ತುಮಕೂರು ಜಿಲ್ಲೆಗೆ ನೀರು ಹರಿಸಲು ಆದ್ಯತೆ : ಜೆ.ಸಿ.ಮಾಧುಸ್ವಾಮಿ

ಈ ಸುದ್ದಿಯನ್ನು ಶೇರ್ ಮಾಡಿ

ತಿಪಟೂರು, ಆ.22- ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಶಾಸಕ ಜೆ.ಸಿ.ಮಾಧುಸ್ವಾಮಿ ಕುಟುಂಬ ಸಮೇತರಾಗಿ ತಾಲ್ಲೂಕಿನ ಕೆರೆಗೋಡಿ ರಂಗಾಪುರ ಸುಕ್ಷೇತ್ರಕ್ಕೆ ಆಗಮಿಸಿ ಶ್ರೀಗಳಿಂದ ಆಶೀರ್ವಾದ ಪಡೆದರು.

ಕೆರೆಗೋಡಿ ರಂಗಾಪುರ ಸುಕ್ಷೇತ್ರಾಧ್ಯಕ್ಷ ಶ್ರೀ ಗುರುಪರದೇಶೀಕೇಂದ್ರ ಸ್ವಾಮೀಜಿ , ಜಿಲ್ಲೆಗೆ ಸಚಿವ ಸ್ಥಾನ ದೊರೆತಿರುವುದು ನಿಜಕ್ಕೂ ಸಂತಸದ ಸಂಗತಿ. ರೈತರಿಗೆ ಪ್ರಮಾಣಿಕ ಸೇವೆ ಮಾಡುತ್ತಾ ಬಂದಿರುವವರಿಗೆ ಸಚಿವ ಸ್ಥಾನ ಸಿಕ್ಕಿರುವುದು ಇನ್ನೂ ಹೆಚ್ಚಿನ ಸೇವೆಯನ್ನು ಮಾಡಲು ಅನುಕೂಲವಾಗುತ್ತದೆ. ರೈತರಿಗೆ, ಸಾರ್ವಜನಿಕರಿಗೆ ಉತ್ತಮ ಸೇವೆಯನ್ನು ನೀಡುವಂತೆ ಆಶೀರ್ವದಿಸಿದರು.

ಈ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ನೂತನ ಸಚಿವರು, ತುಮಕೂರು ಜಿಲ್ಲೆಯಲ್ಲಿ ಮಳೆ ಇಲ್ಲದೆ ಬರಗಾಲ ಆವರಿಸಿದ್ದು, ರೈತರ ಬದುಕು ಶೋಚನೀಯವಾಗಿದ್ದು, ಜಿಲ್ಲೆಯ ಎಲ್ಲಾ ಕೆರೆಗಳನ್ನು ತುಂಬಿಸುವಲ್ಲಿ ಪ್ರಮುಖ ಆದ್ಯತೆ ವಹಿಸಲಿದ್ದೇನೆ ಎಂದರು.

ಜಿಲ್ಲೆಯಲ್ಲಿ ಅಂತರ್ಜಲ ಪಾತಾಳ ಸೇರಿದ್ದು, ಸಾವಿರ ಅಡಿಗೂ ಹೆಚ್ಚು ಆಳಕ್ಕೆ ಕೊಳವೆ ಬಾವಿ ಕೊರೆದರೂ ನೀರು ಸಿಗುವುದು ಕಷ್ಟವಾಗಿದೆ. ಪ್ರಮುಖ ವಾಣಿಜ್ಯ ಬೆಳೆಗಳಾದ ತೆಂಗು, ಅಡಿಕೆ ವಿನಾಶದಂಚಿನಲ್ಲಿದ್ದು, ರೈತರ ಬದುಕು ಕಷ್ಟಕರವಾಗಿದೆ. ಇವುಗಳನ್ನೆಲ್ಲ ಮನಗಂಡಿರುವ ನಾನು ನೀರಿಗೆ ಹೆಚ್ಚಿನ ಪ್ರಾಮುಖ್ಯತೆ ವಹಿಸಿದ್ದು, ಮೊದಲಿನಿಂದಲೂ ತುಮಕೂರು ಜಿಲ್ಲೆಗೆ ನೀರು ತರಬೇಕೆಂಬುದು ಕನಸು ನನ್ನದಾಗಿದ್ದು, ಆ ಕನಸನ್ನು ನಾನು ಸಚಿವನಾದ ಮೇಲೆ ಈಡೇರಿಸುತ್ತೇನೆ. ರೈತರ ಕಷ್ಟಗಳಿಗೆ ಸ್ಪಂದಿಸುತ್ತೇನೆಂದು ತಿಳಿಸಿದರು.

ಶಾಸಕ ಬಿ.ಸಿ.ನಾಗೇಶ್, ವೀರಶೈವ ಮಹಾಸಭಾದ ಮಾಜಿ ಅಧ್ಯಕ್ಷ ನಿರಂಜನಮೂರ್ತಿ, ನಗರಸಭಾ ಸದಸ್ಯ ರಾಮಮೋಹನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Facebook Comments