ಕೈಗಾರಿಕಾ ಬೆಳವಣಿಗೆಗೆ ಸರ್ಕಾರ ಹೆಚ್ಚು ಆದ್ಯತೆ ನೀಡಲಿದೆ : ಸಚಿವ ಜಗದೀಶ್ ಶೆಟ್ಟರ್

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ. :- ದೇಶದಲ್ಲಿ ವಿವಿಧ ಕಾರಣಗಳಿಂದ ಕೈಗಾರಿಕೋದ್ಯಮವು ಕುಗ್ಗುತ್ತಿದ್ದು, ಅವುಗಳ ಬೆಳವಣಿಗೆ ಹಾಗೂ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹೆಚ್ಚು ಆದ್ಯತೆ ನೀಡುತ್ತಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವರಾದ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

ನಗರದ ಕೈಗಾರಿಕಾ ವಲಯದಲ್ಲಿನ ನಂದಗೊಕುಲ ಸಭಾಂಗಣದಲ್ಲಿ ಕೈಗಾರಿಕಾ ಪ್ರದೇಶದ ಉದ್ದಿಮೆದಾರರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು  ಕೊರೋನಾ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 3 ತಿಂಗಳವರೆಗೆ ಲಾಕ್‍ಡೌನ್ ಆಗಿದ್ದರಿಂದ ಕೈಗಾರಿಕಾ ವಲಯದಲ್ಲಿ ಭಾರೀ ನಷ್ಟ ಸಂಭವಿಸಿದೆ.

ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ವಿಷೇಶ ಪ್ಯಾಕೇಜ್‍ನಲ್ಲಿ 3 ಲಕ್ಷ ಕೋಟಿ ರೂಗಳನ್ನು ಕೈಗಾರಿಕೆಗಳಿಗೆಂದು ನೆರವು ಘೊಷಿಸಲಾಗಿದೆ. ಬ್ಯಾಂಕ್ ಸಾಲದ ಮೂಲಕ ಹಾಗೂ ವಿವಿಧ ಯೋಜನೆಗಳ ಮೂಲಕ ಈ ಸೌಲಭ್ಯಗಳನ್ನು ಪಡೆಯಬಹುದಾಗಿದೆ ಎಂದರು.

ಹಾಸನ ಜಿಲ್ಲೆಯು ವಿವಿಧ ಜಿಲ್ಲೆಗಳ ಮಧ್ಯ ಭಾಗದಲ್ಲಿರುವುದರಿಂದ ಉತ್ತಮ ಕೈಗಾರಿಕಾ ಅಭಿವೃದ್ಧಿಯ ಅವಕಾಶಗಳನ್ನು ಹೊಂದಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೈಗಾರಿಕೆಯು ಉತ್ತಮ ರೀತಿಯಲ್ಲಿ ಬೆಳವಣಿಗೆಯಾಗುತ್ತಿದ್ದು, ಹಾಸನ ಕೈಗಾರಿಕಾ ಕ್ಷೇತ್ರದಲ್ಲಿ ಹಿಂದುಳಿದಿರಲು ಕಾರಣ ತಿಳಿದಿಲ್ಲ,

ಆದರೆ ಇನ್ನುಮುಂದೆ ವಿವಿಧ ಕೈಗಾರಿಕೆಗಳು ಜಿಲ್ಲೆಯಲ್ಲಿ ಪ್ರಾರಂಭವಾಗಬೇಕು. ಈ ನಿಟ್ಟಿನಲ್ಲಿ ನಮ್ಮ ಇಲಾಖೆಯ ವತಿಯಿಂದ ಬೇಕಾಗುವ ಎಲ್ಲಾ ರೀತಿಯ ಸಹಕಾರವನ್ನು ನೀಡಲಾಗುತ್ತದೆ ಎಂದು ಸಚಿವರು ತಿಳಿಸಿದರು.

ಕೈಗಾರಿಕೆಗಳ ಬೆಳವಣಿಗೆಗಾಗಿ ಹಲವಾರು ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ, ಕೈಗಾರಿಕಾ ನಗರಗಳನ್ನು ಸ್ಥಾಪಿಸಿ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಿಕೊಡಲು ಹಲವು ಉದ್ದಿಮೆದಾರರು ಮುಂದೆ ಬರುತ್ತಿದ್ದಾರೆ. ಈ ನಿಟ್ಟಿನಲ್ಲಿ ನಗರಾಭಿವೃದ್ಧಿ ಇಲಾಖೆಯೊಂದಿಗೆ ಮಾತನಾಡಿ ಕೈಗಾರಿಕಾ ಬಡಾವಣೆಗಳನ್ನು ಸ್ಥಾಪಿಸಲು ಅನುವು ಮಾಡಿಕೊಡಲು ಸೂಚಿಸಲಾಗಿದೆ ಎಂದರು.

ಪ್ರಸ್ತುತ ಕೈಗಾರಿಕೋದ್ಯಮಿಗಳಿಗೆ ಕಂದಾಯ, ವಿದ್ಯುತ್ ಪೂರೈಕೆ, ನೀರಿನ ಪೂರೈಕೆ ಸೇರಿದಂತೆ ಹಲವಾರು ತೊಂದರೆಗಳಿರುವುದು ಕಂಡುಬಂದಿದ್ದು, ಅವುಗಳನ್ನು ಬಗೆಹರಿಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.

ಕೆಲವು ಬ್ಯಾಂಕುಗಳು ಸಾಲದ ವಿಷಯದಲ್ಲಿ ಸಹಕಾರ ನೀಡುತ್ತಿಲ್ಲ ಎಂಬ ದೂರುಗಳಿವೆ, ಆದರೆ ಪ್ರಸ್ತುತ ಎಲ್ಲಾ ಬ್ಯಾಂಕುಗಳು ಸಾಲ ನೀಡುತ್ತಿದ್ದು, ಎಲ್ಲೆಲ್ಲಿ ಲೋಪದೋಷಗಳಿವೆಯೊ, ಅವುಗಳನ್ನು ಸರಿಪಡಿಸಲಾಗುತ್ತಿದೆ ಎಂದು ಜಗದೀಶ್ ಶೆಟ್ಟರ್ ಅವರು ತಿಳಿಸಿದರು.

ಭೂ ಸುಧಾರಣಾ ಕಾಯ್ದೆಯಡಿ ಕೈಗಾರಿಕೆಗಳಿಗೆ ಪೂರಕವಾಗಿ ಬಹಳಷ್ಟು ಬದಲಾವಣೆಗಳನ್ನು ತರಲಾಗುತ್ತಿದೆ. ಕರ್ನಾಟಕ ರಾಜ್ಯದಲ್ಲಿ ಕೈಗಾರಿಕೆಗಳ ಬೆಳವಣಿಗೆಗಾಗಿ ಹೆಚ್ಚು ಬಂಡವಾಳ ಹೂಡಿಕೆಯನ್ನು ತರಲು ಸಾಕಷ್ಟು ಉದ್ದಿಮೆದಾರರು ತಯಾರಿದ್ದಾರೆ. ಆದರೆ ಕೆಲವೊಂದು ಸಮಸ್ಯೆಗಳಿಂದ ಅದು ಸ್ಥಗಿತಗೊಂಡಿದೆ.

ಭೂ ಖರೀದಿ, ಭೂ ಪರಿವರ್ತನೆ ಹಾಗೂ ವಿವಿಧ ನಿಯಮಗಳಿಂದ ಹೆಚ್ಚು ಸಮಯ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಭೂ ಸುಧಾರಣಾ ಕಾಯ್ದೆಯಡಿ ಕೈಗಾರಿಕೆಗಳನ್ನು ಪ್ರಾರಂಭಿಸಲು ಜಿಲ್ಲಾಡಳಿತದ ಮಟ್ಟದಲ್ಲಿ ವಿಷೇಶ ಸಮಿತಿ ರಚಿಸಲಾಗಿದ್ದು, ಅಲ್ಲಿ ಯೋಜನೆಯು ಮಂಜೂರಾದರೆ ಕೈಗಾರಿಕೆಗೆ ಅಗತ್ಯ  ಭೂಮಿಯನ್ನು ಗುರುತಿಸಿ ಅದನ್ನು ಖರೀದಿಸಿ ಕೈಗಾರಿಕೆಯನ್ನು ಕೂಡಲೇ ಪ್ರಾರಂಭಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಶಾಸಕರಾದ ಪ್ರೀತಂ ಜೆ. ಗೌಡ ಅವರು ಮಾತನಾಡಿ ಉದ್ಯಮ ಅಭಿವೃದ್ಧಿ ಜೊತೆಗೆ ರೈತರನ್ನೂ ಉಳಿಸಿಕೊಳ್ಳುವ ಕಾರ್ಯ ಮಾಡಬೇಕು, ಈ ನಿಟ್ಟಿನಲ್ಲಿ  ಸ್ಥಳೀಯ ಕೃಷಿ, ತೋಟಗಾರಿಕಾ ಉತ್ಪನ್ನಗಳಿಗೆ ಪೂರಕವಾದ ಚಟುವಟಿಕೆಗಳನ್ನು ಪ್ರಾರಂಭಿಸಬೇಕು ಎಂದರು. ಈ ನಿಟ್ಟಿನಲ್ಲಿ ಸರ್ಕಾರದಿಂದ ಉದ್ಯಮಿಗಳಿಗೆ ಬರುವ ಎಲ್ಲಾ ಸೌಲಭ್ಯಗಳು ದೊರಕುವಂತೆ ಹಾಗೂ ಯಾವುದೇ ರೀತಿಯ ಸಮಸ್ಯೆಗಳಿದ್ದಲ್ಲಿ, ಅವುಗಳನ್ನು ಬಗೆಹರಿಸುವ ಕಾರ್ಯ ಮಾಡುತ್ತೇನೆ ಎಂದರು.

ಪ್ರಸ್ತುತ ದಿನಗಳಲ್ಲಿ ಕಚ್ಚಾ ವಸ್ತುಗಳು ದೊರೆಯದೆ ಕೈಗಾರಿಕೆಗಳು ಮುಚ್ಚುವ ಪರಿಸ್ಥಿತಿ ಉಂಟಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳೂ ಕೂಡ ಅಗತ್ಯ ಕ್ರಮವಹಿಸಬೇಕು ಎಂದು ಶಾಸಕರು ಹೇಳಿದರು. ಈ ಸಂದರ್ಭದಲ್ಲಿ ವಿವಿಧ ಉದ್ದಿಮೆದಾರರು ತಮ್ಮ ಸಮಸ್ಯೆಗಳನ್ನು ಸಚಿವರೊಡನೆ ಹಂಚಿಕೊಂಡರು.

ಕೈಗಾರಿಕಾಭಿವೃದ್ಧಿ ಮಂಡಳಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿವಶಂಕರ್ ಅವರು ಕೈಗಾರಿಕೆಗಳ ಅಭಿವೃದ್ಧಿಗೆ ಸರ್ಕಾರ ಕೈಗೊಂಡಿರುವ ನಿರ್ಧಾರಗಳು ಹಾಗೂ ಸೌಲಭ್ಯಗಳ ಬಗ್ಗೆ ವಿವರಿಸಿದರು.

ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ, ಜಿಲ್ಲಾಧಿಕಾರಿ ಆರ್. ಗಿರೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್ ಗೌಡ ಎಫ್.ಕೆ.ಸಿ.ಸಿ.ಐ ಅಧ್ಯಕ್ಷರು ಹಾಗೂ ಚೇಂಬರ್ ಆಫ್ ಕಾಮರ್ಸ್ ನ ಮುಖ್ಯಸ್ಥರಾದ ಕಿರಣ್, ಚೇಂಬರ್ ಆಫ್ ಕಾಮರ್ಸ್ ನ ಅಧ್ಯಕ್ಷರಾದ ಧನಪಾಲ್ ಹಾಗೂ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.

Facebook Comments

Sri Raghav

Admin