ತನ್ವೀರ್ ಸೇಠ್’ಗೆ ಓಪನ್ ಚಾಲೆಂಜ್ ಹಾಕಿದ ಜಮೀರ್ ಆಹಮ್ಮದ್‍ ..!

ಈ ಸುದ್ದಿಯನ್ನು ಶೇರ್ ಮಾಡಿ

Jameer

ಬೆಂಗಳೂರು, ಜೂ.19-ಮುಸ್ಲಿಂ ಸಮುದಾಯದಲ್ಲಿ ನಾನು ಜನಪ್ರಿಯತೆ ಪಡೆದ ನಾಯಕ ಎಂದು ಹೇಳುಕೊಳ್ಳುವುದಿಲ್ಲ. ನಾನು ಜನ ಸೇವಕ. ಮಾಜಿ ಸಚಿವ ತನ್ವೀರ್‍ಸೇಠ್ ಅವರ ಕ್ಷೇತ್ರವಾದ ಎನ್.ಆರ್.ಮೊಹಲ್ಲಾಗೆ ನಾನೂ ಬರುತ್ತೇನೆ. ಅವರೂ ಬರಲಿ. ಯಾರ ಬಳಿ ಹೆಚ್ಚು ಜನ ಸೇರುತ್ತಾರೆ ಎಂಬುದು ಪರೀಕ್ಷೆಯಾಗಲಿ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜಮೀರ್ ಆಹಮ್ಮದ್‍ಖಾನ್ ಸವಾಲು ಹಾಕಿದ್ದಾರೆ.ವಿಕಾಸಸೌಧದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಪುಟದಲ್ಲಿ ಸಚಿವರಾಗಿರುವ ಜಮೀರ್ ಅಹಮ್ಮದ್‍ಖಾನ್, ಯು.ಟಿ.ಖಾದರ್ ಮುಸ್ಲಿಂ ಸಮುದಾಯದ ಪ್ರತಿನಿಧಿಗಳಲ್ಲ ಎಂಬ ತನ್ವೀರ್‍ಸೇಠ್ ಹೇಳಿಕೆಗೆ ಪ್ರತಿಕ್ರಿಯಿಸಿದರು.

ಜನಪ್ರಿಯ ನಾಯಕನಾಗಲು ನಾನು ಸಿನಿಮಾ ಸ್ಟಾರ್ ಅಲ್ಲ. ಸಾಮಾಜ ಸೇವಕ. ಆದರೆ, ನನ್ನದೊಂದು ಸವಾಲು. ತನ್ವೀರ್‍ಸೇಠ್ ಅವರ ಕ್ಷೇತ್ರಕ್ಕೆ ಭೇಟಿ ನೀಡುತ್ತೇನೆ. ಅವರೂ ಬರಲಿ. ಅದಕ್ಕೆ ಸಮಯವನ್ನು ಅವರೇ ನಿಗದಿ ಮಾಡಲಿ. ಯಾರು ಬಂದಾಗ ಹೆಚ್ಚು ಜನ ಸೇರುತ್ತಾರೆ ಎಂದು ಬಹಿರಂಗವಾಗಲಿ. ಅದು ತನ್ವೀರ್‍ಸೇಠ್ ಅವರಿಗೂ ಗೊತ್ತಾಗಲಿ ಎಂದು ತಿರುಗೇಟು ನೀಡಿದರು.

ಕಾಂಗ್ರೆಸ್‍ನಲ್ಲಿ ಸಚಿವಸ್ಥಾನ ನೀಡಲು ನಾನು ರಾಹುಲ್‍ಗಾಂಧಿ ನೆಂಟನಲ್ಲ. ಹೈಕಮಾಂಡ್ ತನ್ನದೇ ಸಂಸ್ಥೆಗಳ ಮೂಲಕ ಎಲ್ಲಾ ರೀತಿಯಲ್ಲೂ ಸಮೀಕ್ಷೆ ಮಾಡಿಸುತ್ತದೆ. ಅದನ್ನು ಆಧರಿಸಿ ಸಾಮಥ್ರ್ಯ ಇರುವವರಿಗೆ ಅವಕಾಶ ನೀಡುತ್ತದೆ. ಈಗ ನನ್ನನ್ನು ಗುರುತಿಸಿ ಸಚಿವರನ್ನಾಗಿ ಮಾಡಿದೆ. ಇದರಿಂದ ಸಹಜವಾಗಿ ಹಿರಿಯರಾದ ರೋಷನ್‍ಬೇಗ್ ಹಾಗೂ ತನ್ವೀರ್‍ಸೇಠ್ ಅವರಿಗೆ ಅಸಮಾಧಾನವಾಗಿರುತ್ತದೆ. ರೋಷನ್‍ಬೇಗ್ ಅವರು ಹಲವಾರು ವರ್ಷ ಸಚಿವರಾಗಿದ್ದ ಹಿರಿಯರು. ಈ ಬಾರಿಯೂ ಅವರಿಗೆ ಅವಕಾಶ ಸಿಗುತ್ತದೆ ಎಂದು ನಂಬಿಕೆ ಇಟ್ಟುಕೊಂಡಿದ್ದರು. ಅವಕಾಶ ಸಿಗದೇ ಇದ್ದಾಗ ನಿರಾಶೆಯಾಗುವುದು ಸಹಜ ಎಂದರು.

ಜಮೀರ್ ಅಹಮ್ಮದ್ ಖಾನ್ ಬಳಿ ಇರುವ ಹಜ್ ಮತ್ತು ವಕ್ಫ್ ಖಾತೆಯನ್ನು ವಾಪಸ್ ಪಡೆಯಬೇಕೆಂದು ರೋಷನ್ ಬೇಗ್ ಅವರು ಒತ್ತಡ ಹಾಕುವುದು ಸಹಜ. ಆದರೆ, ಈ ಎರಡೂ ಖಾತೆಗಳನ್ನು ನನ್ನಿಂದ ಹಿಂಪಡೆದರೆ ಮತ್ತೆ ಯು.ಟಿ.ಖಾದರ್ ಅವರಿಗೆ ಕೊಡಬೇಕು. ಮುಸ್ಲಿಂ ಸಮುದಾಯದ ಸಚಿವರಿಗೆ ಈ ಖಾತೆ ಕೊಡುವ ಸಂಪ್ರದಾಯವಿದೆ. ರೋಷನ್ ಬೇಗ್ ಸಚಿವರಾಗಿಲ್ಲ. ಅವರಿಗೆ ಖಾತೆ ಕೊಡಲು ಅವಕಾಶವಿಲ್ಲ ಎಂದು ಹೇಳಿದರು.

ನಾನು ಸಚಿವನಾದ ಮೇಲೆ ಸಮುದಾಯದ ಹಿರಿಯ ನಾಯಕರಾದ ರೆಹಮಾನ್‍ಖಾನ್, ಸಿ.ಎಂ.ಇಬ್ರಾಹಿಂ, ಎನ್.ಎ.ಹ್ಯಾರಿಸ್ ಅವರುಗಳನ್ನು ಭೇಟಿ ಮಾಡಿದ್ದೇನೆ. ರೋಷನ್ ಬೇಗ್ ಅವರನ್ನು ಭೇಟಿ ಮಾಡಲು ಫೋನ್ ಮಾಡಿದ್ದೆ. ಅವರು ಹೊರಗಡೆ ಇರುವುದಾಗಿ ತಿಳಿಸಿ ಬಂದ ಮೇಲೆ ಫೋನ್ ಮಾಡುವುದಾಗಿ ಹೇಳಿದ್ದರು. ಈವರೆಗೂ ಫೋನ್ ಮಾಡಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತನ್ವೀರ್‍ಸೇಠ್ ಅವರನ್ನು ಸೋಲಿಸಲು ನಾನು ಯಾವ ಪ್ರಯತ್ನವನ್ನೂ ಮಾಡಿಲ್ಲ. ನನಗೆ ಅಷ್ಟು ಸಾಮಥ್ರ್ಯ ಇದೇ ಎಂಬುದೇ ನನಗೆ ತಿಳಿದಿರಲಿಲ್ಲ. ತನ್ವೀರ್‍ಸೇಠ್ ಹೇಳಿದ ಮೇಲೆಷ್ಟೇ ಗೊತ್ತಾಗಿದ್ದು, ತನ್ವೀರ್‍ಸೇಠ್ ಅವರು ತಮ್ಮ ಕ್ಷೇತ್ರ ಬಿಟ್ಟು ಪಕ್ಕದ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರಾ ಕೇಳಿನೋಡಿ ಎಂದು ತಿರುಗೇಟು ನೀಡಿದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ನಮ್ಮ ನಡುವೆ ಯಾವುದೇ ವೈಮನಸ್ಸುಗಳಿಲ್ಲ. ಹಿಂದೆ ಇತ್ತು. ಈಗ ರಾಜಿಯಾಗಿದ್ದೇವೆ. ಸಚಿವನಾಗಿ ಅವರ ಕೈಕೆಳಗೆ ನಾನು ಈಗ ಕೆಲಸ ಮಾಡಬೇಕು. ನಮ್ಮ ನಡುವೆ ಉತ್ತಮ ಸಂಬಂಧವಿದೆ. ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರ ಜತೆಯೂ ಯಾವುದೇ ತಕರಾರಿಲ್ಲ ಎಂದು ಹೇಳಿದರು.

ದೊಡ್ಡಕಾರ್ ಬೇಕು:
ನನಗೆ ದೊಡ್ಡ ಕಾರಿನಲ್ಲಿ ಕುಳಿತು ಓಡಾಡಿ ಅಭ್ಯಾಸ. ಇನೋವ ಸಣ್ಣದು, ಹಾಗಾಗಿ ಇರುವುದರಲ್ಲೇ ದೊಡ್ಡದಾದ ಫಾರ್ಚೂನರ್ ಕಾರು ಕೊಡುವಂತೆ ಕೇಳಿದ್ದೇನೆ. ಸಿದ್ದರಾಮಯ್ಯ ಅವರು ಬಳಸುತ್ತಿದ್ದ ಫಾರ್ಚೂನರ್ ಕಾರು ಸುಸ್ಥಿತಿಯಲಿದೆ. ಅದನ್ನು ಕೊಟ್ಟರೆ ಒಳ್ಳೆಯದು ಅಂದುಕೊಂಡಿದ್ದೇನೆ. ಇದರಲ್ಲಿ ಅದೃಷ್ಟ-ದುರಾದೃಷ್ಟಗಳೆಂಬ ನಂಬಿಕೆಗಳಿಲ್ಲ. ಅಧಿಕಾರವೇನೂ ಶಾಶ್ವತವಲ್ಲ. ಎಲ್ಲವನ್ನೂ ಶಾಶ್ವತವಾಗಿ ಇಟ್ಟುಕೊಳ್ಳಲು ಸಾಧ್ಯವಿಲ್ಲ ಎಂದರು.

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಖಾಸಗಿ ಕಾರಿನಲ್ಲಿ ಓಡಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಜಮೀರ್, ಅವರು ಜನಪ್ರಿಯ ನಾಯಕರು. ಯಾವ ಕಾರಿನಲ್ಲಿ ಹೋದರೂ ಜನ ಅವರನ್ನು ಗುರುತಿಸುತ್ತಾರೆ. ನಾವು ಆ ಮಟ್ಟಕ್ಕೆ ಬೆಳೆದಿಲ್ಲ. ಅಪರೂಪಕ್ಕೆ ಅವಕಾಶ ಸಿಕ್ಕಿದೆ. ಯಾವುದೋ ಕಾರಿನಲ್ಲಿ ಹೋದರೆ ಜನ ನಮ್ಮನ್ನು ಗುರುತಿಸುವುದಿಲ್ಲ. ಸರ್ಕಾರಿ ಕಾರಿನಲ್ಲಿ ಹೋದರೆ ಜನರ ಕಣ್ಣಿಗೆ ಕಾಣಿಸುತ್ತೇವೆ. ಹಾಗಾಗಿ ಫಾರ್ಚೂನರ್ ಕಾರನ್ನು ಕೇಳಿದ್ದೇನೆ ಎಂದು ಹೇಳಿದರು.ನಾನು ಯಾರ ಜತೆಯೂ ತಕರಾರು ಮಾಡಿಕೊಳ್ಳಲು ಇಷ್ಟಪಡುವುದಿಲ್ಲ. ಆದರೆ, ರಾಜಕೀಯವಾಗಿ ಆರೋಪ ಮಾಡುವವರಿಗೆ ಉತ್ತರ ನೀಡಬೇಕಾಗುತ್ತದೆ. ಇಲ್ಲವಾದರೆ ನಾನು ಹೇಡಿ ಎಂದುಕೊಳ್ಳುತ್ತಾರೆ ಎಂದರು.

Facebook Comments

Sri Raghav

Admin