ಹಜ್ ಭವನಕ್ಕೆ ಟಿಪ್ಪು ಹೆಸರಿಡುವುದರಿಂದ ಯಾವುದೇ ಸಮಸ್ಯೆ ಇಲ್ಲ : ಜಮೀರ್
ಚನ್ನಪಟ್ಟಣ, ಜೂ.24- ಹಜ್ ಭವನಕ್ಕೆ ಟಿಪ್ಪು ಹೆಸರು ನಾಮಕರಣ ಮಾಡುವುದರಿಂದ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ವಕ್ಫ್ ಖಾತೆ ಸಚಿವ ಜಮೀರ್ ಅಹಮದ್ ವಿಶ್ವಾಸ ವ್ಯಕ್ತಪಡಿಸಿದರು. ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪ್ರಥಮ ಬಾರಿಗೆ ಕ್ಷೇತ್ರಕ್ಕೆ ಆಗಮಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಜ್ ಭವನಕ್ಕೆ ಟಿಪ್ಪು ಹೆಸರಿಡಲು ಪ್ರಸ್ಥಾವನೆಗಳು, ಮುಸ್ಲೀಂ ಸಂಘಟನೆಗಳಿಂದ ಬೇಡಿಕೆಗಳು ಬಂದಿದ್ದು, ಈ ಬಗ್ಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸೇರಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪವರನ್ನೊಳಗೊಂಡು ಎಲ್ಲಾ ಸಮುದಾಯದ ಸಚಿವರ ಜೊತೆ ಚರ್ಚೆ ನಡೆಸಿ ಬಳಿಕ ನಿರ್ಣಯ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಹಜ್ ಭವನಕ್ಕೆ ಟಿಪ್ಪು ಹೆಸರಿಡುವುದರಿಂದ ಯಾವುದೇ ರಾಜಕೀಯ ಲಾಭ ಉದ್ದೇಶ ಇಲ್ಲ. ಹಜ್ ಭವನ ನಿರ್ಮಾಣ ಮಾಡುವಲ್ಲಿ ಎಚ್.ಡಿ.ಕುಮಾರಸ್ವಾಮಿ, ಯಡಿಯೂರಪ್ಪ, ಸದಾನಂದಗೌಡರ ಕೊಡುಗೆ ಸಹ ಇದೆ. ಹೀಗೆ ಎಲ್ಲಾ ಪಕ್ಷದ ಎಲ್ಲಾ ನಾಯಕರ ಕೊಡುಗೆ ಈ ಭವನಕ್ಕೆ ಇದ್ದು, ಎಲ್ಲರ ಅಭಿಪ್ರಾಯಗಳನ್ನು ಪಡೆದು ಮುಂದುವರೆಯುತ್ತೇವೆ ಎಂದು ಸಚಿವರು ಹೇಳಿದರು. ಟಿಪ್ಪು ಹೆಸರನ್ನು ನಾಮಕರಣ ಮಾಡಲು ಪ್ರಯತ್ನಿಸಿರುವುದು ಯಾವುದೇ ವಿಮಾನ ನಿಲ್ದಾಣಕ್ಕಾಗಲಿ, ರೈಲ್ವೇ ನಿಲ್ದಾಣಕ್ಕಾಗಲಿ, ರಸ್ತೆ, ಪಾರ್ಕ್ಗಾಗಲಿ ಅಲ್ಲ. ಹಜ್ ಭವನ ಒಂದು ಪ್ರತ್ಯೇಕ ಅಂಗ ಸಂಸ್ಥೆಯಾಗಿದೆ. ಇದಕ್ಕೆ ಟಿಪ್ಪು ನಾಮಕರಣ ಮಾಡುವುದರಿಂದ ಯಾವುದೇ ಸಮಸ್ಯೆಗಳು ಉದ್ಬವಿಸುವುದಿಲ್ಲ ಎಂಬ ಭರವಸೆ ಇದೆ ಎಂದರು.
ಇದಕ್ಕೂ ಮುನ್ನಾ ಸಚಿವ ಜಮೀರ್ಅಹಮದ್ ದರ್ಗಾಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಶಾದಿ ಮಹಲ್ನಲ್ಲಿ ಅಭಿಮಾನಿಗಳಿಂದ ಸನ್ಮಾನ ಸ್ವೀಕರಿಸಿದರು. ತಹಶೀಲ್ದಾರ್ ಕೆ.ರಮೇಶ್, ಆಹಾರ ನಿರೀಕ್ಷಕರಾದ ಮಲ್ಲಿಕಾರ್ಜುನ, ಮೋಹನ್, ಎಸ್.ಕೆ.ಬೀಡಿ ಮಾಲೀಕರಾದ ಸೈಯದ್ ಸಫಿಉಲ್ಲಾ ಸಕಾಪ್, ಮುಖಂಡರಾದ ವಾಸೀಲ್ ಆಲಿಖಾನ್, ಫರೀದ್ಖಾನ್, ಷಬೀರ್ ಉಲ್ಲಾಬೇಗ್, ನಗರಸಭಾ ಅಧ್ಯಕ್ಷೆ ನಜ್ಮುನ್ನೀಸಾ, ಸದಸ್ಯರಾದ ಜಕಿಅಹಮದ್ ಮತ್ತಿತರರು ಉಪಸ್ಥಿತರಿದ್ದರು.