ಅವಮಾನ ಮಾಡಿದವರ ವಿರುದ್ಧ ಆಕ್ರೋಶ ಹೊರಹಾಕಿದ ಹಿರಿಯ ನಟ ಜಗ್ಗೇಶ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.23- ನನ್ನನ್ನು ಹೀಯಾಳಿಸುವ ಮೂಲಕ 40 ವರ್ಷದ ಕಲಾಸೇವೆಯನ್ನು ಅಪಮಾನ ಮಾಡಿದ್ದೀರಾ, ನಾನು ಏನೂ ತಪ್ಪು ಮಾಡಿಲ್ಲ, ಯಾರಿಗೂ ಹೆದರಿ ಓಡಿ ಹೋಗುವುದಿಲ್ಲ. ಚಿತ್ರರಂಗದಲ್ಲಿ ರೌಡಿಸಂ ಅನ್ನು ಪ್ರೋತ್ಸಾಹಿಸುವ ಕೆಲಸ ಬೇಡ ಎಂದು ಹಿರಿಯ ನಟ ನವರಸನಾಯಕ ಜಗ್ಗೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ಬೆಳಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸುಮಾರು 14 ನಿಮಿಷ 47 ಸೆಕೆಂಡ್‍ನ ವಿಡಿಯೋ ಮೂಲಕ ತಮಗಾದ ಅವಮಾನ, ನೋವುಗಳನ್ನು ಹೊರಹಾಕಿದ್ದಾರೆ.

ನಿನ್ನೆ ಸುಮಾರು 20 ಮಂದಿ ಹುಡುಗರು ನನ್ನ ಬಳಿ ಬಂದಿದ್ದರು, ಎಲ್ಲರೂ ಉದ್ವೇಗದಲ್ಲಿದ್ದರು, ನನ್ನ ಮಾತನ್ನು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಅವರು ಇರಲಿಲ್ಲ, ಆದರೂ ನಾನು ಹೆದರಿ ಓಡಿ ಹೋಗಿಲ್ಲ, ಗಂಡಸಾಗಿ ಅವರ ಮುಂದೆ ಕುಳಿತು ಮಾತನಾಡಿದ್ದೇನೆ, ಉತ್ತರ ಕೊಟ್ಟಿದ್ದೇನೆ, ನನ್ನ ಸ್ನೇಹಿತರ ಮೂಲಕ ಅದೇ ಹುಡುಗರು ರಾತ್ರಿ ನನ್ನ ಜೊತೆ ಮಾತನಾಡಿದ್ದಾರೆ ಎಂದು ಜಗ್ಗೇಶ್ ಹೇಳಿದ್ದಾರೆ.

ನಾನು 40 ವರ್ಷಗಳ ಹಿಂದೆ ಚಿತ್ರರಂಗಕ್ಕೆ ಬಂದಾಗ ಬಹಳಷ್ಟು ಮಂದಿ ಹುಟ್ಟೇ ಇರಲಿಲ್ಲ, ಡಾ.ರಾಜ್‍ಕುಮಾರ್, ಡಾ.ವಿಷ್ಣುವರ್ಧನ್, ಡಾ. ಅಂಬರೀಶ್, ಶಂಕರ್‍ನಾಗ್, ಅನಂತ್‍ನಾಗ್‍ರಂತವರ ಜೊತೆ ನೋವನ್ನು ಹಂಚಿಕೊಂಡು ಬೆಳೆದವನು.

ಒಕ್ಕಲುತನದ ಕುಟುಂಬದಿಂದ ಬಂದು ಪೇಪರ್ ಹಾಸಿಕೊಂಡು ಮಲಗಿ ಕಷ್ಟಪಟ್ಟು ಬದುಕು ಕಟ್ಟಿಕೊಂಡವನು, ನನಗೆ ಅವಮಾನ ಮಾಡುತ್ತೀರಾ? ನನ್ನ ವಯಸ್ಸಿನ ಅಪ್ಪ , ಅಮ್ಮ ನಿಮ್ಮ ಮನೆಯಲ್ಲಿದ್ದಾರೆ ಅವರನ್ನು ಅವಮಾನಿಸುತ್ತೀರಾ? ನನ್ನನ್ನು ಅಪಮಾನಿಸುವುದು ಕನ್ನಡ ಚಿತ್ರರಂಗಕ್ಕೆ ಮಾಡಿದ ಅಪಮಾನ ಎಂದು ಜಗ್ಗೇಶ್ ನೋವಿನಿಂದ ಹೇಳಿದ್ದಾರೆ.

ಖಾಸಗಿಯಾಗಿ ನಾನು ಮಾತನಾಡಿರುವುದನ್ನು ವೈರಲ್ ಮಾಡಿ ಘೇರಾವ್ ಹಾಕಿಸುವ ಪ್ರಯತ್ನ ಸರಿಯಲ್ಲ , ಇದನ್ನು ಪ್ರೋತ್ಸಾಹಿಸಿದರೆ ಚಿತ್ರರಂಗದಲ್ಲಿ ರೌಡಿಸಂ ಅನ್ನು ಪ್ರೋತ್ಸಾಹಿಸಿದಂತೆ ಸ್ಟಾರ್‍ಡಂ ಹೆಸರಿನಲ್ಲಿ ಈ ರೀತಿಯ ಕೃತ್ಯಗಳು ಮುಂದುವರೆದರೆ ಕನ್ನಡ ಚಿತ್ರರಂಗ ಹಾಳಾಗುತ್ತದೆ, ನನಗೂ ಅಭಿಮಾನಿಗಳಿದ್ದಾರೆ.

167 ಸಂಘಟನೆಗಳಿವೆ. ನಿನ್ನೆಯಿಂದ ಅವರು ಕೂಡ ನನಗೆ ಫೆÇೀನ್ ಮಾಡಿ ಕಣ್ಣೀರು ಹಾಕುತ್ತಿದ್ದಾರೆ. ಘೇರಾವ್ ಹಾಕಿಸುವುದು ನಮಗೂ ಗೊತ್ತು. ಜನರನ್ನು ಕಟ್ಟಿಕೊಂಡು ನಾನು ಬೀದಿಯಲ್ಲೇ ಇರಬಲ್ಲೆ, ಆದರೆ ಅದೆಲ್ಲಾ ಸರಿಯಲ್ಲ ಎಂದು ಯಾವುದಕ್ಕೂ ಬೆಂಬಲ ನೀಡುತ್ತಿಲ್ಲ ಎಂದು ಜಗ್ಗೇಶ್ ನುಡಿದಿದ್ದಾರೆ.

ಅನ್ಯಭಾಷೆಗಳ ಚಿತ್ರರಂಗದವರು ಕನ್ನಡದ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ, ಇಲ್ಲಿನ ಮಾರುಕಟ್ಟೆ ಹಾಳಾಗುತ್ತಿದೆ, ನನ್ನ ವೃತ್ತಿ ಜೀವನದಲ್ಲಿ ನನ್ನ ಎಡಗಾಲನ್ನೂ ಕೂಡ ಬೇರೆ ಭಾಷೆಗೆ ಇಟ್ಟಿಲ್ಲ , ಕನ್ನಡ, ಕನ್ನಡ ಚಿತ್ರರಂಗ ಎಂದು ಬದುಕು ಸವೆಸಿದ್ದೇನೆ, ಹಿರಿಯ ನಟರಲ್ಲಿ ನಾನು, ರವಿಚಂದ್ರನ್, ಶಿವರಾಜ್‍ಕುಮಾರ್, ರಮೇಶ್ ಮಾತ್ರ ಬದುಕಿದ್ದೇವೆ, ನಾವು ಸತ್ತ ನಂತರ ತಿಥಿ ಮಾಡಿ ಸಂತೋಷಪಡಿ ಎಂದು ಜಗ್ಗೇಶ್ ನೋವಿನಿಂದ ಹೇಳಿದ್ದಾರೆ.

ಮೂರು ದಿನ ಥಿಯೇಟರ್ ಮುಂದೆ ನಿಂತ ಜನರನ್ನು ನೋಡಿ ಖುಷಿಪಡಬೇಡಿ, ಚಿತ್ರರಂಗ ಸಂಕಷ್ಟಕ್ಕೀಡಾಗುತ್ತಿದೆ, ಮುಂದೆ ನಿರ್ಮಾಪಕರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬರುತ್ತದೆ. ಒಬ್ಬ ಹೀರೋ ಚಿತ್ರ ಹಿಟ್ ಆದರೆ ಮತ್ತೊಬ್ಬರನ್ನು ಬೆಳೆಯಲು ಬಿಡದಂತಹ ವಾತಾವರಣವಿದೆ, ಈ ರಾಜಕೀಯ ಹುನ್ನಾರಗಳು ಒಳ್ಳೆಯದಲ್ಲ, ನಾನು ಬಕೆಟ್ ಹಿಡಿದಿದ್ದರೆ 20 ಬಾರಿ ಎಂಎಲ್‍ಎ ಆಗಬಹುದಾಗಿತ್ತು, ಬೇಕಾದಷ್ಟು ಅಕಾರಗಳನ್ನು ಪಡೆಯಬಹುದಿತ್ತು, ಪ್ರಾಮಾಣಿಕವಾಗಿ ಬದುಕಿದ್ದರಿಂದ 2 ಬಾರಿ ಶಾಸಕನಾಗಿ ಕೆಲಸ ಮಾಡಿದ್ದೇನೆ ಎಂದು ಜಗ್ಗೇಶ್ ಹೇಳಿದರು.

Facebook Comments

Sri Raghav

Admin