ಐಎಂಎ ಜ್ಯುವೆಲ್ಸ್ ಧೋಖಾ ಬಗ್ಗೆ ಜಮೀರ್ ಅಹಮದ್ ಹೇಳಿದ್ದೇನು ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.11- ಐಎಂಎ ಜ್ಯುವೆಲ್ಸ್ ಮಾಲೀಕ ನಾಪತ್ತೆ ಪ್ರಕರಣ ಸಂಬಂಧ ಇದರ ಹಿಂದೆ ಯಾರೇ ಭಾಗಿಯಾಗಿದ್ದರೂ ಸೂಕ್ತ ತನಿಖೆಯಾಗಲಿ. ದೊಡ್ಡ ರಾಜಕಾರಣಿಯಾಗಿದ್ದರೂ ಸಹ ಬಿಡಬಾರದು ಎಂದು ವಕ್ಫ್ ಸಚಿವ ಜಮೀರ್ ಅಹಮ್ಮದ್ ಖಾನ್ ಇಂದಿಲ್ಲಿ ಒತ್ತಾಯಿಸಿದ್ದಾರೆ.

ಈ ಸಂಬಂಧ ಗೃಹ ಸಚಿವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಮೀರ್‍ಅಹಮ್ಮದ್ ಖಾನ್ ಅವರು, ಇದೊಂದು ಮಹಾ ವಂಚನೆ ಪ್ರಕರಣವಾಗಿದೆ. ಈ ಬಗ್ಗೆ ಎಸ್‍ಐಟಿ ತನಿಖೆ ನಡೆಸುವಂತೆ ಒತ್ತಾಯಿಸಿದ್ದೇವೆ. ಅಲ್ಲದೆ, ಐಎಎಸ್ ಹಾಗೂ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚಿಸಬೇಕು. ಆನಂತರ ಸಿಬಿಐ ತನಿಖೆ ನಡೆಸಲಿ ಎಂದು ಮನವಿ ಮಾಡಿದ್ದಾಗಿ ಹೇಳಿದರು.

ಐಎಂಎ ಜ್ಯುವೆಲ್ಸ್ ಮಾಲೀಕ ಮಹಮ್ಮದ್ ಮನ್ಸೂರ್‍ಖಾನ್‍ಗೆ ಸೇರಿದ ಚಿನ್ನ, ಬೆಳ್ಳಿ, ವಜ್ರ ಇನ್ನಿತರ ಆಸ್ತಿಗಳನ್ನು ಸರ್ಕಾರ ಜಫ್ತಿ ಮಾಡಿ ಹೂಡಿಕೆ ಮಾಡಿರುವ ಅಮಾಯಕರಿಗೆ ಹಣ ನೀಡಲಿ ಎಂದು ಗೃಹ ಸಚಿವರಲ್ಲಿ ಮನವಿ ಮಾಡಿರುವುದಾಗಿ ಇದೇ ವೇಳೆ ಅವರು ತಿಳಿಸಿದರು.

ಹೂಡಿಕೆದಾರರ ಮನವೊಲಿಕೆ ಯತ್ನ : ಶಿವಾಜಿನಗರದಲ್ಲಿ ಪೊಲೀಸರು ದೂರು ಸ್ವೀಕರಿಸುತ್ತಿದ್ದ ವೇಳೆ ವಂಚನೆಗೊಳಗಾದ ಹಲವಾರು ಗ್ರಾಹಕರು ತಮ್ಮ ಹಣವನ್ನು ಹೇಗಾದರೂ ಮಾಡಿ ಕೊಡಿಸಿ ಎಂದು ಗಲಾಟೆ ಮಾಡುತ್ತಿದ್ದಾಗ ಪೊಲೀಸರು ಹೂಡಿಕೆದಾರರ ಮನವೊಲಿಕೆಗೆ ಮುಂದಾದರು.

ನಿಮ್ಮ ದೂರನ್ನು ತೆಗೆದುಕೊಂಡಿದ್ದೇವೆ. ಆತಂಕ ಪಡುವುದು ಬೇಡ. ನಿಮ್ಮ ಜತೆ ನಾವಿದ್ದೇವೆ. ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ನಿಮ್ಮ ಹಣ ನಿಮಗೆ ಸಿಗುತ್ತದೆ ಎಂದು ಪೊಲೀಸರು ಗ್ರಾಹಕರಲ್ಲಿ ವಿಶ್ವಾಸ ಮೂಡಿಸುತ್ತಿದ್ದುದು ಕಂಡುಬಂತು.

ವೃದ್ಧರೊಬ್ಬರು ದೂರು ನೀಡಲು ಬಂದಾಗ ಅಸ್ವಸ್ಥರಾಗಿ ಕುಸಿದು ಬಿದ್ದರು. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಇನ್ನುಳಿದಂತೆ ಹಣ ಕಳೆದುಕೊಂಡ ನೂರಾರು ಮಂದಿ ದೂರು ನೀಡಲು ಗುಂಪು ಗುಂಪಾಗಿ ಬರುತ್ತಲೇ ಇದ್ದರು.

Facebook Comments

Sri Raghav

Admin