“ಹಿರಿಯರು ಮಧ್ಯ ಪ್ರವೇಶಿಸಿ ಒಡೆದ ಮನಸ್ಸುಗಳನ್ನು ಸರಿ ಮಾಡಿ” : ಜಗ್ಗೇಶ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.18- ದರ್ಶನ್ ಕುರಿತಂತೆ ನಡೆಯುವತ್ತಿರುವ ಚರ್ಚೆ, ವಿವಾದಗಳ ಬಗ್ಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಹಿರಿಯ ನಟ ಜಗ್ಗೇಶ್, ಕೊರೊನಾ ಸಂಕಷ್ಟ ಕಾಲದಲ್ಲಿ ಅನಗತ್ಯ ಚರ್ಚೆಗಳು ಬೇಡ. ಉದ್ಯಮದ ಹಿರಿಯರು ಮಧ್ಯ ಪ್ರವೇಶ ಮಾಡಿ ಒಡೆದ ಮನಸ್ಸುಗಳನ್ನು ಸರಿ ಮಾಡಿ ಎಂದು ಮನವಿ ಮಾಡಿದ್ದಾರೆ.

ಫೇಸ್‍ಬುಕ್‍ನ ಬರಹದಲ್ಲಿ ತಮ್ಮ ಹಿನ್ನೆಲೆಯನ್ನು ಹೇಳಿಕೊಂಡಿರುವ ಜಗ್ಗೇಶ್, ನಂತರ ದರ್ಶನ್ ಪ್ರಕರಣವನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ್ದಾರೆ. ಎಲ್ಲಿಯೂ ದರ್ಶನ್ ಅಥವಾ ಇಂದ್ರಜಿತ್ ಅವರ ಹೆಸರನ್ನು ಪ್ರಸ್ತಾಪಿಸಿಲ್ಲ. ತಮ್ಮ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯ , ತುರುವೇಕೆರೆ ತಾಲ್ಲೂಕಿನ, ಮಾಯಸಂದ್ರ ಹೋಬಳಿಯ,ಆನಡುಗು ಎಂಬ ಸಣ್ಣ ಗ್ರಾಮದ, ಸಣ್ಣ ಕುಟುಂಬದ, ಹಳ್ಳಿಹುಡುಗ ನಾನು ಈಶ್ವರ್ ಗೌಡ ಅಲಿಯಾಸ್ ಜಗ್ಗೇಶ..!

ನನಗೆ ಇದ್ದ ಆಸೆ ರಾಜಕುಮಾರ್ ಕಂಡು ಮಾತಾಡಿಸಿ ಆಶೀರ್ವಾದ ಪಡೆದು ಸಿನಿಮ ನಟನಾಗ ಬೇಕು ಎಂಬುದು ಒಂದೆ ಗುರಿ. 1980ಕ್ಕೆ ಆ ಕಾರ್ಯ ಶುರು, ಆಗ ನಾನು ಹೇಗಿದ್ದೆ ಎಂಬ ಫೋಟೋವನ್ನು ಪ್ರಕಟಿಸಿದ್ದೇನೆ. ಆ ಮುಖಕ್ಕೆ ಆ ಕಾಲಕ್ಕೆ ಸಿನಿಮನಟನಾಗುವ ಕನಸ್ಸು? ಈಗಿನ ಜಗ್ಗೇಶನ ಮರೆತು ಯೋಚಿಸಿ ಇದು ಸಾಧ್ಯವಾ ಎಂದು ಬರೆದುಕೊಂಡಿದ್ದಾರೆ.

ಆಗ ಅಪ್ಪ-ಅಮ್ಮ, ಬಂಧು-ಮಿತ್ರರು ಹೇಳಿದ್ದು, ಉಗಿದು ಬೈದು ಅನ್ನ ಹುಡ್ಕೋ ಕ್ಯಾಮೆ ನೋಡು ತಿಳಿ ಹೇಳಿ ಶಿವಲಿಂಗಪ್ಪನ ಮರ್ಯಾದೆ ಉಳಿಸು ಮಂಗಮುಂಡೆದೆ ಎಂದಿದ್ದರು.ಗುರುಹಿಂದೆ ಗುರಿಮಂದೆ ಹಠ ಬಿಡಲಿಲ್ಲ ಗಾಂನಗರ ಅಲೆದು ಚಪ್ಪಲಿಸವೆಸಿ ದಡಮುಟ್ಟಿದೆ ಎಂದರೆ ಆತ್ಮ ದ್ರೋಹವಾಗಬಹುದು. ಅಂದಿನ ನಿರ್ದೇಶಕರು, ನಿರ್ಮಾಪಕರು, ಮಾಧ್ಯಮಮಿತ್ರರು ಹಾಗೂ ವಿಶೇಷವಾಗಿ ಸ್ವಾಭಿಮಾನಿ ಕನ್ನಡಿಗರು ದಡ ಮುಟ್ಟಿಸಿದರು.

ಅಪಮಾನ-ಅವಮಾನ ಹಸಿವಿನಿಂದ ನಿದ್ರೆಗೆಟ್ಟು ಗೆದ್ದ ಒಬ್ಬ ಸಾಮಾನ್ಯನ ಬದುಕು! ಆಗ ನಮ್ಮ ಬಗ್ಗೆ ಹೇಳಲು ಇದ್ದದ್ದು ಕೇವಲ ಬರಹ ಮಾಧ್ಯಮ ಮಾತ್ರ. ಇಂದು ನೂರಾರು ಮಾಧ್ಯಮ ಮತ್ತು ಕ್ಷಣಮಾತ್ರದಲ್ಲೇ ಅಂಗೈಯಲ್ಲೇ ಆಕಾಶ ತೋರಿಸುವ ಸಾಮಾಜಿಕ ಜಾಲತಾಣ.

ಸಿಕ್ಕಸಿಕ್ಕವರ ಕೈಲಿ ಈ ಜಾಲತಾಣಸಿಕ್ಕು ವಯಸ್ಸು, ಸಾಧನೆ ಮರೆತು ತಮ್ಮ ಮೂಗಿನ ನೇರಕ್ಕೆ ಭಾಷೆ ಬಳಸಿ ವಿಕೃತ ಆನಂದ ಅನುಭವಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣ ಎಂಬುದು ಸಾರ್ವಜನಿಕ ಶೌಚಾಲಯವಾಗಿದೆ. ವಿಯಿಲ್ಲದೆ ದಪ್ಪ ಚರ್ಮ ಮಾಡಿಕೊಂಡು ಬದುಕಬೇಕಿದೆ ಎಂದು ಹೇಳಿದ್ದಾರೆ.

ಉದ್ಯಮದ ಕಲಾಬಂಧುಗಳಲ್ಲಿ ನನ್ನ ಸಣ್ಣ ಅನುಭವದ ನುಡಿಯನ್ನು ಹೇಳಿಕೊಂಡಿದ್ದೇನೆ. ನಶ್ವರ ಬಣ್ಣದ ಬದುಕು! ಕಲಾವಿಧನ ಜೀವನ ನಡೆಯುವವರೆಗೆ ನಾಣ್ಯ, ಮಿಕ್ಕಂತೆ ಸವಕಲು! ಕಲಾವಿದ ವರ್ಷಕ್ಕೆ ಮಾತ್ರ ಹೊರ ಬರುವ ಊರ ಮೆರೆದೇವರಂತೆ ಇರಬೇಕು. ಆಗ ದೇವರಪರ ಅದ್ಭುತ ಅನನ್ಯ! ದಿನ ಆ ದೇವರು ಬೀದಿಗೆ ಬಂದರೆ ಮೌಲ್ಯ ಇರುವುದಿಲ್ಲ.

ರಾಜನಾಗಲಿ, ಸೇವಕನಾಗಲಿ ಜಗಳ ಸಂರ್ಘಷ ಸಹಜ. ಆ ಘರ್ಷಣೆ ನಿಭಾಯಿಸುವ ಕಲೆ ಕರಗತ ಆಗಿರಬೇಕು. ಆಗ ಕಾಡ್ಗಿಚ್ಚನ್ನು ತಣ್ಣಗೆ ಮಾಡಬಹುದು. ಮಾಧ್ಯಮಮಿತ್ರರು, ಕಲಾರಂಗ ನಮ್ಮ ಕಾಯಕ ಜನರಿಗೆ ತಲುಪಿಸೋ ನಾವಿಕರು. ನಾವು ನೀವು ದೇಹದ ಎರಡು ಕಣ್ಣುಗಳಿಂದ್ದಂತೆ ಯಾವುದಕ್ಕೇ ನೋವಾದರು ನಮಗೆ ನಷ್ಟ ವಾಗುತ್ತದೆ.

ನಮ್ಮ ಚಿತ್ರರಂಗ ಬೀದಿಯ ಚರ್ಚೆಯ ವಿಷಯವಾಗದಿರಲಿ. ಈಗಾಗಲೆ ಚಿತ್ರರಂಗ ಕೊರೊನಾ ಹೆಮ್ಮಾರಿ ಹೊಡೆತಕ್ಕೆ ನಲುಗಿದೆ. ಉದ್ಯಮದ ಹಿರಿಯರು, ವಾಣಿಜ್ಯಮಂಡಲಿ ಮಧ್ಯಪ್ರವೇಶಿಸಿ ಒಡೆದ ಮನಗಳ ಸರಿಮಾಡಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

Facebook Comments

Sri Raghav

Admin