ಅಧಿಕಾರ ಕಳೆದುಕೊಂಡು ಹತಾಶೆಯಿಂದ ಮಧ್ಯಂತರ ಚುನಾವಣೆ ಮಾತನಾಡುತ್ತಿದ್ದಾರೆ : ಶೆಟ್ಟರ್

ಈ ಸುದ್ದಿಯನ್ನು ಶೇರ್ ಮಾಡಿ

ಹುಬ್ಬಳ್ಳಿ,ಆ.29- ಅಧಿಕಾರ ಕಳೆದುಕೊಂಡವರು ಹತಾಷರಾಗಿದ್ದು, ಮಧ್ಯಂತರ ಚುನಾವಣೆ ಬಗ್ಗೆ ಮಾತನಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಮಧ್ಯಂತರ ಚುನಾವಣೆ ಬರುವುದಿಲ್ಲ. ಸರ್ಕಾರ ತನ್ನ ಆಡಳಿತಾವಧಿಯನ್ನು ಪೂರ್ಣಗೊಳಿಸುತ್ತದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಇಂದಿಲ್ಲಿ ಹೇಳಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂತ್ರಿಮಂಡಲ ರಚನೆಯಾದ ಬಳಿಕ ಶಾಸಕರು ಅಸಮಾಧಾನಗೊಂಡಿದ್ದಾರೆ. ಅವರನ್ನು ಸಮಾಧಾನ ಮಾಡುವ ಕೆಲಸ ನಡೆಯುತ್ತಿದೆ. ಎಲ್ಲವೂ ಸರಿಯಾಗಲಿದೆ. ನಾವು ನಮ್ಮ ಅವಧಿಯನ್ನು ಪೂರ್ಣಗೊಳಿಸಲಿದ್ದೇವೆ ಎಂದರು.

ಕೇಂದ್ರ ಸರ್ಕಾರ ರಾಜ್ಯಕ್ಕೆ ಮಲತಾಯಿ ಧೋರಣೆ ತೋರಿಲ್ಲ. ದೇಶದಲ್ಲಿ ನೆರೆ ಹಾವಳಿಗೆ ಒಳಗಾದ ಯಾವ ರಾಜ್ಯಕ್ಕೂ ಕೇಂದ್ರ ಸರ್ಕಾರ ಇನ್ನೂ ಪರಿಹಾರ ನೀಡಿಲ್ಲ. ಹೀಗಾಗಿ ಮಲತಾಯಿ ಧೋರಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.

ಉತ್ತರ ಕರ್ನಾಟಕ, ಉತ್ತರ ಕನ್ನಡ, ಕರಾವಳಿ ಭಾಗದಲ್ಲಿ ಭಾರೀ ಮಳೆ, ನೆರೆ ಹಾವಳಿಯಿಂದ ಹಾನಿಗೊಳಗಾಗಿರುವ ಬಗ್ಗೆ ಕೇಂದ್ರ ಗೃಹ ಹಾಗೂ ಹಣಕಾಸು ಸಚಿವರು ಸಮೀಕ್ಷೆ ನಡೆಸಿದ್ದಾರೆ. ಕೇಂದ್ರ ಅಧಿಕಾರಿಗಳ ತಂಡ ಅಧ್ಯಯನ ನಡೆಸಿದೆ. ಶೀಘ್ರದಲ್ಲೇ ಹೆಚ್ಚಿನ ಪರಿಹಾರ ರಾಜ್ಯಕ್ಕೆ ಸಿಗಲಿದೆ ಎಂದು ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.

ನಮ್ಮಲ್ಲಿ ಯಾವುದೇ ಭಿನ್ನಮತ ಇಲ್ಲ. ಎಲ್ಲರೂ ಒಗ್ಗಟ್ಟಾಗಿದ್ದೇವೆ. ಅಭಿಪ್ರಾಯ ಭೇದಗಳಿದ್ದು, ಅದನ್ನು ಪಕ್ಷದ ಚೌಕಟ್ಟಿನಲ್ಲಿ ಬಗೆಹರಿಸಿಕೊಳ್ಳುತ್ತೇವೆ. ಕೆಲವು ಶಾಸಕರಿಗಿರುವ ಅಸಮಾಧಾನದ ಬಗ್ಗೆ ನಮ್ಮ ಹಿರಿಯ ನಾಯಕರು ಮಾತನಾಡಿ ಈಗಾಗಲೇ ಸಮಾಧಾನ ಮಾಡಿದ್ದಾರೆ. ಎಲ್ಲವೂ ಸುಸೂತ್ರವಾಗಿ ನೆರವೇರಲಿದೆ ಎಂದು ಅವರು ತಿಳಿಸಿದರು.

Facebook Comments