ದೋಸ್ತಿ ಸರ್ಕಾರಕ್ಕೆ ಗಂಡಾಂತರವಾಗುವುದೇ ಬೆಳಗಾವಿಯ ಬಂಡಾಯ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಳಗಾವಿ,ಏ.22- ಲೋಕಸಭೆ ಚುನಾವಣೆಯ ಮತದಾನಕ್ಕೆ ಒಂದೇ ದಿನ ಬಾಕಿ ಇರುವಾಗ ಸೋಲು ಗೆಲುವು ಲೆಕ್ಕಾಚಾರಗಳ ಜೊತೆಗೆ ರಾಜ್ಯದಲ್ಲಿಯ ಮೈತ್ರಿ ಸರಕಾರದ ಅಳಿವು ಉಳಿವಿನ ಬಗೆಗೂ ವ್ಯಾಪಕ ಚರ್ಚೆ ರಾಜಕೀಯ ವಲಯದಲ್ಲಿ ಆರಂಭವಾಗಿದೆ.

ಕಳೆದ ವರ್ಷದ ಆಗಸ್ಟ್ ತಿಂಗಳಿನಿಂದ ಬಂಡಾಯದ ಬಾವುಟ ಹಾರಿಸಿ ಮಂತ್ರಿ ಸ್ಥಾನವನ್ನು ಕಳೆದುಕೊಂಡು ಸದ್ಯ ಬಿಜೆಪಿಯ ಬಾಗಿಲಲ್ಲಿಯೇ ನಿಂತಿರುವ ಗೋಕಾಕ ಕಾಂಗ್ರೆಸ್ ಶಾಸಕ ರಮೇಶ ಜಾರಕಿಹೊಳಿ ಅವರು ನಾಳೆಯ ಮತದಾನದ ನಂತರ ಚರ್ಚೆಗೆ ಗ್ರಾಸವಾಗಲಿದ್ದಾರೆ.

ಸಚಿವ ಸತೀಶ ಜಾರಕಿಹೊಳಿ ಬೆಳಗಾವಿಯಲ್ಲಿ ನೀಡಿದ ಹೇಳಿಕೆ ರಮೇಶ ಬಂಡಾಯಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ. ರಮೇಶ ಕಾಂಗ್ರೆಸ್ಸಿನಲ್ಲಾದರೂ ಇರಬೇಕು. ಇಲ್ಲವೇ ಬಿಜೆಪಿಗಾದರೂ ಹೋಗಬೇಕು. ಸುಮ್ಮನೆ ಕತ್ತಲಲ್ಲಿ ಕುಳಿತು ಕಲ್ಲು ಒಗೆಯಬಾರದು. ಎಂದು ಸತೀಶ ಹೇಳಿರುವುದು ಸಹೋದರರ ನಡುವಣ ಕಂದಕವನ್ನು ಮತ್ತಷ್ಟು ಹೆಚ್ಚಿಸಿದೆ.

ರಮೇಶ ಕಳೆದ ಆರೇಳು ತಿಂಗಳಿಂದ ನಡೆಸಿರುವ ಸರಕಾರ ಉರುಳಿಸುವ ಪ್ರಕ್ರಿಯೆ ಈಗ ಅಂತಿಮ ಹಂತ ತಲುಪಿದೆ. ಆಪ್ತ ಮೂಲಗಳ ಪ್ರಕಾರ ನಾಲ್ಕು ದಿನಗಳ ಹಿಂದೆ ಮಧ್ಯರಾತ್ರಿ ಹುಬ್ಬಳ್ಳಿಯ ಗೋಕುಲ ರಸ್ತೆಯ ಡೆಲಿಶನ್ ಹೋಟೆಲ್ ತಲುಪಿದ ಬಿಜೆಪಿ ಅಧ್ಯಕ್ಷ ಆಮಿತ್ ಶಾ ಜೊತೆಗೆ ರಮೇಶ ಮಾತುಕತೆಯಾಗಿದೆ.

1999ರಿಂದ ಐದು ಬಾರಿ ಗೋಕಾಕದಿಂದ ಆಯ್ಕೆಯಾಗುತ್ತಲೇ ಬಂದಿರುವ ರಮೇಶ ಆ ಮತಕ್ಷೇತ್ರದ ಮೇಲೆ ಇಪ್ಪತ್ತು ವರ್ಷಗಳಿಂದ ಹಿಡಿತ ಹೊಂದಿದ್ದಾರೆ ಎಂಬುದನ್ನು ಸ್ವತಃ ಸತೀಶ ಒಪ್ಪಿಕೊಳ್ಳುತ್ತಾರೆ. ರಮೇಶ ಮತ್ತು ಸತೀಶರ ರಾಜಕೀಯ ನಡೆ ಮತ್ತು ಸ್ವಭಾವವನ್ನು ಚೆನ್ನಾಗಿ ಬಲ್ಲ ಲಖನ್, ಮುಂದಿನ ನಿರ್ಧಾರವನ್ನು ಅಳೆದು ತೂಗಿಯೇ ಕೈಗೊಳ್ಳುವ ಸೂಚನೆಗಳಿವೆ.

ಲಖನ್ ಅವರೇ ರಮೇಶ ಅವರ ಉತ್ತರಾಧಿಕಾರಿ ಎಂದು ಘೋಷಿಸಿರುವ ಸತೀಶ, ಗೋಕಾಕದಲ್ಲಿ ನಡೆಯುವ ಅಸೆಂಬ್ಲಿ ಚುನಾವಣೆಯಲ್ಲಿ ಲಖನ್ ಅವರೇ ಕಾಂಗ್ರೆಸ್ ಅಭ್ಯರ್ಥಿ ಎಂದೂ ತಿಳಿಸಿದ್ದಾರೆ.

ಸದ್ಯ ನಡೆದಿರುವ ಸಹೋದರರ ರಾಜಕೀಯ ಕಾಳಗ ಕೇವಲ ಗೋಕಾಕಕ್ಕೆ ಸೀಮಿತವಾಗುವ ಬದಲು ಅಸೆಂಬ್ಲಿ ಚುನಾವಣೆ ನಡೆದರೆ ರಮೇಶ ಗೋಕಾಕನಿಂದ, ಸತೀಶ ಅವರು ಸದ್ಯ ಪ್ರತಿನಿಧಿಸುವ ಯಮಕನಮರಡಿಗೆ ಶಿಫ್ಟ ಆಗಿ ಅಲ್ಲಿ ಬಿಜೆಪಿಯಿಂದ ಕಣಕ್ಕಿಳಿಯುವ ಯೋಚನೆಯೂ ರಮೇಶ ತಲೆಯಲ್ಲಿದೆ.

ಮಂಗಳವಾರದ ಮತದಾನದ ನಂತರ ನಡೆಯುವ ಬೆಳವಣಿಗೆಯಲ್ಲಿ ರಮೇಶ ಜೊತೆಗೆ ನಾಲ್ವರು ಶಾಸಕರು ಹಾಗೂ ಸತೀಶ ಜಾರಕಿಹೊಳಿ ಅವರ ಆಪ್ತ ಕಾರ್ಯಕರ್ತರನ್ನು ರಮೇಶ ಜಾರಕಿಹೊಳಿ ಬಿಜೆಪಿಗೆ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಮಾತು ಇದೀಗ ಹರದಾಡುತ್ತಿದೆ.

ರಮೇಶ ಸಹಿತ ನಾಲ್ವರೇ ರಾಜಿನಾಮೆ ನೀಡಿದರೂ ಬಲವು 110ಕ್ಕೆ ಕುಸಿದು ಸರಕಾರ ಅಲ್ಪಮತಕ್ಕೆ ಜಾರಬಹುದು. ಈ ಹಂತದಲ್ಲಿ ರಾಜ್ಯಪಾಲರು ವಿಧಾನಸಭೆಯನ್ನು ತಾತ್ಕಾಲಿಕವಾಗಿ ಅಮಾನತ್ತಿನಲ್ಲಿ ಇಡಬಹುದು.ಉನ್ನತ ಮೂಲಗಳ ಪ್ರಕಾರ, ಬಿಜೆಪಿಯು ಸದ್ಯ ಸರಕಾರ ರಚಿಸುವ ಗೋಜಿಗೆ ಹೋಗುವುದಿಲ್ಲ.

ಬದಲಾಗಿ, ಮೇ 23ರವರೆಗೆ ಕಾಯ್ದು ನೋಡುವ ತಂತ್ರವನ್ನು ಅನುಸರಿಸಲಿದೆ. ಆಮೇಲೆ ಅಗತ್ಯ ಬೆಂಬಲ ಸಿಕ್ಕರೆ ಹೊಸ ಸರಕಾರ ರಚನೆ, ಇಲ್ಲವಾದರೆ ಅಕ್ಟೋಬರ್‍ನಲ್ಲಿ ಮಹಾರಾಷ್ಟ್ರ ಮತ್ತು ಹರಿಯಾಣ ಜೊತೆಗೆ ಕರ್ನಾಟಕದಲ್ಲೂ ಮತ್ತೋಮ್ಮೆ ವಿಧಾನಸಭೆ ಉಪಚುನಾವಣೆ ನಡೆಯಬಹುದು.

ಕಳೆದ ವರ್ಷದ ಮೇ ತಿಂಗಳಲ್ಲಿ ಮೈತ್ರಿ ಸರಕಾರ ಅಧಿಕಾರಕ್ಕೆ ಬಂದ ಮೂರೇ ತಿಂಗಳಲ್ಲಿ ಬೆಳಗಾವಿಯಿಂದ ಆರಂಭವಾದ ಬಂಡಾಯದ ಬೆಂಕಿ ಸರಕಾರವನ್ನೇ ಆಹುತಿ ತೆಗೆದುಕೊಳ್ಳುವ ಮಟ್ಟ ತಲುಪಿದೆ.

ಸರಕಾರ ಉರುಳಿ ಬಿಜೆಪಿ ಕೈಗೆ ಅಧಿಕಾರ ಸಿಗಲೇಬಾರದೆಂದು ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಪಣತೊಟ್ಟಿವೆ. ಆದರೆ ಜಾರಕಿಹೊಳಿ ರಾಜಕೀಯ ಮೇಲಾಟದಿಂದ ಇದೀಗ ದೊಸ್ತಿ ಸರಕಾರ ಆತಂಕಕ್ಕೆ ಎಡೆ ಮಾಡಿಕೊಟ್ಟಿರುವುದು ನಿಜ. ಒಟ್ಟನಲ್ಲಿ ಬಿಜೆಪಿಬಾಗಿಲಿನಲ್ಲಿ ನಿಂತಿದ್ದ ರಮೇಶ ಜಾರಕಿಹೊಳಿ ಬಂಡಾಯಕ್ಕೆ ಇದೀಗ ರಾಜ್ಯದಲ್ಲಿ ತ್ರೀವ ಕುತೂಹಲ ಕೆರಳಿಸಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ