ಕೈಗಾರಿಕೆಗಳ ಬೆಳವಣಿಗೆಗೆ ಶೀಘ್ರ ಹೂಡಿಕೆದಾರರ ಸಮಾವೇಶ : ಶೆಟ್ಟರ್
ಹುಬ್ಬಳ್ಳಿ,ಸೆ.22-ಕೈಗಾರಿಕೆಗಳು ಬೆಂಗಳೂರು ಕೇಂದ್ರಿತವಾಗುವುದನ್ನು ತಪ್ಪಿಸಿ ರಾಜ್ಯದ ಇತರ ಕಡೆಗಳಲ್ಲೂ ಉದ್ಯಮ ಬೆಳವಣಿಗೆ ಉದ್ದೇಶದಿಂದಲೇ ಈ ಇಲಾಖೆಯನ್ನು ಬಯಸಿ ಪಡೆದುಕೊಂಡಿದ್ದೇನೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಹೇಳಿದರು.
ನಗರದ ಕರ್ನಾಟಕ ವಾಣಿಜ್ಯೊದ್ಯಮ ಸಂಸ್ಥೆ ವತಿಯಿಂದ ಚಂದ್ರವದನ ದೇಸಾಯಿ ಸಭಾಭವನದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ರಾಜ್ಯದ ಯಾವ ಭಾಗದಲ್ಲಿ ಕೈಗಾರಿಕೆಗಳಿಲ್ಲವೊ ಅಲ್ಲಿ ಸ್ಥಾಪನೆಗೆ ಆದ್ಯತೆ ನೀಡುತ್ತೇವೆ. ಹುಬ್ಬಳ್ಳಿ- ಧಾರವಾಡಕ್ಕೆ ಕೈಗಾರಿಕೆಗಳನ್ನು ತರಲು ಇಲ್ಲಿ ಶೀಘ್ರ ಹೂಡಿಕೆದಾರರ ಸಭೆ ನಡೆಸುತ್ತೇವೆ. ಯಾರೇ ಉದ್ಯಮ ಸ್ಥಾಪನೆಗೆ ಮುಂದೆ ಬಂದರೂ ಕೆಐಎಡಿಬಿಯಿಂದ ಭೂಮಿ ಕೊಡಲು ಸಿದ್ಧ ಎಂದರು.
ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೆಲೆ ಈವರೆಗೆ ಸ್ಥಗಿತವಾಗಿದ್ದ ಹಲವು ಕಾಮಗಾರಿಗಳಿಗೆ ಚಾಲನೆ ನೀಡಿ ವೇಗ ನೀಡಲಾಗಿದೆ. ಅವಳಿ ನಗರದ ಒಳಚರಂಡಿ ಜಾಲ ಬಲಪಡಿಸಲು 430ಕೋಟಿ ರೂ.ಗಳ ಪ್ರಸ್ತಾವನೆಯನ್ನು ಅಮೃತ ಯೋಜನೆಗೆ ಸಲ್ಲಿಸಲಾಗಿದೆ. ಟೆಂಡರ್ ಶ್ಯೂರ್ ರಸ್ತೆ ಮಾದರಿಯಾಗಿದ್ದು, ಅದನ್ನು ಇತರ ರಸ್ತೆಗಳಿಗೂ ಅನ್ವಯಿಸುವ ಆಶಯ ಇದೆ ಎಂದರು.
ಕೇಂದ್ರ ಗಣಿ ಮತ್ತು ಕಲ್ಲಿದ್ದಲು ಖಾತೆ ಸಚಿವ ಪ್ರಲ್ಹಾದ ಜೋಷಿ ಮಾತನಾಡಿ, ಈಗಾಗಲೇ ಹು-ಧಾ ಅಭಿವೃದ್ಧಿ ವೇದಿಕೆ ರಚಿಸಲಾಗಿದೆ. ವಾಣಿಜ್ಯೊದ್ಯಮ ಸಂಸ್ಥೆ ಸೇರಿ ಎಲ್ಲರೂ ಒಂದೇ ವೇದಿಕೆ ಅಡಿ ಅಭಿವೃದ್ಧಿ ಚರ್ಚೆ ಮಾಡಬಹುದು. ಗುಜರಾತ್ನಲ್ಲಿ ಪ್ರಾದೇಶಿಕ ಹೂಡಿಕೆ ಕಾನೂನು ಇದ್ದು, ನಿಯೋಗ ಹೋಗಿ ಅಧ್ಯಯನ ನಡೆಸುವುದು ಸೂಕ್ತ ಎಂದು ಸಲಹೆ ನೀಡಿದರು.
ಪ್ಲಾಸ್ಟಿಕ್ ಬೇಡ: ಸನ್ಮಾನ ಸಂದರ್ಭದಲ್ಲಿ ಪ್ಲಾಸ್ಟಿಕ್ ಸುತ್ತಿದ ಹೂಗುಚ್ಛ ತಿರಸ್ಕರಿಸಿದ ಜೋಷಿ, ಅದೇ ರೀತಿ ವಾಣಿಜ್ಯೊದ್ಯಮ ಸಂಸ್ಥೆ ಪ್ಲಾಸ್ಟಿಕ್ ವಿರುದ್ಧ ಆಂದೊಲನ ಮಾಡಬೇಕು, ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು. ಮುಖ್ಯಮಂತ್ರಿಯವರ ಕಾನೂನು ಸಲಹೆಗಾರ ಮೋಹನ ಲಿಂಬಿಕಾಯಿ, ಚಿಕ್ಕೊಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಸಚಿವರನ್ನು ಸನ್ಮಾನಿಸಲಾಯಿತು.
ಸಂಸ್ಥೆಯ ಮಾಜಿ ಅಧ್ಯಕ್ಷರಾದ ಶಂಕ್ರಣ್ಣ ಮುನವಳ್ಳಿ, ರಮೇಶ್ ಪಾಟೀಲ, ವಸಂತ ಲದವಾ, ಎಂ.ಸಿ. ಹಿರೇಮಠ, ಪದಾಧಿಕಾರಿಗಳಾದ ಮಹೇಂದ್ರ ಲದ್ದಡ, ಅಶೊಕ ತೊಳನವರ, ಅಶೋಕ್ ಗಡದ, ವಾಣಿಜ್ಯೊದ್ಯಮ ಸಂಸ್ಥೆ ಅಧ್ಯಕ್ಷ ವಿ.ಪಿ. ಲಿಂಗನಗೌಡ್ರ , ಗೌರವ ಕಾರ್ಯದರ್ಶಿ ವಿನಯ ಜವಳಿ ಉಪಸ್ಥಿತರಿದ್ದರು..
ಕೇಂದ್ರಿಕೃತ ವ್ಯವಸ್ಥೆ: ವಿವಿಧ ಇಲಾಖೆಯಲ್ಲಿ ಮಹಿಳೆಯರಿಗಾಗಿ ಇರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಲು ಕೇಂದ್ರಿಕೃತ ವ್ಯವಸ್ಥೆ ಮಾಡಿ ನೊಡಲ್ ಅಧಿಕಾರಿ ನೇಮಕ ಮಾಡುವ ಯೋಚನೆ ಇದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು. ತಾವು ಹಾಗೂ ತಮ್ಮ ಪತಿ ರಾಜಕೀಯದಲ್ಲಿ ಮುಂದೆ ಬರಲು ಜಗದೀಶ ಶೆಟ್ಟರ್ ಹಾಗೂ ಪ್ರಲ್ಹಾದ ಜೋಷಿ ಅವರೇ ಕಾರಣ ಎಂದೂ ಹೇಳಿದರು.