ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಜಮುನಾ ಕ್ವಾರ್ಟರ್ ಫೈನಲ್‍ಗೆ

ಈ ಸುದ್ದಿಯನ್ನು ಶೇರ್ ಮಾಡಿ

ಉಲಾನ್-ಉಡೇ(ರಷ್ಯಾ), ಅ.9-ಭಾರತದ ಬಾಕ್ಸರ್ ಜಮುನಾ ಬೋರೊ (54 ಕೆಜಿ ವಿಭಾಗ) ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಅಲ್ಜಿರಿಯಾ ಬಲಿಷ್ಟ ಎದುರಾಳಿ ಕ್ವಿಡಾಡ್ ಫೌ ಅವರನ್ನು ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

ರಷ್ಯಾದ ಉಲಾನ್-ಉಡೇಯಲ್ಲಿ ನಡೆದ ಕೊನೆ 16 ಹಂತದ ಸ್ಪರ್ಧೆಯಲ್ಲಿ ಜಮುನಾ, ಆಫ್ರಿಕನ್ ಗೇಮ್ಸ್‍ನ ಚಿನ್ನದ ಪದಕ ವಿಜೇತೆ ಹಾಗೂ ವಿಶ್ವದ ಐದನೇ ಶ್ರೇಯಾಂಕ ಬಾಕ್ಸರ್ ಕ್ವಿಡಾಡ್‍ರನ್ನು 5-0 ಮೂಲಕ ಸೋಲಿಸಿ ಕೊನೆ ಎಂಟರ ಘಟ್ಟ ತಲುಪಿದರು. ಈ ಮೂಲಕ ವಿಶ್ವ ಬಾಕ್ಸಿಂಗ್ ಚಾಂಪಿಯನ್‍ಶಿಪ್‍ನಲ್ಲಿ ತಮ್ಮ ಚೊಚ್ಚಲ ಪದಕ ಗಳಿಸಲು ಜಮುನಾ ಇನ್ನೊಂದು ಪಂದ್ಯದಲ್ಲಿ ಜಯ ಸಾಧಿಸಬೇಕಿದೆ.

ಅಸ್ಸಾಂ ರೈಫಲ್ಸ್‍ನ ಉದ್ಯೋಗಿಯಾದ 22 ವರ್ಷದ ಜಮುನಾ ಮಂದಗತಿಯಲ್ಲಿ ಪಂದ್ಯ ಆರಂಭಿಸಿದರಾದರೂ ಬಾಕ್ಸಿಂಗ್ ಮುಂದುವರಿದಂತೆ ಆಕ್ರಮಣಕಾರಿ ಪಂಚ್‍ಗಳ ಮೂಲಕ ಬಲಿಷ್ಟ ಎದುರಾಳಿಗೆ ಆಘಾತ ನೀಡಿದರು. ಎರಡು ಮತ್ತು ಮೂರನೇ ಸುತ್ತಿನಲ್ಲಿ ಭಾರತ ಮತ್ತು ಅಲ್ಜಿರಿಯಾ ಬಾಕ್ಸರ್ ಸಮ ಬಲ ಸಾಧಿಸಿದರು. ಆದರೆ ಜಮುನಾಳ ಹೊಡೆತಗಳು ಜೋರಾಗಿದ್ದವು. ನಂತರ ಕ್ವಿಡಾಡ್ ಮೇಲೆ ಪ್ರಾಬಲ್ಯ ಸಾಧಿಸಿ ವಿಜೇತರಾದರು.

ಈ ವರ್ಷ ಇಂಡಿಯಾ ಓಪನ್ ಪಂದ್ಯದಲ್ಲಿ ಚಿನ್ನದ ಪದಕ ಗೆದ್ದಿದ್ದ ಅಸ್ಸಾಂನ ಜಮುನಾ ಅವರು ವಿಶ್ವ ಮಟ್ಟದಲ್ಲಿ ಸ್ಪರ್ಧಿಸಲು ಅವರ ತಾಯಿ ತರಕಾರಿಗಳನ್ನು ಮಾರಾಟ ಮಾಡಿ ಹಣ ಕ್ರೋಢೀಕರಿಸಿದ್ದರು.

Facebook Comments