ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೆಚ್ಚಿನ ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜನ : ಸಚಿವ ಶೆಟ್ಟರ್

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಮಗಳೂರು.ಜು.02: ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಜೊತೆಗೆ ಕೈಗಾರಿಕೆಗಳ ಸ್ಥಾಪನೆಗೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸುವುದರೊಂದಿಗೆ ಉತ್ತೇಜನ ನೀಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಜಗದೀಶ್ ಶೆಟ್ಟರ್ ಅವರು ಹೇಳಿದರು.

ಚಿಕ್ಕಮಗಳೂರು ಜಿಲ್ಲೆಯ ಪ್ರವಾಸ ಕೈಗೊಂಡಿರುವ ಸಚಿವರು ಇಂದು ಚಿಕ್ಕಮಗಳೂರು ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿದರು. ನಂತರ ನಗರದ ಜಿಲ್ಲಾ ಪಂಚಾಯಿತಿಯ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಕುರಿತು ಅಧಿಕಾರಿಗಳು ಹಾಗೂ ಕೈಗಾರಿಕೋದ್ಯಮಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾಜ್ಯದಲ್ಲಿ ಹೊಸದಾಗಿ ಕೈಗಾರಿಕೆಗಳನ್ನು ಪ್ರಾರಂಭಿಸಿ ಜನ ಸಾಮಾನ್ಯರಿಗೆ ಹೆಚ್ಚಿನ ಉದ್ಯೋಗ ಅವಕಾಶ ಸೃಷ್ಟಿಸಬೇಕೆಂಬ ಉದ್ದೇಶದಿಂದ ಸರ್ಕಾರ ಕೈಗಾರಿಕೆ ನೀತಿಯಲ್ಲಿ ಹಾಗೂ ಭೂ ಸುಧಾರಣೆ ಕಾಯ್ದೆಗಳಲ್ಲಿ ತಿದ್ದುಪಡಿ ತರಲಾಗಿದೆ ಇದರಿಂದಾಗಿ ರಾಜ್ಯದಲ್ಲಿ ಹೆಚ್ಚು ಕೈಗಾರಿಕೆಗಳು ಹೊಸದಾಗಿ ಬೆಳವಣಿಗೆಯಾಗಲು ಸಹಕಾರಿಯಾಗಲಿದೆ ಎಂದರು.

ಕರ್ನಾಟಕ ಇಂಡಸ್ಟ್ರಿಯಲ್ ಫೆಸಿಲಿಟೇಷನ್‌ ಕಾಯ್ದೆಯಲ್ಲಿ ಕೆಲವೊಂದು ತಿದ್ದುಪಡಿ ತರುವುದರೊಂದಿಗೆ ಉದ್ಯಮಿಗಳು ಕೈಗಾರಿಕೆಯನ್ನು ಸ್ಥಾಪನೆ ಮಾಡಿ ನಂತರದ 3 ವರ್ಷಗಳಲ್ಲಿ ಕೆಲವೊಂದು ಅನುಮತಿಗಳನ್ನು ಪಡೆದುಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ ಎಂದರು.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟು 4 ಬೃಹತ್ ಕೈಗಾರಿಕೆಗಳಿದ್ದು 160.83 ಕೋಟಿ ರೂ ವೆಚ್ಚಮಾಡಲಾಗಿದೆ ಇಲ್ಲಿ 810 ಕಾರ್ಮಿಕರಿರು ಕೆಲಸ ನಿರ್ವಹಿಸುತ್ತಿದ್ದಾರೆ ಹಾಗೂ 5 ಮಧ್ಯಮ ಕೈಗಾರಿಕೆಗಳಿದ್ದು 43.67 ಕೋಟಿ ರೂ ವೆಚ್ಚ ಮಾಡಲಾಗಿದ್ದು ಒಟ್ಟು 348 ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ ಜೊತೆಗೆ 5912 ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿದ್ದು, 23,089 ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ಜಿಲ್ಲೆಯಲ್ಲಿ 2014 ರಿಂದ 2019 ರವರೆಗೆ ಕೈಗಾರಿಕೋದ್ಯಮದ ಎರಡನೇ ವಲಯದಲ್ಲಿ ಅತೀ ಹೆಚ್ಚು ಹಿಂದುಳಿದ ತಾಲ್ಲೂಕುಗಳಾದ ಕಡೂರು, ತರೀಕೆರೆ, ಮೂಡಿಗೆರೆ ಹಾಗೂ ಮೂರನೇ ವಯಲದಲ್ಲಿ ಹಿಂದುಳಿದ ತಾಲ್ಲೂಕುಗಳಾದ ಚಿಕ್ಕಮಗಳೂರು, ಕೊಪ್ಪ, ಶೃಂಗೇರಿ, ನರಸಿಂಹರಾಜಪುರಗಳನ್ನು ಗುರುತಿಸಲಾಗಿದ್ದು ಇಲ್ಲಿನ ಕೈಗಾರಿಕೆಗಳ ಸ್ಥಾಪನೆಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಿಕೊಡಲಾಗುವುದು ಎಂದರು.

ಯುವ ಜನರು ಕೈಗಾರಿಕೆಗಳನ್ನು ಸ್ಥಾಪಿಸಲು ಬಂದಾಗ ಅವರುಗಳಿಗೆ ಅಗತ್ಯ ಮಾರ್ಗದರ್ಶನಗಳನ್ನು ನೀಡುವುದರ ಜೊತೆಗೆ ವಿದ್ಯುತ್ ಸಂಪರ್ಕ ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸುವುದು ಅತ್ಯಂತ ಪ್ರಮುಖವಾಗಿರುತ್ತದೆ ಈ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ತಾಳಬಾರದು ಎಂದರು.

ಹೊಸ ಉದ್ಯೋಗ ಸೃಷ್ಟಿಸಲು ಆರ್ಥಿಕ ಸವಲತ್ತುಗಳನ್ನು ಕೇಳಿ ವಾಣಿಜ್ಯ ಬ್ಯಾಂಕುಗಳಿಗೆ ಉದ್ದಿಮೆಗಳು ಬಂದಂತಹ ಸಂದರ್ಭದಲ್ಲಿ ಸರ್ಕಾರದ ಯೋಜನೆಗಳ ಅನ್ವಯ ಸಾಲ ಸೌಲಭ್ಯವನ್ನು ನೀಡಬೇಕು ಈ ಬಗ್ಗೆ ಅನೇಕ ದೂರುಗಳು ಕೇಳಿಬರುತ್ತಿವೆ ಎಂದ ಅವರು ವಾಣಿಜ್ಯ ಬ್ಯಾಂಕುಗಳ ಮುಖ್ಯಸ್ಥರ ಸಭೆಯನ್ನು ಮಾಡಿ ಅವರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಸ್ಪೈಸ್ ಪಾರ್ಕ್ ಹಾಗೂ ಕಾಫಿ ಪಾರ್ಕ್‍ಗಳ ಸ್ಥಾಪಿಸಲು ಈಗಾಗಲೇ ಜಮೀನು ಗುರುತಿಸಲಾಗಿದ್ದು ಸರ್ಕಾರದ ಮಟ್ಟದಲ್ಲಿ ಮಂಜೂರು ದೊರೆಯಲಿದೆ ಎಂದರು. ಪ್ರಧಾನ ಮಂತ್ರಿ ಉದ್ಯೋಗ ಯೋಜನೆ ಅಡಿಯಲ್ಲಿ 74 ಘಟಕಗಳನ್ನು ಸ್ಥಾಪಿಸಲು ಒಟ್ಟು 289.45 ಲಕ್ಷ ಅಂಚು ಹಣವನ್ನು ಬಿಡುಗಡೆ ಮಾಡಲಾಗಿದೆ ಇದರಿಂದಾಗಿ 301 ಫಲಾನುಭವಿಗಳಿಗೆ ಉದ್ಯೋಗ ದೊರಕಲಿದೆ ಎಂದರು.

ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ ರವಿ ಅವರು ಮಾತನಾಡಿ ಇಲ್ಲಿನ ಪರಿಸರಕ್ಕೆ ಪೂರಕವಾಗುವ ರೀತಿಯಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಸುವ ಕೈಗಾರಿಕೆಗಳಾದ ಆಹಾರ ಸಂರಕ್ಷಣಾ ಘಟಕಗಳು, ಜವಳಿ ಉದ್ಯಮಗಳು ಸೇರಿದಂತೆ ಮತ್ತಿತರ ಕೈಗಾರಿಕೆಗಳನ್ನು ಸ್ಥಾಪಿಸಲು ಅಗತ್ಯ ಸೌಕರ್ಯಗಳನ್ನು ಕಲ್ಪಿಸಿಕೊಡುವಂತೆ ತಿಳಿಸಿದರು.

ನಗರದ ಪ್ರದೇಶಗಳಲ್ಲಿರುವ ಆಟೋ ಮೊಬೈಲ್‌ ಸಂಸ್ಥೆಗಳಿಂದ ಜನಸಾಮಾನ್ಯರಿಗೆ ಕಿರಿಕಿರಿಯಾಗುತ್ತಿದ್ದು ಇದನ್ನು ತಪ್ಪಿಸಲು ನಗರದ ಹೊರ ವಲಯದಲ್ಲಿ ಆಟೋ ಕ್ಲಸ್ಟರ್‍ನ್ನು ಸ್ಥಾಪಿಸುವ ಉದ್ದೇಶಕ್ಕೆ ಜಮೀನು ಗುರುತಿಸಲಾಗಿದ್ದು ಮಂಜೂರಾತಿ ಹಂತದಲ್ಲಿದ್ದು ಶೀಘ್ರದಲ್ಲಿ ಆಗಬೇಕು ಎಂದರು.

ಜಿಲ್ಲೆಯ ಸಖರಾಯಪಟ್ಟಣ ಭಾಗದಲ್ಲಿ 77 ಕ್ಕೂ ಹೆಚ್ಚಿನ ಹಲಸು ತಳಿಯ ಹಣ್ಣುಗಳನ್ನು ಬೆಳೆಯಲಾಗುತ್ತಿದ್ದು ಇದಕ್ಕೆ ಪೂರಕವಾಗಿ ಕೈಗಾರಿಕೆ ಹಾಗೂ ವಿವಿಧ ಕ್ಲಸ್ಟರ್ ಸ್ಥಾಪಿಸಲು ಸಮೀಕ್ಷೆ ಮಾಡಲಾಗಿದ್ದು ಡಿ.ಪಿ.ಆರ್ ಪ್ರಗತಿ ಹಂತದಲ್ಲಿದೆ ಎಂದ ಅವರು ಇದರಿಂದಾಗಿ ಗ್ರಾಮೀಣ ಮಟ್ಟದಲ್ಲಿಯೂ ಕೈಗಾರಿಕೆಗಳಿಗೆ ಅವಕಾಶ ದೊರೆತು ಉದ್ಯೋಗ ಸೃಷ್ಟಿಯಾಗಲಿದೆ ಎಂದರು.

ಸಭೆಯಲ್ಲಿ ಉದ್ಯಮಿಗಳು ಹೊಸದಾಗಿ ಕೈಗಾರಿಕೆಗಳನ್ನು ಸ್ಥಾಪಿಸಲು ಅತೀ ಮುಖ್ಯವಾಗಿ ಅಗತ್ಯವಿರುವ ಕೈಗಾರಿಕಾ ಪ್ರದೇಶ ಹಾಗೂ ವಸಾಹತುಗಳನ್ನು ಅಭಿವೃದ್ದಿ ಪಡಿಸಬೇಕು, ಹಾಲಿ ಇರುವ ಕೈಗಾರಿಕಾ ಪ್ರದೇಶಗಳಿಗೆ ರಸ್ತೆ, ಚರಂಡಿ, ನೀರು ಸೇರಿದಂತೆ ಮತ್ತಿತರರ ಮೂಲಸೌಕರ್ಯಗಳನ್ನು ಕಲ್ಪಿಸಬೇಕು ಹೊಸದಾಗಿ ಪ್ರಾರಂಬಿಸಿರುವ ಕೈಗಾರಿಕೆಗಳಿಗೆ ವಿದ್ಯುಚ್ಛಕ್ತಿ ಸಂಪರ್ಕ ಕಲ್ಪಿಸುವುದು ಶೀಘ್ರದಲ್ಲಿಯೇ ಆಗಬೇಕು ಅಲ್ಲದೇ ನಿರಂತರ ವಿದ್ಯುತ್ ಸೌಲಭ್ಯ ಒದಗಿಸಬೇಕು, ಉದ್ಯಮಿಗಳಿಗೆ ಬ್ಯಾಂಕುಗಳಿಂದ ಆರ್ಥಿಕ ಸಾಲ ಸೌಲಭ್ಯಗಳು ಸರಳವಾಗಿ ಸಿಗವಂತಾಗಬೇಕು ಸೇರಿದಂತೆ ಮತ್ತಿತರ ಮನವಿಗಳನ್ನು ಸಚಿವರ ಗಮನಕ್ಕೆ ತಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುಜಾತ ಕೃಷ್ಣಪ್ಪ, ಉಪಾಧ್ಯಕ್ಷ ಬಿ.ಜಿ. ಸೋಮಶೇಖರ್, ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಸಿ.ಇ.ಒ ಶಿವಶಂಕರ್, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಪೂವಿತಾ, ಜಂಟಿ ನಿರ್ದೇಶಕ ಸಿದ್ಧ್ದರಾಜು ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಉದ್ಯಮಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Facebook Comments

Sri Raghav

Admin