ಆಂಧ್ರದಲ್ಲಿ ಭುಗಿಲೆದ್ದ ಟಿಡಿಪಿ-ವೈಎಸ್‌ಆರ್‌ಸಿಪಿ ಸಂಘರ್ಷ : ನಾಯ್ಡು ಪುತ್ರನಿಗೆ ಮತ್ತು ಗೃಹಬಂಧನ..!

ಈ ಸುದ್ದಿಯನ್ನು ಶೇರ್ ಮಾಡಿ

ಹೈದರಾಬಾದ್, ಸೆ.11 (ಪಿಟಿಐ)- ಆಂಧ್ರಪ್ರದೇಶ ಮುಖ್ಯಮಂತ್ರಿ ವೈ..ಎಸ್.ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‍ಆರ್‍ಸಿಪಿ ಸರ್ಕಾರದ ವಿರುದ್ಧ ಭಾರೀ ಪ್ರತಿಭಟನೆಗೆ ಸಜ್ಜಾಗಿದ್ದ ತೆಲುಗು ದೇಶಂ ಪಾರ್ಟಿ(ಟಿಡಿಪಿ)ಗೆ ತಡೆಯೊಡ್ಡಲು ಮಾಜಿ ಮುಖ್ಯಮಂತ್ರಿ ಮತ್ತು ಪಕ್ಷದ ನಾಯಕ ಎನ್, ಚಂದ್ರಬಾಬು ನಾಯ್ಡು, ಅವರ ಪುತ್ರ ನರ ಲೋಕೇಶ್ ಮತ್ತು ಅನೇಕ ಪ್ರಮುಖ ನಾಯಕರನ್ನು ಗೃಹ ಬಂಧನಕ್ಕೆ ಒಳಪಡಿಸಲಾಗಿದೆ.

ಈ ಬೆಳವಣಿಗೆಯಿಂದಾಗಿ ವೈಎಸ್‍ಆರ್‍ಸಿಪಿ ಮತ್ತು ಟಿಡಿಪಿ ನಡುವಣ ನಡೆಸುತ್ತಿದ್ದ ರಾಜಕೀಯ ಸಂಘರ್ಷ ಇಂದು ತಾರಕಕ್ಕೇರಿದ್ದು, ಹಿಂಸಾಚಾರ ಭುಗಿಲೆಳುವ ಸಾಧ್ಯತೆ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದಾದ್ಯಂತ ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ನಾಯ್ಡು ಕರೆ ಮೇರೆಗೆ ರಾಜ್ಯ ಸರ್ಕಾರದ ವಿರುದ್ಧ ಟಿಡಿಪಿ ಚಲೋ ಪಲ್ನಾಡು ಎಂಬ ಬೃಹತ್ ಪ್ರತಿಭಟನಾ ರ್ಯಾಲಿ ಹಮ್ಮಿಕೊಂಡಿತ್ತು. ಈ ರ್ಯಾಲಿಯಲ್ಲಿ ಭಾಗವಹಿಸುವುದನ್ನು ತಡೆಯಲು ನಾಯ್ಡು, ಲೋಕೇಶ್, ಹಾಗು ಹಲವಾರು ಮುಖಂಡರನ್ನು ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ತೆಗೆದುಕೊಂಡಿದ್ಧಾರೆ. ಈ ಕ್ರಮದಿಂದ ಟಿಡಿಪಿ ಕಾರ್ಯಕರ್ತರು ಕುಪಿತಗೊಂಡಿದ್ದು ಅದು ಯಾವ ಸಂದರ್ಭದಲ್ಲಾದರೂ ಸ್ಪೋಟಗೊಂಡು ಗಲಭೆ ಉಲ್ಬಣಗೊಳ್ಳುವ ಸಾಧ್ಯತೆ ದಟ್ಟವಾಗಿದೆ.

ಆಡಳಿತಾರೂಢ ವೈಎಸ್‍ಆರ್‍ಸಿಪಿ ಸರ್ಕಾರ ಟಿಡಿಪಿ ಮುಖಂಡರು ಮತ್ತು ಕಾರ್ಯಕರ್ತರನ್ನು ಗುರಿಯಾಗಿಟ್ಟುಕೊಂಡು ನಿರಂತರ ದೌರ್ಜನ್ಯ ನಡೆಸುತ್ತಿದೆ. ಕಾರ್ಯಕರ್ತರ ಕೊಲೆ ಮತ್ತು ಹಲ್ಲೆ ಪ್ರಕರಣಗಳು ಮುಂದುವರಿದಿವೆ. ಇವೆಲ್ಲವೂ ಮುಖ್ಯಮಂತ್ರಿ ರೆಡ್ಡಿ ಕುಮ್ಮಕ್ಕಿನಿಂದಲೇ ನಡೆಯುತ್ತಿವೆ ಎಂದು ಆರೋಪಿಯ ಭಾರೀ ಪ್ರತಿಭಟನೆ ನಡೆಸಲು ಉದ್ದೇಶಿಲಾಗಿತ್ತು.

ಗುಂಟೂರಿನಿಂದ ಪಲ್ನಾಡು ಪ್ರಾಂತ್ಯದ ಆತ್ಮಕೂರ್ ಗ್ರಾಮದವರೆಗೆ ಪ್ರತಿಭಟನಾ ರ್ಯಾಲಿ ನಡೆಸಲು ಟಿಡಿಪಿ ಸಕಲ ಸಿದ್ದತೆಗಳನ್ನು ಕೈಗೊಂಡಿತ್ತು. ಆದರೆ ರ್ಯಾಲಿಗೆ ಮುನ್ನವೇ ನಾಯ್ಡು ಸೇರಿದಂತೆ ಪಕ್ಷದ ಧುರೀಣರನ್ನು ಗೃಹಬಂಧನದಲ್ಲಿ ಇರಿಸಿರುವುದು ರಾಜಕೀಯ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ.  ಕಳೆದ ವಾರವಷ್ಟೇ ವೈಎಸ್‍ಆರ್‍ಸಿಪಿ ಸರ್ಕಾರ ಶತದಿನೋತ್ಸವವನ್ನು ಆಚರಿಸಿದ ಬೆನ್ನಲ್ಲೇ ರೆಡ್ಡಿ ಈಗ ಟಿಡಿಪಿಯಿಂದ ಭಾರೀ ಪ್ರತಿರೋಧ ಎದುರಿಸುವಂತಾಗಿದೆ.

ನಾಯ್ಡು ಇಂದು ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆವೆಗೆ ಉಪವಾಸ ಸತ್ಯಾಗ್ರಹ ಕೈಗೊಂಡಿದ್ಧಾರೆ. ಗೃಹ ಬಂಧನದಲ್ಲಿರುವ ನಾಯ್ಡು ಅವರನ್ನು ಭೇಟಿ ಮಾಡಲು ಟಿಡಿಪಿ ಮುಖಂಡರು. ಶಾಸಕರು ಮತ್ತು ಕಾರ್ಯಕರ್ತರು ಯತ್ನಿಸಿದಾದರೂ ಪೊಲೀಸರು ಅವರನ್ನು ತಡೆದು ವಶಕ್ಕೆ ಪಡೆದರು.  ಚುನಾವಣಾ ಪೂರ್ವದಿಂದಲೂ ಎರಡೂ ಪಕ್ಷಗಳ ನಡುವೆ ಪದೇ ಪದೇ ಸಂಘರ್ಷ, ಹಿಂಸಾಚಾರ ಮತ್ತು ಸಾವುನೋವುಗಳಾಗುತ್ತಿದ್ದು, ವೈಎಸ್‍ಆರ್‍ಸಿಪಿ ಸರ್ಕಾರ ರಚನೆ ನಂತರವೂ ಮುಂದುವರಿದಿದೆ.

ಚಂದ್ರಬಾಬು ನಾಯ್ಡು ವಿರುದ್ಧ ಮುಖ್ಯಮಂತ್ರಿ ರೆಡ್ಡಿ ಸೇಡಿನ ಕ್ರಮ ಅನುಸರಿಸಿ ಅವರ ತೇಜೋವಧೆ ಮಾಡುತ್ತಿದ್ದಾರೆ ಎಂದು ಟಿಡಿಪಿ ನಾಯಕರು ಆರೋಪಿಸುತ್ತಲೇ ಬಂದಿದ್ದಾರೆ.
ಪಲ್ನಾಡು ಪ್ರಾಂತ್ಯದಲ್ಲಿ ವೈಎಸ್‍ಆರ್‍ಸಿಪಿ ಕಾರ್ಯಕರ್ತರು ಎಂಟು ಟಿಡಿಪಿ ಕಾರ್ಯಕರ್ತರನ್ನು ಹತ್ಯೆ ಮಾಡಿ ಹಲವರನ್ನು ಗಾಯಗೊಳಿಸಿದ್ದಾರೆ. ಅಲ್ಲದೆ, ಟಿಡಿಪಿ ಬೆಂಬಲಿಗರ ಪ್ರಾಬಲ್ಯವಿರುವ ಗ್ರಾಮಗಳಿಂದ ಜನರನ್ನು ತೆರವುಗೊಳಿಸುವ ಯತ್ನಗಳು ನಡೆಯುತ್ತಿವೆ ಎಂಬುದು ದೇಶಂ ನಾಯಕರ ಆರೋಪ.

ಎರಡೂ ಪಕ್ಷಗಳ ನಡುವೆ ಈಗ ಸಂಘರ್ಷ ತಾರಕಕ್ಕೇರಿದ್ದು, ಮತ್ತೆ ಹಿಂಸಾಚಾರ ಭುಗೆಲೇಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ನರಸರಾವ್‍ಪೇಟೆ, ಸಟ್ಟೆನಾಪಲ್ಲಿ, ಪಲ್ನಾಡು, ಮತ್ತು ಗುರಜರ ಪ್ರಾಂತ್ಯಗಳಲ್ಲಿ ಸೆಕ್ಷನ್ 144ರ ಅನ್ವಯ ಪ್ರತಿಬಂಧಕಾಜ್ಞಾ ಜಾರಿಗೊಳಿಸಲಾಗಿದೆ.

Facebook Comments