ಕಾಶ್ಮೀರ ಕಣಿವೆಯ ಅನಂತ್‍ನಾಗ್ ಜಿಲ್ಲೆಯಲ್ಲಿ ಎನ್‍ಕೌಂಟರ್ : ಮೂವರು ಹಿಜ್‍ಬುಲ್ ಉಗ್ರರ ಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

3-terrorist-01
ಶ್ರೀನಗರ, ಜ.16-ಕಾಶ್ಮೀರ ಕಣಿವೆಯ ಅನಂತ್‍ನಾಗ್ ಜಿಲ್ಲೆಯಲ್ಲಿ ನಿನ್ನೆ ರಾತ್ರಿಯಿಡೀ ನಡೆದ ಭೀಕರ ಗುಂಡಿ ಕಾಳಗದಲ್ಲಿ ನಿಷೇಧಿತ ಹಿಜ್‍ಬುಲ್ ಮುಜಾಹಿದ್ದೀನ್ (ಎಚ್‍ಎಂ) ಉಗ್ರಗಾಮಿ ಸಂಘಟನೆಯ ಮೂವರು ಉಗ್ರರನ್ನು ಭದ್ರತಾ ಪಡೆ ಯೋಧರು ಹೊಡೆದುರುಳಿಸಿದ್ದಾರೆ. ಹತರಾದ ಭಯೋತ್ಪಾದಕರಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.   ನೋಟು ನಿಷೇಧದ ಬಳಿಕ ತಮ್ಮ ಭಯೋತ್ಪಾದನೆ ಚಟುವಟಿಕೆಗಳನ್ನು ಕೆಲಕಾಲ ನಿಲ್ಲಿಸಿದ್ದ ಉಗ್ರರ ಉಪಟಳ ಮತ್ತೆ ಆರಂಭವಾಗಿದ್ದು, ಭದ್ರತಾ ಪಡೆಗಳು ದಿಟ್ಟ ಉತ್ತರ ನೀಡಿವೆ.

ದಕ್ಷಿಣ ಕಾಶ್ಮೀರದ ಪಹಲ್‍ಗಂ ಪ್ರದೇಶದ ಅವೂರ ಗ್ರಾಮದಲ್ಲಿ ಉಗ್ರರು ಅಡಗಿರುವ ಬಗ್ಗೆ ಭದ್ರತಾ ಪಡೆಗಳಿಗೆ ಖಚಿತ ಸುಳಿವು ಲಭಿಸಿತ್ತು. ನಿನ್ನೆ ಸಂಜೆಯಿಂದಲೇ ಆ ಪ್ರದೇಶದಲ್ಲಿ ಯೋಧರು ತೀವ್ರ ಶೋಧ ಕಾರ್ಯ ಮುಂದುವರಿಸಿದ್ದರು. ಆಗ ಅಡಗಿ ಕುಳಿತ್ತಿದ್ದ ಉಗ್ರಗಾಮಿಗಳು ಯೋಧರ ಮೇಲೆ ಗುಂಡು ಹಾರಿಸಿದರು. ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿದರು. ನಿನ್ನೆ ರಾತ್ರಿಯಿಂದ ಇಂದು ನಸುಕಿನವರೆಗೆ ನಡೆದ ಗುಂಡಿನ ಕಾಳಗದಲ್ಲಿ ಮೂವರು ಹಿಜ್‍ಬುಲ್ ಉಗ್ರರು ಹತರಾದರು ಎಂದು ಹಿರಿಯ ಸೇನಾಧಿಕಾರಿಯೊಬ್ಬರು ಹೇಳಿದ್ದಾರೆ.  ಹತರಾದ ಉಗ್ರರ ಬಳಿಯಿದ್ದ ಎಕೆ-47 ಬಂದೂಕುಗಳು, ಮಾಗೆಝೈನ್‍ಗಳು, ಮದ್ದುಗುಂಡುಗಳು ಮತ್ತು ಇತರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವರು ಪಹಲ್‍ಗಂ ಜಿಲ್ಲೆಯಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ಸಂಚು ರೂಪಿಸಿದ್ದರು ಎಂಬುದು ಅವರ ಬಳಿ ಪತ್ತೆಯಾದ ವಸ್ತುಗಳಿಂದ ತಿಳಿದುಬಂದಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin