ಕೈಗಾರಿಕಾ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ದಿಗೆ ಮೊದಲ ಆದ್ಯತೆ: ಸಚಿವ ಜಗದೀಶ್‌ ಶೆಟ್ಟರ್‌

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು ನವಂಬರ್‌ 26: ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ದಿ ಪಡಿಸುವುದಕ್ಕೂ ಮುನ್ನ ಆ ಪ್ರದೇಶಗಳಿಗೆ ರಸ್ತೆ ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳ ಅಭಿವೃದ್ದಿಗೆ ಮೊದಲು ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಶ್ರೀ ಜಗದೀಶ್‌ ಶೆಟ್ಟರ್‌ ಸೂಚನೆ ನೀಡಿದರು.

ಬೆಂಗಳೂರಿನ ಖನಿಜ ಭವನದ ಕರ್ನಾಟಕ ಉದ್ಯೋಗ ಮಿತ್ರ ಸಭಾಂಗಣದಲ್ಲಿ ಆಯೋಜಿಸಿದ್ದ ಕೆಐಎಡಿಬಿ ವತಿಯಿಂದ ರಾಜೀವ್ ಗಾಂಧಿ ನಿಗಮ ಇವರ ಯೋಜನೆಗಾಗಿ ರಾಮನಗರ ಜಿಲ್ಲೆ ಮತ್ತು ತಾಲ್ಲೂಕು ಬಿಡದಿ ಹೋಬಳಿ ತಾಳಾಗುಪ್ಪೆ ಗ್ರಾಮದಲ್ಲಿ ಭೂ ಸ್ವಾಧೀನ ಪಡಿಸುವ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.

ಕೈಗಾರಿಕಾ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ದಿಗೆ ಇಲಾಖೆಗಳ ನಡುವೆ ಸಮನ್ವಯತೆ ಅಗತ್ಯವಾಗಿದೆ. ಅಲ್ಲದೆ, ಕೈಗಾರಿಕಾ ಪ್ರದೇಶಕ್ಕೆ ತಲುಪಲು ಹಾಗೂ ಕೈಗಾರಿಕೆಗಳನ್ನು ಸ್ಥಾಪಿಸಲು ಅಗತ್ಯ ಇರುವ ಮೂಲಭೂತ ಸೌಕರ್ಯಗಳು ಇಲ್ಲದೆ ಪ್ರದೇಶವನ್ನು ಅಭಿವೃದ್ದಿಪಡಿಸಲಾಗುತ್ತಿದೆ. ಇದರ ಬದಲಾಗಿ ಮೊದಲು ಪ್ರದೇಶಕ್ಕೆ ತಲುಪಲು ಅಗತ್ಯವಿರುವ ರಸ್ತೆಗಳು ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ದಿಗೆ ಮೊದಲು ಅದ್ಯತೆ ನೀಡಬೇಕು. ನಂತರ ಕೈಗಾರಿಕಾ ಪ್ರದೇಶವನ್ನು ಅಭಿವೃದ್ದಿ ಪಡಿಸುವುದು ಸೂಕ್ತ ಎಂದು ಹೇಳಿದರು.

ಸಭೆಯಲ್ಲಿ ಭಾಗವಹಿಸಿದ್ದ ವಸತಿ ಸಚಿವರಾದ ವಿ ಸೋಮಣ್ಣ ಅವರು ಮಾತನಾಡಿ, ನೆಲಮಂಗಲದ ಬಳಿ ಸಣ್ಣಕೈಗಾರಿಕಾ ಇಲಾಖೆಯ ವತಿಯಿಂದ ಅಭಿವೃದ್ದಿ ಪಡಿಸಲಾಗಿರುವ ಕೈಗಾರಿಕಾ ಪ್ರದೇಶದ ಬಳಿ ಸಮರ್ಪಕ ರಸ್ತೆ ಇಲ್ಲ. ಇದರ ಕಾಮಗಾರಿಯ ಪ್ರಾರಂಭದ ಸಂಧರ್ಭದಲ್ಲಿ ಅಗತ್ಯ ಹಣಕಾಸಿನ ಸಹಾಯವನ್ನು ಮಾಡುವುದಾಗಿ ಭರವಸೆ ನೀಡಿದರು. ಅಲ್ಲದೆ, ತಾಳಗುಪ್ಪೆ ಗ್ರಾಮದಲ್ಲಿ ಕೆಐಎಡಿಬಿ ವತಿಯಿಂದ ಭೂಸ್ವಾಧೀನ ಕುರಿತ ಸಮಸ್ಯೆಗಳನ್ನು ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಕೆಐಎಡಿಬಿ ಸಿಇಓ ಡಾ ಶಿವಶಂಕರ್ ಸೇರಿದಂತೆ ಪ್ರಮುಖ ಅಧಿಕಾರಿಗಳು ಪಾಲ್ಗೊಂಡಿದ್ದರು.

Facebook Comments