ಸಿಬಿಐ ಕೋರ್ಟ್ ಮುಂದೆ ಆಂಧ್ರ ಸಿಎಂ ಜಗನ್ ಹಾಜರ್

ಈ ಸುದ್ದಿಯನ್ನು ಶೇರ್ ಮಾಡಿ

ಹೈದರಾಬಾದ್, ಜ.10- ತಮ್ಮ ಒಡೆತನದ ಸಂಸ್ಥೆಗಳಲ್ಲಿ ಹೂಡಿಕೆ ಹಗರಣಕ್ಕೆ ಸಂಬಂಧಪಟ್ಟಂತೆ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್‍ರೆಡ್ಡಿ ಇಂದು ಸಿಬಿಐ ವಿಶೇಷ ನ್ಯಾಯಾಲಯದ ಮುಂದೆ ವಿಚಾರಣೆಗೆ ಹಾಜರಾದರು.

ಮುಖ್ಯಮಂತ್ರಿಯಾದ ಬಳಿಕ ಜಗನ್ ಇದೇ ಮೊದಲ ಬಾರಿಗೆ ಈ ಪ್ರಕರಣದಲ್ಲಿ ಕೋರ್ಟ್ ಮುಂದೆ ಹಾಜರಾಗಿದ್ದು, ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಬೇಕೆಂದು ಕೋರಿ ಆಂಧ್ರ ಸಿಎಂ ಸಲ್ಲಿಸಿದ್ದ ಅರ್ಜಿಯನ್ನು ಜ.3 ರಂದು ಸಿಬಿಐ ವಿಶೇಷ ನ್ಯಾಯಾಲಯ ತಳ್ಳಿ ಹಾಕಿ ಖುದ್ದಾಗಿ ಹಾಜರಾಗುವಂತೆ ಸೂಚಿಸಿತ್ತು.

ವೈಎಸ್‍ಆರ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥರೂ ಆಗಿರುವ ಜಗನ್‍ಮೋಹನ್‍ರೆಡ್ಡಿ ಇಂದು ಬೆಳಗ್ಗೆ ಪಕ್ಷದ ರಾಜ್ಯಸಭಾ ಸದಸ್ಯ ವಿಜಯಸಾಯಿ ರೆಡ್ಡಿ ಅವರೊಂದಿಗೆ ನ್ಯಾಯಾಲಯದ ಮುಂದೆ ಹಾಜರಾದರು. ಕೋರ್ಟ್ ಆವರಣ ಸುತ್ತ ವ್ಯಾಪಕ ಬಂದೋಬಸ್ತ್ ಮಾಡಲಾಗಿತ್ತು. ವೈಎಸ್‍ಆರ್ ರಾಜಶೇಖರರೆಡ್ಡಿ ಅವರು ಮುಖ್ಯಮಂತ್ರಿಯಾಗಿದ್ದಾಗ ತಮ್ಮ ಪ್ರಭಾವದಿಂದ ಅನೇಕರಿಗೆ ಕೆಲಸ, ಕಾರ್ಯಗಳನ್ನು ಮಾಡಿಕೊಟ್ಟಿದ್ದಕ್ಕೆ ಪ್ರತಿಫಲವಾಗಿ ತಮ್ಮ ಪುತ್ರ ಜಗನ್‍ಗೆ ಸೇರಿದ ಸಂಸ್ಥೆಗಳಲ್ಲಿ ಹಣ ತೊಡಗಿಸುವಂತೆ ಸೂಚಿಸಿ ಹೂಡಿಕೆದಾರರಿಂದ ಕೋಟ್ಯಂತರ ರೂ. ಗಳ ಬಂಡವಾಳ ಕ್ರೋಢೀಕರಿಸಿದ್ದರು.

ಈ ಸಂಬಂಧ ಜಗನ್ ಪ್ರಮುಖ ಆರೋಪಿಯಾಗಿದ್ದು, ಸಿಎಂ ವಿರುದ್ಧ 11 ಪ್ರಕರಣಗಳು ಆರೋಪಪಟ್ಟಿಯಲ್ಲಿವೆ. ಸಂಸದ ವಿಜಯಸಾಯಿರೆಡ್ಡಿ, ಮಾಜಿ ಸಚಿವರು ಮತ್ತು ಉನ್ನತಾಧಿಕಾರಿಗಳು ಸಹ ಈ ಹಗರಣದಲ್ಲಿ ಶಾಮೀಲಾಗಿದ್ದಾರೆ. ಪ್ರಕರಣದ ವಿಚಾರಣೆ ಮುಂದುವರೆದಿದೆ.

Facebook Comments