ಬೆಳಗಾವಿ ಲೋಕಸಭಾ ಉಪಚುನಾವಣೆ : ಬಿಜೆಪಿ ಅಭ್ಯರ್ಥಿಯಾಗಿ ಜಗದೀಶ್ ಶೆಟ್ಟರ್ ಕಣಕ್ಕೆ..?!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.29-ಕೇಂದ್ರ ಸಚಿವ ದಿ.ಸುರೇಶ್ ಅಂಗಡಿ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಅಚ್ಚರಿ ಬೆಳವಣಿಗೆಯಲ್ಲಿ ಸಚಿವ ಜಗದೀಶ್ ಶೆಟ್ಟರ್ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಬಿಜೆಪಿ ಮುಂದಾಗಿದೆ.

ಒಂದು ವೇಳೆ ಕಾಂಗ್ರೆಸ್‍ನಿಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸ್ಪರ್ಧೆ ಮಾಡಿದರೆ ಬಿಜೆಪಿಯಿಂದ ಕೈಗಾರಿಕಾ ಸಚಿವರೂ ಆಗಿರುವ ಜಗದೀಶ್ ಶೆಟ್ಟರ್ ಅಭ್ಯರ್ಥಿಯಾಗಿರುವುದು ಖಚಿತ ಎಂಬ ಮಾತು ಪಕ್ಷದ ವಲಯದಲ್ಲಿ ಕೇಳಿಬಂದಿದೆ.

ಬೆಳಗಾವಿ ರಾಜಕಾರಣದಲ್ಲಿ ಹಿಡಿತ ಸಾಸಿರುವ ಸತೀಶ್ ಜಾರಕಿಹೊಳಿ ಮುಂದೆ ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕಿಳಿಸಲು ಜಗದೀಶ್ ಶೆಟ್ಟರ್ ಅವರೇ ಸೂಕ್ತ ಅಭ್ಯರ್ಥಿ ಎಂಬುದು ವರಿಷ್ಠರ ಲೆಕ್ಕಾಚಾರವಾಗಿದೆ. ಈಗಾಗಲೇ ವರಿಷ್ಠರು ಕೂಡ ಶೆಟ್ಟರ್‍ಗೆ ಅಂತಹ ಸಂದರ್ಭ ಬಂದರೆ ಸ್ರ್ಪಸಲು ಮಾನಸಿಕವಾಗಿ ಸಿದ್ಧರಾಗಿ ಎಂಬ ಸಂದೇಶವನ್ನು ರವಾನಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ರ್ಪಸಲು ಪಕ್ಷದಲ್ಲಿ ಒಂದು ಡಜನ್‍ಗೂ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಸ್ವತಃ ಸುರೇಶ್ ಅಂಗಡಿ ಅವರ ಪತ್ನಿ, ಪುತ್ರಿ, ಅಂಗಡಿ ಅವರ ಸಹೋದರ, ಅವರ ಮಾವ, ಮಾಜಿ ಶಾಸಕ ಸಂಜಯ್ ಪಾಟೀಲ್ ಸೇರಿದಂತೆ ಅನೇಕರು ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ಯಾರಿಗೆ ಕೊಟ್ಟರೂ ಭಿನ್ನಮತ ಸೃಷ್ಟಿಯಾಗಿ ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದೆಂಬ ಆತಂಕದ ಹಿನ್ನೆಲೆಯಲ್ಲಿ ಕೇಂದ್ರ ವರಿಷ್ಠರು ಎಚ್ಚರಿಕೆಯ ಹೆಜ್ಜೆ ಇಟ್ಟಿದ್ದಾರೆ.

ಮುಂಬೈ ಕರ್ನಾಟಕ ಭಾಗದಲ್ಲಿ ವೀರಶೈವ ಲಿಂಗಾಯತ ಸಮುದಾಯದ ಮತಗಳು ಹೆಚ್ಚಾಗಿ ಇರುವುದು, ಶೆಟ್ಟರ್ ಅದೇ ಸಮುದಾಯಕ್ಕೆ ಸೇರಿರುವುದು, ಅವರೇ ಅಭ್ಯರ್ಥಿಯಾದರೆ ಪಕ್ಷದಲ್ಲಿ ಯಾವುದೇ ಭಿನ್ನಮತ ಸೃಷ್ಟಿಯಾಗುವುದಿಲ್ಲ ಎಂದು ಕಾರಣಕ್ಕಾಗಿಯೇ ಈ ತಂತ್ರ ರೂಪಿಸಲಾಗಿದೆ.

ಶೆಟ್ಟರ್‍ಗೆ ಸಚಿವ ಸ್ಥಾನ: ಇನ್ನೊಂದು ಮೂಲದ ಪ್ರಕಾರ ಸುರೇಶ್ ಅಂಗಡಿ ಹಠಾತ್ ನಿಧನದಿಂದ ತೆರವಾಗಿರುವ ಕೇಂದ್ರ ಸಂಪುಟಕ್ಕೆ ಜಗದೀಶ್ ಶೆಟ್ಟರ್ ಅವರನ್ನು ತೆಗೆದುಕೊಳ್ಳಲು ವರಿಷ್ಠರು ಸಮ್ಮತಿಸಿದ್ದಾರೆ ಎನ್ನಲಾಗಿದೆ. ಉಪ ಚುನಾವಣೆಯಲ್ಲಿ ಗೆದ್ದರೆ ಅವರನ್ನು ಕೇಂದ್ರದಲ್ಲಿ ಸಂಪುಟಕ್ಕೆ ತೆಗೆದುಕೊಳ್ಳುವುದು, ವೀರಶೈವ ಲಿಂಗಾಯತ ಸಮುದಾಯಕ್ಕೆ ಕೇಂದ್ರ ಸಂಪುಟದಲ್ಲಿ ಯಾವುದೇ ಸ್ಥಾನಮಾನ ನೀಡಿಲ್ಲ ಎಂಬ ಅಸಮಾಧಾನವನ್ನು ಹೋಗಲಾಡಿಸುವ ಲೆಕ್ಕಾಚಾರವೂ ಇದರಲ್ಲಿ ಅಡಗಿದೆ.

ಕೇಂದ್ರದಲ್ಲಿ ಬಿಜೆಪಿ ಎರಡನೆ ಬಾರಿ ಅಕಾರಕ್ಕೆ ಬಂದ ನಂತರ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲ ಎಂಬ ಅಸಮಾಧಾನವಿತ್ತು. ಅತಿ ಹೆಚ್ಚು ಸಂಸದರು ಅದೇ ಸಮುದಾಯದಿಂದ ಆಯ್ಕೆಯಾದರೂ ಯಾರೊಬ್ಬರನ್ನೂ ಸಂಪುಟಕ್ಕೆ ತೆಗೆದುಕೊಳ್ಳದಿರುವುದಕ್ಕೆ ಪಕ್ಷದಲ್ಲಿ ಸಣ್ಣದೊಂದು ಅಸಮಾಧಾನದ ಕಿಡಿ ಮೂಡಿತ್ತು. ಈಗ ಇದನ್ನು ಹೋಗಲಾಡಿಸಲು ಶೆಟ್ಟರ್ ಅವರನ್ನೇ ಕಣಕ್ಕಿಳಿಸಿ ಸಂಪುಟಕ್ಕೆ ತೆಗೆದುಕೊಳ್ಳಬೇಕೆಂಬ ಲೆಕ್ಕಾಚಾರವಿದೆ.

ಹಾಗೊಂದು ವೇಳೆ ಶೆಟ್ಟರ್ ಕೇಂದ್ರ ಸಂಪುಟಕ್ಕೆ ಸೇರ್ಪಡೆಯಾದರೆ ಅವರಿಂದ ತೆರವಾಗಲಿರುವ ರಾಜ್ಯ ಸಚಿವ ಸ್ಥಾನಕ್ಕೆ ಅರವಿಂದ ಬೆಲ್ಲದ್ ಅವರನ್ನು ತೆಗೆದುಕೊಳ್ಳಲು ವರಿಷ್ಠರು ಲೆಕ್ಕಾಚಾರ ಹಾಕಿದ್ದಾರೆ.

ವೀರಶೈವ ಸಮುದಾಯಕ್ಕೆ ಕೇಂದ್ರದಲ್ಲಿ ಒಂದು ಸ್ಥಾನ ಹಾಗೂ ಹುಬ್ಬಳ್ಳಿ ಧಾರವಾಡ ಭಾಗಕ್ಕೆ ರಾಜ್ಯದಲ್ಲಿ ಒಂದು ಸ್ಥಾನ ಕೊಟ್ಟಂತಾಗುತ್ತದೆ. ಇದರಿಂದ ಪಕ್ಷಕ್ಕೆ ಬೆನ್ನೆಲುಬಾಗಿರುವ ವೀರಶೈವ ಸಮುದಾಯಕ್ಕೂ ಸೂಕ್ತ ಪ್ರಾತಿನಿಧ್ಯ ಕೊಟ್ಟಂತಾಗುತ್ತದೆ ಎಂಬ ಲೆಕ್ಕಾಚಾರ ಒಳಗೊಂಡಿದೆ.

Facebook Comments

Sri Raghav

Admin