ಸರಗಳ್ಳನಿಗೆ ಆಶ್ರಯ ನೀಡಿದ್ದ ಲಾಲ್ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.2- ಸರಗಳ್ಳರಿಗೆ ಆಶ್ರಯ ನೀಡುತ್ತಿದ್ದ ವ್ಯಕ್ತಿಯೊಬ್ಬನನ್ನು ರಾಜಾಜಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.  ರಾಜಸ್ತಾನ ಮೂಲದ ಜಗನ್‍ಲಾಲ್ (22) ಬಂಧಿತ ಆರೋಪಿ. ಈತ ಚಾಮರಾಜಪೇಟೆಯ ರಾಘವೇಂದ್ರ ಬ್ಲಾಕ್‍ನಲ್ಲಿ ವಾಸವಾಗಿದ್ದಾನೆ. ಈ ಮೊದಲು ಗಾಂಧಿಬಜಾರ್‍ನಲ್ಲಿ ಅಂಗಡಿಯನ್ನಿಟ್ಟುಕೊಂಡಿದ್ದನು.

ವ್ಯವಹಾರದಲ್ಲಿ ನಷ್ಟವಾದ ಹಿನ್ನೆಲೆಯಲ್ಲಿ ಬೇರೆ ಕೆಲಸ ಮಾಡುತ್ತಿದ್ದನು. ರಾಜಾಜಿನಗರ ಪೊಲೀಸರು ಮೊನ್ನೆ ಇಬ್ಬರು ಸರಗಳ್ಳರನ್ನು ಗುಂಡು ಹಾರಿಸಿ ಸೆರೆಹಿಡಿದಿದ್ದರು. ಈ ಇಬ್ಬರನ್ನು ವಿಚಾರಣೆಗೊಳಪಡಿಸಿದಾಗ ಬೆಂಗಳೂರಿಗೆ ಬಂದಾಗ ಜಗನ್‍ಲಾಲ್ ತಮಗೆ ಆಶ್ರಯ ನೀಡಿದ್ದ ಎಂಬುದನ್ನು ಬಾಯಿಬಿಟ್ಟಿದ್ದರು.

ಬೆಂಗಳೂರಿನ ಹಲವು ಕಡೆ ಸರಗಳ್ಳತನ ನಡೆಸಿ ನಂತರ ಜಗನ್‍ಲಾಲ್ ಮನೆಯಲ್ಲಿ ಮೂರ್ನಾಲ್ಕು ದಿನ ಉಳಿದುಕೊಂಡು ನಂತರ ಹಿಂದಿರುಗಿತ್ತಿದ್ದೆವು ಎಂದು ಆರೋಪಿಗಳು ವಿಚಾರಣೆ ವೇಳೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ರಾಜಾಜಿನಗರ ಠಾಣೆ ಪೊಲೀಸರು ಆರೋಪಿ ಜಗನ್‍ಲಾಲ್‍ನನ್ನು ಬಂಧಿಸಿ ಹಲವು ಮಾಹಿತಿಗಳನ್ನು ಪಡೆದುಕೊಳ್ಳುತ್ತಿದ್ದಾರೆ.

ಆರೋಪಿ ಜಗಲ್‍ಲಾಲ್ ಇದುವರೆಗೂ ಯಾರ್ಯಾರಿಗೆ ಆಶ್ರಯ ನೀಡಿದ್ದ, ಸರಗಳ್ಳರ ಗ್ಯಾಂಗ್‍ನಲ್ಲಿ ಎಷ್ಟು ಜನ ಇದ್ದಾರೆ, ಎಲ್ಲೆಲ್ಲಿ ಸರ ಕಳ್ಳತನ ಮಾಡಿದ್ದಾರೆ ಎಂಬ ಬಗ್ಗೆ ರಾಜಾಜಿನಗರ ಠಾಣೆ ಪೊಲೀಸರು ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ.

Facebook Comments