ಕರ್ನಾಟಕವನ್ನು ನಂ.1 ಕೈಗಾರಿಕಾ ಸ್ನೇಹಿ ರಾಜ್ಯವಾಗಿಸುವ ಗುರಿ : ಶೆಟ್ಟರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.28- ಕೈಗಾರಿಕಾ ಇಲಾಖೆಗೆ ಸಂಬಂಧಿಸಿದ ವಿಚಾರಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪನವರಿಂದ ಒಳ್ಳೆಯ ಸ್ಪಂದನೆ ಸಿಗುತ್ತಿದ್ದು, ರಾಜ್ಯವನ್ನು ದೇಶದಲ್ಲೇ ನಂಬರ್ ಒನ್ ಕೈಗಾರಿಕಾ ಸ್ನೇಹಿ ರಾಜ್ಯವಾಗಿಸುವ ಗುರಿ ಹೊಂದಿದ್ದೇವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.  ಪೀಣ್ಯ ಇಂಡಸ್ಟ್ರಿ ಅಸೋಸಿಯೇಷನ್ ಆಯೋಜಿಸಿದ್ದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಏಳಿಗೆ ಹಾಗೂ ಅಭಿವೃದ್ದಿಯ ಕಾರ್ಯಕ್ರಮದಲ್ಲಿ ಕೈಗಾರಿಕೋದ್ಯಮಿಗಳೊಂದಿಗೆ ಸಂವಾದ ನಡೆಸಿ ಅವರು ಮಾತನಾಡಿದರು.

ಈಗಾಗಲೇ ಬಹಳಷ್ಟು ಬಾರಿ ಪೀಣ್ಯ ಕೈಗಾರಿಕೋದ್ಯಮಿಗಳನ್ನು ಭೇಟಿಯಾಗಿ ಚರ್ಚೆ ನಡೆಸಿದ್ದೇನೆ. ಇಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ದಿಗೆ ಬೇಕಾಗಿದ್ದ ಅನುದಾನದ ಬಗ್ಗೆ ಸಿಎಂ ಗಮನಕ್ಕೆ ತರುವ ಮೂಲಕ ಸಚಿವ ಸಂಪುಟ ಸಭೆಯಲ್ಲಿ 50 ಕೋಟಿ ಮಂಜೂರು ಮಾಡಿಸಲಾಗಿದೆ. ಸುಮಾರು 9 ಲಕ್ಷ ಜನರಿಗೆ ಉದ್ಯೋಗ ನೀಡಿರುವ ಪೀಣ್ಯ ಕೈಗಾರಿಕಾ ಕ್ಷೇತ್ರದ ಕೊಡುಗೆ ರಾಜ್ಯ ಅಷ್ಟೇ ಅಲ್ಲ ದೇಶಕ್ಕೂ ಬಹಳಷ್ಟಿದೆ ಎಂದು ಶ್ಲಾಘಿಸಿದರು.

ಮುಖ್ಯಮಂತ್ರಿಗಳ ನೇತೃತ್ವದಲ್ಲಿ ದಾವೋಸ್ ಭೇಟಿ ಬಹಳ ಫಲಪ್ರದವಾಗಿದೆ. ಮೂರು ದಿನಗಳ ಕಾಲ ದಾವೋಸ್ ನಲ್ಲಿ ನಿರ್ಮಿಸಿದ್ದ ಕರ್ನಾಟಕ ಪೆವಿಲಿಯನ್ ನಲ್ಲಿ ಜಗತಿಕ ಉದ್ದಿಮೆದಾರ ನಾಯಕರನ್ನು ಭೇಟಿಯಾಗಿ ಅವರೊಂದಿಗೆ ಚರ್ಚೆ ನಡೆಸಿದ್ದೇವೆ. ಕೆಲವು ಆಡಳಿತಾತ್ಮಕ ಸಮಸ್ಯೆಗಳಿಂದ ಕೈಗಾರಿಕೋದ್ಯಮಿಗಳು ಬಂಡವಾಳ ಹೂಡಿಕೆಗೆ ಎದುರಾಗಿರುವ ಸಮಸ್ಯೆಗಳನ್ನು ಪರಿಹರಿಸಲು ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿದ್ದಾರೆ ಎಂದರು.

ಕೈಗಾರಿಕೆ ಸ್ಥಾಪಿಸಲು ಬೇಕಾಗುವ ಭೂಮಿ ಕೊಂಡುಕೊಳ್ಳಲು ಹಾಗೂ ಭೂ ಪರಿವರ್ತನೆ ಮಾಡಲು ಇರುವ ಕೆಲವು ನಿಯಮಗಳಿಗೆ ತಿದ್ದುಪಡಿ ತರಲು ಸಿಎಂ ಒಪ್ಪಿಗೆ ನೀಡಿದ್ದಾರೆ ಎಂದು ಹೇಳಿದರು.

ಪೀಣ್ಯ ಕೈಗಾರಿಕಾ ಪ್ರದೇಶದ ಅಭಿವೃದ್ದಿ: ಈ ಪ್ರದೇಶದ ಅಭಿವೃದ್ದಿಗೆ ಬಿಡುಗಡೆಯಾಗಿರುವ 30 ಕೋಟಿ ರೂ.ಅನುದಾನ ಸಮರ್ಪಕ ಬಳಕೆ ಆಗುವುದಕ್ಕೆ ಇರುವ ತೊಡಕುಗಳನ್ನು ನಿವಾರಿಸುವುದು ನಮ್ಮ ಮೊದಲ ಆದ್ಯತೆ ಆಗಿದೆ.ಈ ಅನುದಾನದ ಬಳಕೆಗೆ ನೇಮಕ ಮಾಡಿರುವ ಬಿಬಿಎಂಪಿ, ಎಕ್ಸಿಕ್ಯೂಟಿವ್ ಇಂಜಿನೀಯರ್ ಗಳ ಜೊತೆ ಸಭೆ ನಡೆಸಿ ಇದರ ಬಗ್ಗೆ ಚರ್ಚೆ ಮಾಡುವ ಭರವಸೆ ನೀಡಿದರು.

ಇಂಡಸ್ಟ್ರಿ ಟೌನ್ ಶಿಪ್ ಗೆ ಕೈಗಾರಿಕಾ ಇಲಾಖೆ ಒಪ್ಪಿಗೆ: ಪೀಣ್ಯ ಇಂಡಸ್ಟ್ರಿ ಅಸೋಸಿಯೇಷನ್ ಬೇಡಿಕೆಯಾದ ಟೌನ್‍ಶಿಪ್ ಗೆ ಅನುಮತಿ ನೀಡುವ ಕುರಿತು ಪ್ರತಿಕ್ರಿಯಿಸಿದ ಸಚಿವರು, ಕೈಗಾರಿಕಾ ಇಲಾಖೆಗೆ ಇಂಡಸ್ಟ್ರಿ ಟೌನ್ ಶಿಪ್‍ಗೆ ಸಂಪೂರ್ಣ ಒಪ್ಪಿಗೆ ಇದೆ. ಆದರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದ ನಗರಾಭಿವೃದ್ದಿ ಇಲಾಖೆಯೂ ಇದೀಗ ತನ್ನ ನಿರ್ಧಾರದಲ್ಲಿಬದಲಾವಣೆಯನ್ನು ತೋರಿಸುತ್ತಿದೆ ಎಂದರು.

ಪೀಣ್ಯದಲ್ಲಿ ಕೌಶಲ್ಯಾಭಿವೃದ್ದಿ ಕೇಂದ್ರ: ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಕೌಶಲ್ಯಾಭಿವೃದ್ದಿ ಕೇಂದ್ರ ಅವಶ್ಯಕತೆ ಬಹಳಷ್ಟಿದೆ. ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ಈ ಕೌಶಲ್ಯಾಭಿವೃದ್ದಿ ಕೇಂದ್ರವನ್ನು ಖಾಸಗಿ ಸಹಭಾಗಿತ್ವದಲ್ಲೋ ಅಥವಾ ಪೀಣ್ಯ ಇಂಡಸ್ಟ್ರಿ ಅಸೋಸಿಯೇಷನ್ ಸಹಭಾಗಿತ್ವದಲ್ಲಿ ನಿರ್ಮಿಸಬೇಕೊ ಎಂಬ ಬಗ್ಗೆ ಚರ್ಚಿಸುವುದಾಗಿ ತಿಳಿಸಿದರು.
ನವೆಂಬರ್ 3,4 ಮತ್ತು 5 ರಂದು ನಗರದ ಅರಮನೆ ಮೈದಾನದಲ್ಲಿ ನಡೆಯಲಿರುವ ಇನ್‍ವೆಸ್ಟ್ ಕರ್ನಾಟಕ 2020 ಜಗತಿಕ ಹೂಡಿಕೆದಾರರ ಸಮಾವೇಶಕ್ಕೆ ಕೈಜೋಡಿಸುವಂತೆ ಕರೆ ನೀಡಿದರು.

ಪೀಣ್ಯ ಇಂಡಸ್ಟ್ರಿಸ್ ಅಸೋಸಿಯೇಷನ್ ಅಧ್ಯಕ್ಷ ಶ್ರೀನಿವಾಸ್ ಅಸ್ರಣ್ಣ, ನಿಕಟಪೂರ್ವ ಅಧ್ಯಕ್ಷ ಗಿರಿ.ಎಂ.ಎಂ, ಹಿರಿಯ ಉಪಾಧ್ಯಕ್ಷ ಪ್ರಕಾಶ್ ಸಿ, ಉಪಾಧ್ಯಕ್ಷ ಪ್ರಾಣೇಶ್.ಸಿ, ಗೌರವ ಕಾರ್ಯದರ್ಶಿ ವಿಜಯಕುಮಾರ್ ಎಸ್ ಮಾಕಾಳ್ ಮತ್ತಿತರರು ಭಾಗವಹಿಸಿದ್ದರು.  ಇದೇ ವೇಳೆ ಸಂಘದ ವತಿಯಿಂದ ಸಚಿವ ಜಗದೀಶ್ ಶೆಟ್ಟರ್ ಅವರನ್ನು ಸನ್ಮಾನಿಸಿ ತಮ್ಮ ಬೇಡಿಕೆಗಳನ್ನುಸಲ್ಲಿಸಲಾಯಿತು.

Facebook Comments