ಬಿಜೆಪಿ ಅಭಿಯಾನಕ್ಕೆ ಅಭೂತಪೂರ್ವ ಯಶಸ್ಸು: ಶೆಟ್ಟರ್

ಈ ಸುದ್ದಿಯನ್ನು ಶೇರ್ ಮಾಡಿ

ಹುಬ್ಬಳ್ಳಿ,ಜೂ.15- ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರದ ಎರಡನೇ ಅವಧಿಯ ಮೊದಲ ವರ್ಷ ಪೂರ್ಣಗೊಂಡ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷ ಆಯೋಜಿಸಿದ್ದ ಸಮರ್ಥ ನಾಯಕತ್ವ ಸ್ವಾವಲಂಬಿ ಭಾರತ ಅಭಿಯಾನದ ಕರ್ನಾಟಕ ಜನ ಸಂವಾದ ಕಾರ್ಯಕ್ರಮ ಅಭೂತಪೂರ್ವ ಯಶಸ್ಸು ಕಂಡಿದೆ ಎಂದು ಬೃಹತ್, ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ವರ್ಚುಯಲ್ ರ್ಯಾಲಿಯಲ್ಲಿ ಭಾಗವಹಿಸಿದ ನಂತರ ಮಾತನಾಡಿದ ಅವರು, ಕೋವಿಡ್ ಸಂಕಷ್ಟ ಕಾಲದಲ್ಲಿ ಜನರನ್ನು ಯಶಸ್ವಿಯಾಗಿ ತಲುಪಲು ಆಯೋಜಿಸಿದ್ದ ಈ ಜನಸಂವಾದ ಕಾರ್ಯಕ್ರಮ ತನ್ನ ಗುರಿ ತಲುಪಿದೆ ಎಂದರು.

ಬಿಜೆಪಿ ಕಾರ್ಯಾಲಯಗಳು, ಮನೆ ಮನೆಗಳು ಹಾಗೂ ತಮ್ಮ ಮೊಬೈಲ್‍ಗಳ ಮೂಲಕ ಈ ರ್ಯಾಲಿಯಲ್ಲಿ ಭಾಗವಹಿಸಿದ ಕೋಟ್ಯಂತರ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ 6 ವರ್ಷಗಳಲ್ಲಿ ಅದರಲ್ಲೂ ವಿಶೇಷವಾಗಿ ತಮ್ಮ ಎರಡನೇ ಅವಧಿಯ ಮೊದಲ ವರ್ಷದ ಸಾಧನೆಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ. ಸಾಮಾಜಿಕ ಅಂತರ ಕಾಪಾಡಿಕೊಂಡು ಕೋಟ್ಯಂತರ ಕಾರ್ಯಕರ್ತರನ್ನು ತಲುಪಲು ಇಂತಹ ಹೊಸತನಗಳಿಗೆ ಯಾವಾಗಲೂ ಬಿಜೆಪಿ ಪಕ್ಷ ಸದಾ ಸಿದ್ಧವಾಗಿ ಹೊಸ ಗುರಿ ತಲುಪಿದೆ ಎಂದು ಹೇಳಿದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ತಮ್ಮ ಭಾಷಣದಲ್ಲಿ ತಿಳಿಸಿದಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕಳೆದ 6 ವರ್ಷಗಳಲ್ಲಿ 6 ದಶಕಗಳಿಂದ ಬಾಕಿಯಿದ್ದ ಕಾರ್ಯಗಳನ್ನು ಮಾಡುವಲ್ಲಿ ಯಶಸ್ವಿಯಾಗಿದೆ. ಅಲ್ಲದೆ, ಕೋವಿಡ್ ಮಹಾಮಾರಿಯನ್ನು ವಿಶ್ವದಲ್ಲೇ ಅತ್ಯಂತ ಪರಿಣಾಮಕಾರಿಯಾಗಿ ನಿಯಂತ್ರಿಸಿದೆ ಎಂದು ಹೇಳಿದರು.
ರಾಜ್ಯದಲ್ಲೂ ಕೂಡ ಕೋವಿಡ್-19 ನಿಯಂತ್ರಣದಲ್ಲಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲಾಗಿದೆ. ಇದರ ಬಗ್ಗೆ ಸ್ವತಃ ಜೆ.ಪಿ.ನಡ್ಡಾ ಅವರೇ ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

Facebook Comments