ಮೇಲೆ ದಾಳಿ ನಡೆದಿದೆ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ತಂಬಾ ಗ್ರಾಮದಲ್ಲಿರುವ ಮನೆ, ಕಚೇರಿಗಳ ಮೇಲೆ ಅಧಿಕಾರಿಗಳು ಐಟಿ ದಾಳಿ ನಡೆಸಿದ್ದಾರೆ.

10 ಅಧಿಕಾರಿಗಳು ಹಾಗೂ ಸಿಬ್ಬಂದಿ ತಂಡ ದಾಳಿ ನಡೆದಿದೆ. ಖಾಸಗಿ ಕಾರಿನಲ್ಲಿ ಬಂದು ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ಅಂದಾಜು 12 ಲಕ್ಷ ರೂಪಾಯಿ ಸಿಕ್ಕಿರುವ ಮಾಹಿತಿ ಇದೆ.

ಒಟ್ಟಿನಲ್ಲಿ ಐಟಿ ಅಧಿಕಾರಿಗಳು ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಒಂದೇ ದಿನ 4 ಕೋಟಿಗೂ ಹೆಚ್ಚು ಹಣವನ್ನು ಜಪ್ತಿ ಮಾಡಲಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin