“ಬಿಎಸ್‌ವೈ ಆಡಿಯೋ ರೆಕಾರ್ಡ್ ಮಾಡಿದ ಬ್ರಹ್ಮ ಯಾರೆಂದು ಮೊದಲು ತಿಳಿಸಿ ನಂತರ ಟೀಕಿಸಿ”

ಈ ಸುದ್ದಿಯನ್ನು ಶೇರ್ ಮಾಡಿ

ಹುಬ್ಬಳ್ಳಿ, ನ.3- ಬಿಎಸ್‌ವೈ ಆಡಿಯೋ ರೆಕಾರ್ಡ್ ಮಾಡಿದ್ದು ಯಾರು? ಅದನ್ನು ರಿಲೀಸ್ ಮಾಡಿದ್ದು ಯಾರು? ಇದರ ಬ್ರಹ್ಮ ಯಾರು ಎಂಬುದನ್ನು ತಿಳಿಸಿ ನಂತರ ಕಾಂಗ್ರೆಸ್‌ನವರು ಟೀಕೆ ಮಾಡಲಿ ಎಂದು ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಿಯೋ ರೆಕಾರ್ಡ್ ಮಾಡಿದ್ದು ಯಾರು, ಬಿಡುಗಡೆ ಮಾಡಿದ್ದು ಯಾರು ಎಂಬುದನ್ನು ಮೊದಲು ಕಾಂಗ್ರೆಸ್ ಹೇಳಲಿ. ಆಮೇಲೆ ಟೀಕೆ ಮಾಡಲಿ. ಈ ರೀತಿ ಅಪಪ್ರಚಾರ ಮಾಡುವುದು, ಸುಳ್ಳು ಸುದ್ದಿ ಹಬ್ಬಿಸುವುದು ಬಿಜೆಪಿ ಸರ್ಕಾರ ಹಾಗೂ ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ನಿರಂತರವಾಗಿ ನಡೆಯುತ್ತಿದೆ ಎಂದು ಹೇಳಿದರು.

ಸಿದ್ದರಾಮಯ್ಯನವರಿಗೆ ಬಿಜೆಪಿ ಬಗ್ಗೆ ಟೀಕೆ ಮಾಡುವುದಕ್ಕೆ ಯಾವುದೇ ವಿಷಯವಿಲ್ಲ. ಅವರು ನಮ್ಮ ಸರ್ಕಾರದ ವಿರುದ್ಧ ಹೋರಾಡುವುದಕ್ಕೆ ವಿಷಯವಿಲ್ಲದ ಹಿನ್ನೆಲೆಯಲ್ಲಿ ಸುಳ್ಳು ಆಡಿಯೋ-ವಿಡಿಯೋ ಇಟ್ಟುಕೊಂಡು ಜನರ ಮನಸ್ಸನ್ನು ಬೇರೆ ಕಡೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆಲ್ಲ ಜನ ಸ್ಪಂದಿಸುವುದಿಲ್ಲ. ಇದರಿಂದ ಕಾಂಗ್ರೆಸ್ ಇನ್ನೂ ಅಧೋಗತಿಗೆ ಹೋಗುತ್ತದೆ ಎಂದು ಹೇಳಿದರು.

ಬಿಎಸ್‌ವೈ ಹೆಸರು ಕೆಡಿಸಲು ಹುನ್ನಾರ :  ಹುಬ್ಬಳ್ಳಿ, ನ.3- ಮುಖ್ಯಮಂತ್ರಿ ಯಡಿಯೂರಪ್ಪನವರು ರಾಜ್ಯದಲ್ಲಿ ಉತ್ತಮ ಕೆಲಸ ಮಾಡುತ್ತಿದ್ದು, ಅವರ ಹೆಸರು ಕೆಡಿಸಲು ಈ ತರಹದ ಆಡಿಯೋ ವಿಡಿಯೋಗಳನ್ನು ವಿರೋಧ ಪಕ್ಷಗಳು ಹರಡುತ್ತಿವೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಹೇಳಿದರು.

ರಾಜ್ಯದಲ್ಲಿ ಜನ ಸಂಕಷ್ಟದಲ್ಲಿದ್ದಾರೆ. ಈ ಬಗ್ಗೆ ಗಮನ ಕೊಡಬೇಕು. ವಿಪಕ್ಷಗಳು ಕೂಡ ಜನರ ಸಂಕಷ್ಟಕ್ಕೆ ನೆರವಾಗಲು ಸಹಕರಿಸಬೇಕು. ಅನಗತ್ಯ ಆರೋಪಗಳನ್ನು ಕೈಬಿಡಬೇಕು. ಜಗತ್ತಿನಲ್ಲಿ ಬಿಜೆಪಿಯೇ ಅತಿ ದೊಡ್ಡ ಪಕ್ಷ. ಪಕ್ಷದಲ್ಲಿ ಯಾವುದೇ ಒಡಕಿಲ್ಲ. ಹೀಗಾಗಿ ಅವರಿಗೆ ಸಹಿಸಿಕೊಳ್ಳಲು ಆಗದ ಹಿನ್ನೆಲೆಯಲ್ಲಿ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಅಂಗಡಿ ಹೇಳಿದರು.

Facebook Comments