ಸಿಡಿ ಲೇಡಿ ವಿಡಿಯೋ ಹರಿಬಿಟ್ಟ ಪೋಲೀಸರ ವಿರುದ್ಧ ವಕೀಲ ಜಗದೀಶ್ ಗರಂ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮಾ.31- ಸಿಡಿ ಪ್ರಕರಣದಲ್ಲಿ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿ ಯುವತಿ ತೆರಳುವ ಸಂದರ್ಭದಲ್ಲಿ ಹಿಂಬದಿಯಿಂದ ಚಿತ್ರೀಕರಣ ಮಾಡಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವಕೀಲರಾದ ಜಗದೀಶ್ ಒತ್ತಾಯಿಸಿದ್ದಾರೆ.

ಇಂದು ಬೆಳಗ್ಗೆ ಫೇಸ್‍ಬುಕ್ ಲೈವ್‍ನಲ್ಲಿ ಮಾತನಾಡಿರುವ ಅವರು, ಹೇಳಿಕೆ ದಾಖಲಿಸಿಕೊಳ್ಳುವ ಸಲುವಾಗಿ ಪೊಲೀಸರು, ನ್ಯಾಯಾಧೀರು ಹಾಗೂ ಕೆಲ ವಕೀಲರನ್ನು ಹೊರತುಪಡಿಸಿ ಬೇರೆ ಯಾರು ಇರಲಿಲ್ಲ. ವಿಡಿಯೋ ಚಿತ್ರೀಕರಣ ಮಾಡಲು ಪೊಲೀಸರಿಂದ ಮಾತ್ರ ಸಾಧ್ಯ. ಉದ್ದೇಶ ಪೂರ್ವಕವಾಗಿಯೇ ಕೆಪಿಸಿಸಿಯ ಕಾನೂನು ಘಟಕದ ಸೂರ್ಯಮುಕುಂದ್‍ರಾಜ್ ಅವರನ್ನೂ ಚಿತ್ರೀಕರಣ ಮಾಡಿ ಮಾಧ್ಯಮಗಳಿಗೆ ಮಾಹಿತಿ ನೀಡಲಾಗಿದೆ. ಈ ಮೂಲಕ ಆರೋಪಿಗೆ ಪೂರಕವಾದ ಮಾಹಿತಿ ಒದಗಿಸಿ ಪ್ರಕರಣ ದುರ್ಬಲಗೊಳ್ಳಲು ಹಾಗೂ ಸಾಕ್ಷ್ಯ ನಾಶ ಮಾಡಲು ವಿಶೇಷ ತನಿಖಾ ದಳದ ಅಧಿಕಾರಿಗಳೇ ನೆರವಾಗುತ್ತಿದ್ದಾರೆ ಎಂದು ಜಗದೀಶ್ ಆರೋಪಿಸಿದ್ದಾರೆ.

ನಾವು ಈ ವಿಷಯಗಳನ್ನು ಮುಂದಿಟ್ಟುಕೊಂಡು ಹೈಕೋರ್ಟ್‍ಗೆ ಮೇಲ್ಮನವಿ ಸಲ್ಲಿಸುತ್ತೇವೆ. ಪ್ರಕರಣದಲ್ಲಿ ನೇರವಾಗಿ ಐಪಿಸಿ ಸೆಕ್ಷನ್ 376 ಅಡಿ ಅತ್ಯಾಚಾರ ಪ್ರಕರಣ ದಾಖಲಿಸುವಂತೆ ನ್ಯಾಯಲಕ್ಕೆ ಮನವಿ ಮಾಡಲಾಗುವುದು ಎಂದು ಹೇಳಿದ್ದಾರೆ. ತಮ್ಮ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬರುತ್ತಿರುವ ಟ್ರೋಲ್‍ಗಳಿಗೂ ಜಗದೀಶ್ ಉತ್ತರ ನೀಡಿದ್ದು, ನಾನು ಭೂಗಳ್ಳರು, ಭ್ರಷ್ಟರ ವಿರುದ್ಧ ಹೋರಾಟ ಮಾಡಿದ್ದಕ್ಕಾಗಿ ನನ್ನ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿತ್ತು.

ನ್ಯಾಯಾಲಯದಲ್ಲಿ ಸ್ವಯಂ ನಾನೇ ವಾದ ಮಾಡಿ ಖುಲಾಸೆಗೊಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೇನೆ. ಅತ್ಯಂತ ಪ್ರಭಾವಿ ವಿರುದ್ಧ ಹೋರಾಟಕ್ಕಿಳಿದಿದ್ದು, ಯುವತಿಗೆ ನ್ಯಾಯ ಕೊಡಿಸಲು ಹೋರಾಡುತ್ತಿದ್ದೇನೆ. ಈ ಸಂದರ್ಭದಲ್ಲಿ ನನ್ನ ತೇಜೋವಧೆ ಮಾಡುವ ಪ್ರಯತ್ನ ನಡೆಯುತ್ತಿವೆ. ಅದ್ಯಾವುದಕ್ಕೂ ನಾವು ಹೆದರುವುದಿಲ್ಲ ಎಂದು ಜಗದೀಶ್ ಹೇಳಿದ್ದಾರೆ.

Facebook Comments