ಬಿಗ್ ಆಫರ್ ನೀಡಿದ ಹೈಕಮಾಂಡ್, ಜಗದೀಶ್ ಶೆಟ್ಟರ್‌ಗೆ ರಾಜ್ಯಪಾಲರಾಗೋ ಯೋಗ..!?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.27- ಮುಂಬರುವ ರಾಜ್ಯ ಬಜೆಟ್ ಅಧಿವೇಶನದ ನಂತರ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರು ರಾಜ್ಯಪಾಲರಾಗಿ ನೇಮಕಗೊಳ್ಳಲಿದ್ದಾರೆ. ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಮುಖ್ಯಮಂತ್ರಿ ಹುದ್ದೆಯಲ್ಲಿದ್ದ ಅವರು ಯಡಿಯೂರಪ್ಪನವರ ಸಚಿವ ಸಂಪುಟದಲ್ಲಿ ಮಂತ್ರಿಯಾಗಿರುವುದು ಪಕ್ಷದಲ್ಲಿ ಮುಜುಗರವುಂಟು ಮಾಡಿದೆ.

ಮುಖ್ಯಮಂತ್ರಿಯಾದವರು ಮರಳಿ ಮಂತ್ರಿಗಳಾಗುವುದು ಸರಿಯಲ್ಲ. ಅವರನ್ನು ಪಕ್ಷದ ಕೆಲಸಕ್ಕೆ ನಿಯೋಜಿಸಬೇಕು. ಇಲ್ಲವೇ ಯಾವುದಾದರೂ ರಾಜ್ಯದ ರಾಜ್ಯಪಾಲರನ್ನಾಗಿ ಮಾಡಬೇಕು ಎಂದು ಪಕ್ಷದ ಹಿರಿಯ ನಾಯಕರು ಸಲಹೆ ನೀಡಿದ್ದರು.  ಈ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿರುವ ಪಕ್ಷದ ಹೈಕಮಾಂಡ್ ಈ ಕುರಿತು ರಾಜ್ಯ ನಾಯಕರಿಗೆ ಸಿಗ್ನಲ್ ನೀಡಿದೆ.

ಬಜೆಟ್ ಅಧಿವೇಶನದ ನಂತರ ಜಗದೀಶ್ ಶೆಟ್ಟರ್ ಅವರನ್ನು ಯಡಿಯೂರಪ್ಪ ಅವರ ಸಂಪುಟದಿಂದ ಬಿಡುಗಡೆ ಮಾಡಿ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗುವುದು ಎಂದಿದ್ದಾರೆ.  ಜಗದೀಶ್ ಶೆಟ್ಟರ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರು. ಹಾಗೆಂದು ಮುಖ್ಯಮಂತ್ರಿಯಾದವರನ್ನು ಮಂತ್ರಿ ಮಾಡುವುದು ಸರಿಯಲ್ಲ. ಅದು ಶಿಷ್ಟಾಚಾರವೂ ಅಲ್ಲ ಎಂಬ ಸಲಹೆ ದಿಲ್ಲಿಯ ಹಲವು ನಾಯಕರಿಂದ ಮೋದಿ ಹಾಗೂ ಅಮಿತ್ ಷಾ ಅವರಿಗೆ ತಲುಪಿತ್ತು.

ಮುಖ್ಯಮಂತ್ರಿಗಳಾದವರು ಮಂತ್ರಿಗಳಾಗುವುದು ದೇಶದ ಇತಿಹಾಸದಲ್ಲಿ ನಡೆದಿದೆಯಾದರೂ ಕರ್ನಾಟಕದಲ್ಲಿ ಕಳೆದ ಕೆಲ ದಶಕಗಳಿಂದ ಇಂತಹ ಬೆಳವಣಿಗೆ ನಡೆದೇ ಇಲ್ಲ. ಹೀಗಾಗಿ ಸಚಿವ ಸಂಪುಟದ ಪ್ರಸ್ತಾಪವಾದರೆ ಸಾಕು, ಜಗದೀಶ್ ಶೆಟ್ಟರ್ ಅವರು ಮಂತ್ರಿಯಾಗಿರುವ ವಿಪರ್ಯಾಸದ ಕುರಿತು ಹಲವರು ಮಾತನಾಡುತ್ತಿದ್ದಾರೆ. ಹೀಗೆ ಜಗದೀಶ್ ಶೆಟ್ಟರ್ ಅವರನ್ನು ರಾಜ್ಯಪಾಲರನ್ನಾಗಿ ನೇಮಕ ಮಾಡಿದರೆ ಅವರಿಗೂ ಗೌರವ ನೀಡಿದಂತಾಗುತ್ತದೆ. ಹಾಗೆಯೇ ಯಡಿಯೂರಪ್ಪ ಅವರು ಕೂಡ ತಮ್ಮಿಚ್ಚೆಯಂತೆ ಮಂತ್ರಿ ಮಂಡಲ ಪುನರ್‍ರಚನೆಗೆ ಅನುವು ಮಾಡಿಕೊಟ್ಟಂತಾಗುತ್ತದೆ.

ಈ ಹಿನ್ನೆಲೆಯಲ್ಲಿ ವಿಷಯವನ್ನು ಗಂಭಿರವಾಗಿ ಪರಿಗಣಿಸಿ ಯಡಿಯೂರಪ್ಪ ಅವರ ಸಚಿವ ಸಂಪುಟದಿಂದ ಜಗದೀಶ್ ಶೆಟ್ಟರ್ ಅವರನ್ನು ಬಿಡುಗಡೆ ಮಾಡಿ ದೇಶದ ಯಾವುದಾದರೂ ರಾಜ್ಯದ ರಾಜ್ಯಪಾಲರನ್ನಾಗಿ ನೇಮಕ ಮಾಡಬೇಕು ಎಂಬ ಹಿರಿಯರ ಮಾತು ನರೇಂದ್ರಮೋದಿ ಹಾಗೂ ಅಮಿತ್ ಷಾ ಅವರಿಗೂ ಒಪ್ಪಿಗೆಯಾಗಿದೆ.

ಅಂದ ಹಾಗೆ ಕರ್ನಾಟಕದಿಂದ ಈ ಹಿಂದೆ ಹಿರಿಯ ನಾಯಕ ಡಿ.ಹೆಚ್.ಶಂಕರಮೂರ್ತಿ ಅವರನ್ನು ನೇಮಕ ಮಾಡುವ ಚಿಂತನೆ ನಡೆದಿತ್ತಾದರೂ ಕಾರಣಾಂತರಗಳಿಂದ ಈ ನೇಮಕಾತಿ ನಡೆದಿರಲಿಲ್ಲ. ಈಗ ಜಗದೀಶ್ ಶೆಟ್ಟರ್ ಅವರ ಹೆಸರು ರಾಜ್ಯಪಾಲ ಹುದ್ದೆಗೆ ಕೇಳಿ ಬಂದಿದ್ದು ಈ ನೇಮಕಾತಿ ನಡೆದರೆ ಬಿ.ರಾಚಯ್ಯ, ರಾಮಾಜೋಯಿಸ್,ಎಸ್.ಎಂ.ಕೃಷ್ಣ,ಮಾರ್ಗರೇಟ್ ಆಳ್ವ ಅವರ ಸಾಲಿಗೆ ಅವರ ಹೆಸರೂ ಸೇರ್ಪಡೆಯಾದಂತಾಗಲಿದೆ.

Facebook Comments