ವಿಶೇಷ ಹೂಡಿಕೆ ವಲಯ ಸ್ಥಾಪನೆಗೆ ಕಾಯ್ದೆ ರಚನೆ : ಸಚಿವ ಜಗದೀಶ್ ಶೆಟ್ಟರ್

ಈ ಸುದ್ದಿಯನ್ನು ಶೇರ್ ಮಾಡಿ

ಹುಬ್ಬಳ್ಳಿ  .ಫೆ.13: ರಾಜ್ಯದಲ್ಲಿ ಕೈಗಾರಿಕೆ ಸ್ಥಾಪನೆಯಲ್ಲಿ ಹಿಂದುಳಿದಿರುವ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಬಂಡವಾಳ ಹೂಡಿಕೆಗೆ ಅನುಕೂಲ ಮಾಡುವ ನಿಟ್ಟಿನಲ್ಲಿ, ಹುಬ್ಬಳ್ಳಿ-ಧಾರವಾಡ, ಶಿವಮೊಗ್ಗ ಹಾಗೂ ಕಲಬುರ್ಗಿಯನ್ನು ಕೇಂದ್ರವಾಗಿರಿಸಿಕೊಂಡು ವಿಶೇಷ ಹೂಡಿಕೆ ವಲಯ ಸ್ಥಾಪನೆಗೆ ಕಾಯ್ದೆ ರಚಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

ನಗರದ ಡೆನಿಸನ್ಸ್ ಹೋಟೆಲ್‌ನಲ್ಲಿ ಕರ್ನಾಟಕ ಸಣ್ಣ ಕೈಗಾರಿಕಾ ಸಂಘ, ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಉತ್ತರ ಕರ್ನಾಟಕ ಸಣ್ಣ ಕೈಗಾರಿಕಾ ಸಂಘ ಸಹಯೋಗದಲ್ಲಿ ಆಯೋಜಿಸಲಾದ ನೂತನ ಕೈಗಾರಿಕಾ ನೀತಿ 2020-25 ಮತ್ತು ಹೂಡಿಕೆ ಅವಕಾಶಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೈಗಾರಿಕಾ ಅಭಿವೃದ್ದಿಯಲ್ಲಿ ಹಿಂದುಳಿದ ತಾಲೂಕುಗಳನ್ನು ವಲಯವಾರು ಗುಂಪುಗಳಾಗಿ ವಿಂಗಡಣೆ ಮಾಡಲಾಗಿದೆ. ಎರಡನೇ ಹಾಗೂ ಮೂರು ಸ್ತರದ ನಗರಗಳು ಹಾಗೂ ಗ್ರಾಮೀಣ ಭಾಗದಲ್ಲೂ ಕೈಗಾರಿಕೆ ಬೆಳವಣಿಗೆಯಾಗಬೇಕು. ಈ ನಿಟ್ಟಿನಲ್ಲಿ ವಿಶೇಷ ಹೂಡಿಕೆ ವಲಯಗಳನ್ನು ಸ್ಥಾಪಿಸಿ, ಸರ್ಕಾರದಿಂದ ಪ್ರತ್ಯೇಕ ಪ್ರೋತ್ಸಾಹ ಹಾಗೂ ರಿಯಾಯಿತಿಗಳನ್ನು ನೀಡಲಾಗುವುದು. ಬರುವ ಅಧಿವೇಶನದಲ್ಲಿ ವಿಶೇಷ ಹೂಡಿಕೆ ವಲಯ ಮಸೂದೆಯನ್ನು ಸದನದಲ್ಲಿ ಮಂಡಿಸಲಾಗುವುದು.

ರಾಜ್ಯ ಸರ್ಕಾರ ಈಗಾಗಲೇ ಭೂ ಸುಧಾರಣೆ ಹಾಗೂ ಕೈಗಾರಿಕೆ ಅನುವು ಕಾಯ್ದೆಗೆ ತಿದ್ದುಪಡಿ ತಂದಿದೆ. ಭೂ ಸುಧಾರಣೆ ಕಾಯ್ದೆಯಲ್ಲಿ 79ನೇ ವಿಧಿಯ ಎ ಹಾಗೂ ಬಿ ಅಂಶಗಳಿಗೆ ಸಡಲಿಕೆ ನೀಡಲಾಗಿದೆ. ಕೃಷಿ ವೃತ್ತಿ ಮಾಡದಿರುವವರು ಹಾಗೂ ಕೃಷಿ ಭೂಮಿ ಹೊಂದಿಲ್ಲದವರು ಕೂಡ ಜಮೀನು ಖರೀದಿಸಬಹುದಾಗಿದೆ. ಇದರಿಂದ ಕೈಗಾರಿಕೋಧ್ಯಮಿಗಳು ಅಗತ್ಯ ಭೂಮಿಯನ್ನ ಕೊಂಡುಕೊಳ್ಳಬಹುದಾಗಿದೆ. ಭೂ ಪರಿವರ್ತನೆಗೂ ಅವಕಾಶ ಕಲ್ಪಿಸಲಾಗಿದೆ. ಕೈಗಾರಿಕೆ ಸ್ಥಾಪನೆಗೆ ಅನುಮೋದನೆ ಪಡೆದ ಕೈಗಾರಿಕೋಧ್ಯಮಿಗಳು ಸರ್ಕಾರ ನೀತಿ ನಿಯಮಗಳನುಸಾರ ಸ್ವಘೋಷಣೆ ಧೃಡೀಕರಣ ಪತ್ರಗಳನ್ನು ನೀಡಿ, ಸ್ವಂತ ಸ್ಥಳಗಳಲ್ಲಿ ಕೈಗಾರಿಕಾ ಸ್ಥಾಪನೆಗೆ ಸೌಲಭ್ಯಗಳ ನಿರ್ಮಾಣ ಕಾಮಗಾರಿಯನ್ನು ತಕ್ಷಣವೇ ಕೈಗೊಳ್ಳಬಹುದಾಗಿದೆ.
ಮೂರು ವರ್ಷಗಳ ಅವದಿಯಲ್ಲಿ ಉಳಿದ ಪರವಾನಿಗೆ ಪತ್ತಗಳನ್ನು ಸಂಬಂದಪಟ್ಟ ಇಲಾಖೆಗಳಿಂದ ಪಡೆಯಬಹುದಾಗಿದೆ.

ಹೊಸ ಕೈಗಾರಿಕೆಗಳ ಸ್ಥಾಪನೆಯ ಪ್ರಸ್ತಾವನೆಗಳಲ್ಲಿ 15 ಕೋಟಿ ಒಳಗೆ ಜಿಲ್ಲಾಧಿಕಾರಿಗಳು ಹಾಗೂ ಮೇಲ್ಪಟ್ಟ ಉದ್ಯಮೆಗಳಿಗೆ ಸರ್ಕಾರದ ಹಂತದಲ್ಲಿ ಅನುಮೋದನೆ ನೀಡಬೇಕು. ಪ್ರಸ್ತಾವನೆಗಳನ್ನು ತಿಂಗಳ ಒಳಗಾಗಿ ಪರಿಶೀಲಿಸಿ ಅನುಮೋದನೆ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪ್ರತಿ ತಿಂಗಳು ಕೈಗಾರಿಕೆ ಇಲಾಖೆಗೆ ಬರುವ ಪ್ರಸ್ತಾವನೆಗಳ ಬಗ್ಗೆ ರಾಜ್ಯ ಮಟ್ಟದಲ್ಲಿ ಪರಿಶೀಲನಾ ಸಭೆ ನಡೆಸಲಾಗುತ್ತಿದೆ. ಈ ಮೊದಲು ತ್ರೈಮಾಸಿಕ ಸಭೆಗಳನ್ನು ನಡೆಸಲಾಗುತ್ತಿತ್ತು. ಇದರಿಂದ ಉದ್ಯಮೆ ಸ್ಥಾಪನೆಗೆ ತೊಂದರೆಯಾಗುತ್ತಿತ್ತು.

# ಬಂಡವಾಳ ಆಕರ್ಷಣೆಯಲ್ಲಿ ಕರ್ನಾಟಕ ಪ್ರಥಮ ಸ್ಥಾನ : 

ಕೋವಿಡ್ ಲಾಕ್ ಡೌನ್ ತರುವಾಯ ಕೇಂದ್ರದ ಉದ್ಯಮ ಹಾಗೂ ಆಂತರಿಕ ವ್ಯವಹಾರಗಳ ಉತ್ತೇಜನ ಇಲಾಖೆ (Department for promotion fo industry and Intranal trade) ಗೆ 3.76 ಲಕ್ಷ ಕೋಟಿ ಮೊತ್ತದ 1088 ಕೈಗಾರಿಕೆಗಳ ಸ್ಥಾಪನೆಗೆ ಪ್ರಸ್ತಾವನೆಗಳು ಬಂದಿವೆ. ಇವುಗಳಲ್ಲಿ 1.54 ಲಕ್ಷ ಕೋಟಿ ಮೊತ್ತದ ಕೈಗಾರಿಕೆ ಸ್ಥಾಪನೆಗೆ ಕರ್ನಾಟಕದಿಂದ 95 ಪ್ರಸ್ತಾವನೆಗಳು ಸಲ್ಲಿಕೆಯಾಗಿವೆ. ರಾಜ್ಯದಲ್ಲಿ ಭಾರಿ ಪ್ರಮಾಣದಲ್ಲಿ ಬಂಡವಾಳ ಹೂಡಲು ಕೈಗಾರಿಕೋಧ್ಯಮಿಗಳು ಮುಂದೆ ಬಂದಿದ್ದಾರೆ. ದೇಶದಲ್ಲಿ ಕರ್ನಾಟಕ ರಾಜ್ಯ ಬಂಡವಾಳ ಆಕರ್ಷಣೆಯಲ್ಲಿ ಪ್ರಥಮ ಸ್ಥಾನದಲ್ಲಿದೆ.

ಹುಬ್ಬಳ್ಳಿಯಲ್ಲಿ ಜರುಗಿದ ಬಂಡವಾಳ ಹೂಡಿಕೆ ಸಮಾವೇಶಕ್ಕೆ ಉತ್ತಮ ಪ್ರತಿಕ್ರಿಯೆ ಒದಗಿ ಬಂದಿತ್ತು. ಕೊರೋನಾ ಲಾಕ್ ಡೌನ್ ನಿಂದಾಗಿ ರಾಜ್ಯದ ಕೈಗಾರಿಕಾ ಪ್ರಗತಿಗೆ ತಾತ್ಕಾಲಿಕ ಹಿನ್ನಡೆ ಉಂಟಾಗಿತ್ತು. ಕೇಂದ್ರದಲ್ಲಿ ಪ್ರಧಾನ ಮಂತ್ರಿಗಳು ಕೋವಿಡ್ ಲಾಕ್ ಡೌನ್ ನಿಯಮ ಸಡಿಲಿಸಿ, ಉದ್ಯಮಗಳ ಆರಂಭಕ್ಕೆ ಅನುಮತಿ ನೀಡಿದರು. ಇದರ ಬೆನ್ನಲ್ಲೇ ರಾಜ್ಯದಲ್ಲೂ ಕೈಗಾರಿಕೆಗಳ ಪುನರಾರಂಭ ಅನುಮತಿ ನೀಡಲಾಯಿತು. ಇದರ ಪರಿಣಾಮ ಬೇರೆ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಕೈಗಾರಿಕೆ ಚೇತರಿಕೆ ಕಾಣುತ್ತಿದೆ.

ನೀತಿ ಆಯೋಗದಿಂದ ತುಮಕೂರು ನಾಡ್ ಕಾರಿಡಾರ್ ಸ್ಥಾಪನಗೆ 1700 ಕೋಟಿ ಬಿಡುಗಡೆಯಾಗಿದೆ. ಇದರಲ್ಲಿ 600 ಕೋಟಿ ರೂಪಾಯಿಗಳನ್ನು ಭೂಸ್ವಾಧೀನ ಪ್ರಕ್ರಿಯೆಗೆ ಬಳಸಿಕೊಳ್ಳಾಗುತ್ತಿದೆ. ನಾಡ್ ಕಾರಿಡಾರ್ ಅಭಿವೃದ್ಧಿಯಿಂದ ಅಪಾರ ಪ್ರಮಾಣ ಬಂಡವಾಳ ಹೂಡಿಕೆ ಅವಕಾಶವಾಗುತ್ತದೆ. ನೀತಿ ಆಯೋಗದ ಸೂಚನೆ ಮೇರಗೆ ರಾಜ್ಯದಲ್ಲಿ 4000 ಎಕರೆಗೂ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡು ಕೈಗಾರಿಕೆಗಳನ್ನು ಸ್ಥಾಪನೆ ಮಾಡಲಾಗುವುದು.

ಕೇಂದ್ರ ಸರ್ಕಾರ ಔಷದಗಳ ಉತ್ಪಾದನೆಗೆ ಸಂಬಂಧಿಸಿದ ಪಾರ್ಕ ಸ್ಥಾಪನೆಗೆ ಇಚ್ಛಿಸುತ್ತಿದೆ. ಕೇಂದ್ರದ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವರಾದ ಸದಾನಂದ ಗೌಡರಲ್ಲಿ ಮನವಿ ಮಾಡಿ, ರಾಜ್ಯದ ಯಾದಗಿರಿ ಜಿಲ್ಲೆಯಲ್ಲಿ ಔಷದ ಪಾರ್ಕ ಸ್ಥಾಪನೆ ಮಾಡುವಂತೆ ಕೋರಲಾಗಿದೆ. ಇದಕ್ಕೆ ಅಗತ್ಯ ಇರುವ 1000 ಎಕರೆ ಭೂಮಿಯನ್ನು ನೀಡಲು ರಾಜ್ಯ ಸರ್ಕಾರ ಸಿದ್ದವಿದೆ ಎಂದರು.

# ಉತ್ತರ ಕರ್ನಾಟಕದಲ್ಲಿ ಕೈಗಾರಿಕೆಗಳ ಸ್ಥಾಪನೆ

ರಾಜ್ಯದಲ್ಲಿ ಬಂಡವಾಳ ಆಕರ್ಷಿಸಲು ಮುಂಬೈ ಹಾಗೂ ಹೈದರಾಬಾದ್ ನಗರಗಳಲ್ಲಿ ರೋಡ್ ಹಮ್ಮಿಕೊಳ್ಳಲಾಗಿತ್ತು. ಹೈದರಾಬಾದ್ ಕಾರ್ಯಕ್ರಮ ಯಶಸ್ವಿಯಾಗಿದ್ದು 70 ಔಷದಿ ಕಂಪನಿಗಳು ಯಾದಗಿರಿಯ ಕಡೇಚೂರು ಕೈಗಾರಿಕಾ ಪ್ರದೇಶದಲ್ಲಿ ಉದ್ಯಮೆ ಸ್ಥಾಪನೆಗೆ ಮುಂದೆ ಬಂದಿದ್ದಾರೆ. ಚೈನಾ ಆಟಿಕೆಗಳಿಗೆ ಪತ್ರಿಸ್ಪರ್ಧೆ ನೀಡಲು ಕೊಪ್ಪಳದಲ್ಲಿ ಆಟಿಕೆ ಕ್ಲಸ್ಟರ್ ಆರಂಭಿಸಲಾಗಿದೆ. ಹಲವು ಕಂಪನಿಗಳು ಕೈಗಾರಿಕೆ ಸ್ಥಾಪನೆಯಲ್ಲಿ ನಿರತವಾಗಿವೆ. ಸರ್ಕಾರ ಹುಬ್ಬಳ್ಳಿಯನ್ನು ಎಫ್.ಎಂ.ಸಿ.ಜಿ (ಫಾಸ್ಟ್ ಮೂವಿಂಗ್ ಕಂಜ್ಯೂಮರ್ ಗೂಡ್ಸ್) ಕ್ಲಸ್ಟರ್ ಎಂದು ಘೋಷಣೆ ಮಾಡಿದೆ ಎಂದರು.

# ಕೈಗಾರಿಕಾ ಉಪನಗರಗಳ (Twonship) ನಿರ್ಮಾಣ

ರಾಜ್ಯದಲ್ಲಿ 5 ರಿಂದ 6 ಕಡೆ ಕೈಗಾರಿಕಾ ಉಪನಗರಗಳನ್ನು ಸ್ಥಾಪನೆ ಮಾಡುವ ಉದ್ದೇಶವಿದೆ. ಹುಬ್ಬಳ್ಳಿ ತಾರಿಹಾಳ ಕೈಗಾರಿಕಾ ಪ್ರದೇಶವನ್ನು ಆದ್ಯತೆ ಮೇರೆಗೆ ಕೈಗಾರಿಕಾ ಉಪನಗರವಾಗಿ ಮಾಡಲಾಗುವುದು. ನಗರಾಭಿವೃದ್ಧಿ ಇಲಾಖೆಯೊಂದಿಗೆ ಈಗಾಗಲೇ ಸ್ಥಾಪಿಸಲಾಗಿರುವ ಕೈಗಾರಿಕಾ ವಸಾಹತುಗಳಿಗೆ ಉಪನಗರ ಸ್ಥಾನ ಮಾನ ನೀಡುವಂತೆ ಕೋರಲಾಗಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕರ ಮನ್ನಾದ ಕುರಿತು ನಗರಾಭಿವೃದ್ಧಿ ಇಲಾಖೆಯ ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆ. ಖಾಸಗಿ ಕೈಗಾರಿಕಾ ವಸಾಹತು ಸ್ಥಾಪನೆಗೆ ಅವಕಾಶ ನೀಡಿ ಪ್ರೋತ್ಸಾಹಿಸಲಾಗುತ್ತಿದೆ. ಕೈಗಾರಿಕಾ ವಸಹಾತುಗಳಲ್ಲಿ ಶೇ.30 ರಷ್ಟು ನಿವೇಶನಗಳನ್ನು ಸಣ್ಣ ಹಾಗೂ ಅತಿಸಣ್ಣ ಉದ್ಯಮೆಗಳಿಗೆ ಮೀಸಲಿರಿಸಲಾಗುವುದು. ಉದ್ಯಮಿಗಳ ಬೇಡಿಕೆಯಂತೆ ಚಾಮರಾಜನಗರ ಜಿಲ್ಲೆಯಲ್ಲಿ ನಗರದಲ್ಲಿ ಕೆ.ಐ.ಎ.ಡಿ.ಬಿ ಸೈಟ್ ಗಳನ್ನು ಸಣ್ಣದಾಗಿ ಮರು ವಿನ್ಯಾಸ ಮಾಡುವ ಕೆಲಸ ಜರುಗುತ್ತಿದೆ.

ನೂತನ ಕೈಗಾರಿಕಾ ನೀತಿ ಬಗ್ಗೆ ಜಾಗೃತಿ ಮೂಡಿಸಿ ಕಿರು ಪುಸ್ತಕ ಬಿಡುಗಡೆ ಮಾಡಲಾಗಿದೆ. ಕೈಗಾರಿಕೋದ್ಯಮಿಗಳು ನೂತನ ಕೈಗಾರಿಕಾ ನೀತಿಯನ್ನು ಸ್ವಾಗತಿಸಿದ್ದಾರೆ. ರಾಜೀವ್ ಮೇಹ್ತಾ ಒಡೆತನದ ರಾಜೀವ್ ಎಕ್ಸ ಪೋರ್ಟ್ ವಿದ್ಯುತ್ ಚಾಲಿತ ವಾಹನಗಳ ನಿರ್ಮಾಣ ಕೈಗಾರಿಕೆ ಸ್ಥಾಪನೆ ರಾಜ್ಯ ಸರ್ಕಾರದೊಂದಿಗೆ ಸಮಾಲೋಚನೆ ನಡೆಸುತ್ತಿದೆ. ಬೆಳವಣಿಗೆ ಆಶಾದಾಯಕವಾಗಿದೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಅಪರ ನಿರ್ದೇಶಕ ಹೆಚ್.ಎಂ.ಶ್ರೀನಿವಾಸ, ನೂತನ ಕೈಗಾರಿಕಾ ನೀತಿ 2020-25 ಕುರಿತು ಉದ್ಯಮೆದಾರರಿಗೆ ಪ್ರಾತ್ಯಕ್ಷಿಕೆ ನೀಡಿದರು. ನೂತನ ಉದ್ಯಮ ಸ್ಥಾಪನೆ ರಾಜ್ಯ ಸರ್ಕಾರದಿಂದ ದೊರೆಯುವ ರಿಯಾಯಿತಿಗಳು, ಪ್ರೋತ್ಸಾಹಗಳ ಕುರಿತು ಮಾಹಿತಿ ನೀಡಿದರು. ನೂತನ ಕೈಗಾರಿಕಾ ನೀತಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡ ಸೇರಿದಂತೆ ಅಲ್ಪಸಂಖ್ಯಾತರಿಗೆ ಇರುವ ವಿಶೇಷ ಸವಲತ್ತುಗಳ ಬಗ್ಗೆ ತಿಳಿಸಿಕೊಟ್ಟರು.

ಕರ್ನಾಟಕ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಕೆ.ಬಿ.ಅರಸಪ್ಪ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕ ದೊಡ್ಡ ಬಸವರಾಜು, ಎನ್.ಕೆ.ಎಸ್.ಎಸ್.ಐ.ಎ ಅಧ್ಯಕ್ಷ ನಿಂಗಣ್ಣ ಎಸ್ ಬಿರಾದಾರ, ಹುಬ್ಬಳ್ಳಿ ಕರ್ನಾಟಕ ವಾಣಿಜ್ಯೋಧ್ಯಮ ಸಂಸ್ಥೆ ಅಧ್ಯಕ್ಷ ಮಹೇಂದ್ರ ಲದ್ದಡ, ಸೇರಿದಂತೆ ಮತ್ತಿತರರು ವೇದಿಕೆಯಲ್ಲಿದ್ದರು. ಕೈಗಾರಿಕೋಧ್ಯಮಿಗಳೊಂದಿಗೆ ಸಂವಾದ ಹಾಗೂ ಪ್ರಶ್ನೋತ್ತರ ಜರುಗಿತು. ಕಾಸಿಯಾ ವತಿಯಿಂದ ದಾಬಸ್ ಪೇಟೆಯ ನಾವಿನ್ಯತಾ ಕೇಂದ್ರದಲ್ಲಿ ರಕ್ಷಣಾ ವಸ್ತುಪ್ರದರ್ಶನವನ್ನು ಏರ್ಪಡಿಸುವಂತೆ ಸಚಿವರಿಗೆ ಮನವಿ ಸಲ್ಲಿಸಿದರು.

Facebook Comments

Sri Raghav

Admin