ಕೈಗಾರಿಕಾ ಟೌನ್‍ಶಿಪ್‍ಗಳ ಸ್ಥಾಪನೆಗೆ ಚಿಂತನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.27-ಉದ್ಯೋಗ ಸೃಷ್ಟಿ ಹಾಗೂ ಕೈಗಾರಿಕೆಗಳ ಅಭಿವೃದ್ಧಿಗಾಗಿ ರಾಜ್ಯದ ಹಲವೆಡೆ ಕೈಗಾರಿಕಾ ಟೌನ್‍ಶಿಪ್‍ಗಳನ್ನು ಸ್ಥಾಪಿಸುವ ಕುರಿತಂತೆ ರಾಜ್ಯ ಸರ್ಕಾರ ಉತ್ಸುಕವಾಗಿದ್ದು, ಸದ್ಯದಲ್ಲೇ ಸಚಿವ ಸಂಪುಟದ ಮುಂದೆ ತರಲಾಗುವುದು ಎಂದು ಮಧ್ಯಮ ಹಾಗೂ ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಇಂದಿಲ್ಲಿ ತಿಳಿಸಿದ್ದಾರೆ.

ಕಾಸಿಯಾದಲ್ಲಿ ಇಂದು ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೈಗಾರಿಕೆಗಳ ಬೆಳವಣಿಗೆಗೆ ನಮ್ಮ ಸರ್ಕಾರ ಹಲವಾರು ಯೋಜನೆಗಳನ್ನು ತಂದು ವೇಗವನ್ನು ಹೆಚ್ಚಿಸಲಾಗಿದೆ. ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರಲಾಗುವುದು.

ಇದಲ್ಲದೆ ಕೈಗಾರಿಕಾ ಸೌಲಭ್ಯ ತಿದ್ದುಪಡಿ ಕಾಯ್ದೆಗೆ ಸಂಪುಟ ಒಪ್ಪಿಗೆ ನೀಡಿರುವುದರಿಂದ ಸಾಕಷ್ಟು ಅನುಕೂಲಗಳಾಗಲಿವೆ. ಕೈಗಾರಿಕಾ ಕ್ಷೇತ್ರದಲ್ಲಿ ದೇಶದಲ್ಲೇ ಕರ್ನಾಟಕವನ್ನು ನಂ.1 ಸ್ಥಾನಕ್ಕೇರಿಸಲು ಸಂಕಲ್ಪ ತೊಡಲಾಗಿದೆ ಎಂದು ತಿಳಿಸಿದರು.

ಕೈಗಾರಿಕೆ ಸ್ಥಾಪಿಸಲು ಇದ್ದಂತಹ ಅಡೆತಡೆಗಳನ್ನು ನಿವಾರಿಸಲಾಗಿದೆ. ಸಣ್ಣ ಕೈಗಾರಿಕೆಗಳನ್ನು ಕೂಡ ಗಮನದಲ್ಲಿರಿಸಿಕೊಂಡು ಅವರ ಸಮಸ್ಯೆಗಳನ್ನು ಬಗೆಹರಿಸಲಾಗುತ್ತಿದೆ. ಕೈಗಾರಿಕಾ ಟೌನ್‍ಶಿಪ್‍ಗಳನ್ನು ಸ್ಥಾಪಿಸುವ ಕುರಿತಂತೆ ನಗರಾಭಿವೃದ್ಧಿ ಇಲಾಖೆಯೊಂದಿಗೆ ಮಾತುಕತೆ ನಡೆಸಲಾಗಿದೆ. ಅವರ ಮನವೊಲಿಸಿ ಇದನ್ನು ಸಾಧ್ಯವಾಗಿಸುವ ಪ್ರಯತ್ನವನ್ನು ಮಾಡುವುದಾಗಿ ಅವರು ತಿಳಿಸಿದರು.

ಕೆಐಎಡಿಬಿ ವತಿಯಿಂದ ಜಮೀನು ಪರಿವರ್ತನೆ ನಿಯಮಗಳನ್ನು ಕೂಡ ಸರಳೀಕರಿಸಲಾಗುತ್ತಿದೆ. ಉದ್ಯಮಿ ಸ್ನೇಹಿ ವಾತಾವರಣ ನಿರ್ಮಿಸಿ ಔದ್ಯೋಗಿಕ ಕ್ಷೇತ್ರದಲ್ಲಿ ಕರ್ನಾಟಕ ಪ್ರಗತಿಪಥದತ್ತ ಸಾಗುವುದು ನಿಶ್ಚಿತ ಎಂದರು.

ಕಾಸಿಯಾ ಅಧ್ಯಕ್ಷ ರಾಜು, ಉಪಾಧ್ಯಕ್ಷ ಅರಸಪ್ಪ ಸೇರಿದಂತೆ ಹಲವು ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಲಾಕ್‍ಡೌನ್ ಸಡಿಲಗೊಂಡ ನಂತರ ಕೈಗಾರಿಕೆಗಳನ್ನು ಆರಂಭಿಸಲು ಸಹಕರಿಸಿದ ಹಲವರನ್ನು ಇದೇ ವೇಳೆ ಸಚಿವರು ಸನ್ಮಾನಿಸಿದರು.

Facebook Comments