ಜೈಜಗದೀಶ್ ವಿರುದ್ಧ ಕಾನೂನು ಹೋರಾಟ ಮಾಡ್ತೀನಿ : ಸಾ.ರಾ.ಗೋವಿಂದ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ6- ನಟ, ನಿರ್ಮಾಪಕ ಜೈಜಗದೀಶ್ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ನಿರ್ಮಾಪಕ, ವಿತರಕ ಹಾಗೂ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದ್ ತಿಳಿಸಿದ್ದಾರೆ.

ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿ ಸಿಲುಕಿರುವ ನಿರ್ಮಾಪಕ, ವಿತರಕ ಹಾಗೂ ಪ್ರದರ್ಶಕರಿಗೆ ಉಚಿತ ಆಹಾರ ಕಿಟ್‍ಗಳನ್ನು ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ನೀಡಲು ಮುಂದಾಗಿದ್ದರು.

ಇದಕ್ಕೆ ಸಹಕಾರಿಯಾಗಿ ನಾನು ನಿಂತಿದ್ದೆ. ಈ ಕುರಿತು ನಟ ಜೈಜಗದೀಶ್ ನಮ್ಮ ಸೇವೆಯನ್ನು ಸಹಿಸದೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅದನ್ನು ವಾಟ್ಸಪ್ ಮೂಲಕ ಹರಿಬಿಟ್ಟು ನನ್ನ ವರ್ಚಸ್ಸಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ವಿಚಾರವಾಗಿ ಪೊಲೀಸ್ ಆಯುಕ್ತರಾದ ಭಾಸ್ಕರ್ ರಾವ್ ಅವರಿಗೆ ಲಿಖಿತ ಮನವಿ ಮಾಡಿದ್ದೆ. ಈ ಬಗ್ಗೆ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ವಿಚಾರವಾಗಿ ಪೊಲೀಸ್ ಇಲಾಖೆ ಕೂಡ ನನ್ನ ಮನವಿಗೆ ಸ್ಪಂದಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದಿದ್ದಾರೆ.

ಚಿತ್ರರಂಗದಲ್ಲಿ ಇಷ್ಟು ವರ್ಷಗಳ ಕಾಲ ಸೇವೆ ಮಾಡುತ್ತಾ ಜನಸಾಮಾನ್ಯರೊಂದಿಗೆ ಬೆರೆತು ಜೀವನ ನಡೆಸುತ್ತಿರುವ ನನ್ನ ವೈಯಕ್ತಿಕ ಬದುಕಿಗೆ ಧಕ್ಕೆ ತಂದಂತಹ ನಟ ಜೈಜಗದೀಶ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ.

42 ದಿನಗಳ ಕಾಲ ನಿರಂತರ ಲಾಕ್‍ಡೌನ್ ಆದ ಹಿನ್ನೆಲೆಯಲ್ಲಿ ಚಲನಚಿತ್ರರಂಗ ಸಂಪೂರ್ಣ ಸ್ಥಗಿತಗೊಂಡಿತ್ತು. ಚಲನಚಿತ್ರ ಕಾರ್ಮಿಕರು ವರ್ಗವಷ್ಟಲ್ಲದೇ ನಿರ್ಮಾಪಕರು , ನಿರ್ದೇಶಕರು, ತಾಂತ್ರಿಕ ವರ್ಗ, ವಿತರಕರು, ಪ್ರದರ್ಶಕರು ಸೇರಿದಂತೆ ಎಲ್ಲರೂ ಒಂದಲ್ಲ ಒಂದು ರೀತಿ ಸಂಕಷ್ಟಕ್ಕೆ ಸಿಲುಕಿದ್ದರು.

ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದ ನನಗೆ ಇದರ ಬಗ್ಗೆ ಅರಿವಿತ್ತು. ಹಾಗಾಗಿ ಸಮಸ್ಯೆ ಇದ್ದವರಿಗೆ ಸ್ಪಂದಿಸಲು ಮುಂದಾಗಿದ್ದೆ. ಇದಕ್ಕೆ ಜೈಜಗದೀಶ್ ಅವರು ಅಪಮಾನಕರ ರೀತಿಯಲ್ಲಿ ವರ್ತಿಸಿ ನನಗೆ ತೇಜೋವಧೆ ಮಾಡಿರುವುದು ಖಂಡನೀಯ. ಇದರ ವಿರುದ್ಧ ದೂರು ನೀಡಿದ್ದು, ಕಾನೂನು ಹೋರಾಟ ಮಾಡುತ್ತೇನೆ ಎಂದು ಹೇಳಿದ್ದಾರೆ.

Facebook Comments

Sri Raghav

Admin