ಕೈಗಾರಿಕಾ ವ್ಯಾಜ್ಯಗಳನ್ನು ಶೀಘ್ರವಾಗಿ ಪರಿಹರಿಸಲು ಕ್ರಮ ಕೈಗೊಳ್ಳಿ : ಸಚಿವ ಜಗದೀಶ ಶೆಟ್ಟರ್‌

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು ಜುಲೈ 3: ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿಯಲ್ಲಿರುವ ಭೂ ಸ್ವಾಧೀನ ಹಾಗೂ ಹಂಚಿಕೆಯ ಬಗ್ಗೆ ಇರುವ ವ್ಯಾಜ್ಯಗಳನ್ನು ಶೀಘ್ರವಾಗಿ ಪರಿಹರಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳುವಂತೆ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಶ್ರೀ ಜಗದೀಶ ಶೆಟ್ಟರ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಂದು ಕರ್ನಾಟಕ ಉದ್ಯೋಗ ಮಿತ್ರ ಸಭಾಂಗಣದಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿಯ ಮುಂದುವರೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿಯ ಅಡಿಯಲ್ಲಿ ಹಲವಾರು ವ್ಯಾಜ್ಯಗಳಿಗೆ ಕೇವಲ ಮಧ್ಯಸ್ತಿಕೆಯ ಅವಶ್ಯಕತೆಯಿದೆ.

ಇಂತಹ ಪ್ರಕರಣಗಳನ್ನು ವೇಗವಾಗಿ ಪರಿಹರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಾಗಿದೆ. ಈ ಹಿನ್ನಲೆಯಲ್ಲಿ ಲೋಕ್‌ ಅದಾಲತ್‌ ಮೂಲಕ ಪರಿಹರಿಸಬಹುದಾದ ಪ್ರಕರಣಗಳ ಪಟ್ಟಿಯನ್ನು ತಯಾರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿಗೆ ಲಾಭ ಹಾಗೂ ಮಂಡಳಿಯ ಬಗ್ಗೆ ನ್ಯಾಯಾಲಯದಲ್ಲಿ ಹಿತಾಸಕ್ತಿಯನ್ನು ಕಾಪಾಡುವಂತಹ ಕೆಲಸ ಮಾಡುವ ಕಾನೂನು ಸಲಹೆಗಾರರ ತಂಡವನ್ನು ರಚಿಸುವಂತೆ ಸೂಚನೆ ನೀಡಿದರು.

ಅಲ್ಲದೆ, ಮಂಡಳಿಯ ವತಿಯಿಂದ ಭೂಸ್ವಾಧೀನ, ಹಂಚಿಕೆ, ಪರಿಹಾರ ಹಣ ವಿತರಣೆ ಸೇರಿದಂತೆ ಹಲವಾರು ಕಾರ್ಯಗಳಿಗೆ ಒಂದು ಕಾಲಮಿತಿಯ ನಿಯಮಗಳನ್ನು ರೂಪಿಸುವಂತೆ ಸೂಚಿಸಿದರು.

# ಕೈಗಾರಿಕಾ ಪ್ರದೇಶಗಳಲ್ಲಿ ಸಮಪರ್ಕ ವಿದ್ಯುತ್‌ ವ್ಯವಸ್ಥೆ:
ಕೈಗಾರಿಕ ಪ್ರದೇಶಾಭಿವೃದ್ದಿ ಮಂಡಳಿ ಆಯಾ ಪ್ರದೇಶಗಳಲ್ಲಿ ಸಮಪರ್ಕವಾದ ವಿದ್ಯುತ್‌ ವ್ಯವಸ್ಥೆ ದೊರೆಯುವಂತೆ ನೋಡಿಕೊಳ್ಳುವುದು ಅವಶ್ಯಕವಾಗಿದೆ. ಭೂ ಸ್ವಾಧೀನ ಹಾಗೂ ಹಂಚಿಕೆ ಪ್ರಕ್ರಿಯೆ ಮತ್ತು ಮೂಲಭೂತ ಸೌಕರ್ಯಗಳ ಜೊತೆಯಲ್ಲಿ ಕೈಗಾರಿಕೆಗಳು ಸಮರ್ಪಕವಾಗಿ ಮುನ್ನಡೆಯಲು ಅವಶ್ಯಕವಾಗಿರುವ ವಿದ್ಯುತ್‌ ಹಾಗೂ ನೀರಿನಂತಹ ಸೌಲಭ್ಯಗಳನ್ನು ನಾವು ಕಲ್ಪಿಸುವುದು ಅತ್ಯವಶ್ಯ. ಈ ನಿಟ್ಟಿನಲ್ಲಿ ವಾಟರ್‌ ಸೆಲ್‌ ನ ರೀತಿಯಲ್ಲಿ ಪವರ್ ಸೆಲ್‌ ಕೂಡಾ ರಚಿಸುವಂತೆ ಸೂಚನೆ ನೀಡಿದರು.

# ಅದಾಯ ಸಂಗ್ರಹಕ್ಕೆ ಆದ್ಯತೆ ನೀಡಿ:
ಮಂಡಳಿಯ ವತಿಯಿಂದ ಈಗಾಗಲೇ ಕೈಗಾರಿಕೆಗಳಿಗೆ ಹಂಚಿಕೆಯಾಗಿರುವ ಭೂಮಿಯಿಂದ ಬರಬೇಕಾಗಿರುವ ಶುಲ್ಕವನ್ನು ಸಂಗ್ರಹಿಸಲು ಕ್ರಮ ಕೈಗೊಳ್ಳಬೇಕಾಗಿದೆ, ಈ ನಿಟ್ಟಿನಲ್ಲಿ ಅಧಿಕಾರಿಗಳು ಕೈಗಾರಿಕೆಗಳಿಂದ ಸಂಗ್ರಹಿಸಬೇಕಾಗಿರುವ ಶುಲ್ಕದ ಬಗ್ಗೆ ಗಮನ ನೀಡುವಂತೆ ಸೂಚನೆ ನೀಡಿದರು.

# ಭೂ ಹಂಚಿಕೆ ಪತ್ರದ ಶೀಘ್ರ ವಿಲೇವಾರಿ:
ಕರ್ನಾಟಕ ರಾಜ್ಯದ ಏಕಗವಾಕ್ಷಿ ಮೂಲಕ ಅನುಮತಿ ಪಡೆದಿರುವಂತಹ ಕೈಗಾರಿಕೆಗಳಿಗೆ ಭೂ ಹಂಚಿಕೆ ಪತ್ರವನ್ನು ಕಾಲಮಿತಿಯಲ್ಲಿ ನೀಡಬೇಕು ಎಂದು ಸೂಚಿಸಿದರು. ಒಟ್ಟಾರೆಯಾಗಿ ಕಾಲಮಿತಿಯ ಹೊಸ ನಿಯಮವನ್ನು ಜಾರಿಗೆ ತರುವುದಲ್ಲದೆ ಕಚೇರಿಯ ಕೆಲಸಗಳಿಗೆ ವೇಗ ನೀಡಿ ಎಂದು ಹೇಳಿದರು.

ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ, ಕೈಗಾರಿಕಾ ಇಲಾಖೆ ಆಯುಕ್ತೆ ಶ್ರೀಮತಿ ಗುಂಜನ್ ಕೃಷ್ಣ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ ಹೆಚ್ ಶಿವಶಂಕರ್ ಸೇರಿದಂತೆ ಹಲವು ಅಧಿಕಾರಿಗಳು ಪಾಲ್ಗೊಂಡಿದ್ದರು

Facebook Comments