ನಾಳೆ ಸುಪ್ರೀಂನಲ್ಲಿ ವಿಚಾರಣೆ ಬರಲಿದೆ ಗಣಿಧಣಿ ರೆಡ್ಡಿ ಬಳ್ಳಾರಿ ಭೇಟಿಗೆ ಅವಕಾಶ ಕೋರಿದ್ದ ಅರ್ಜಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜೂ.6- ತೀವ್ರ ಅನಾರೋಗ್ಯಕ್ಕೆ ಒಳಗಾಗಿರುವ ತಮ್ಮ ಮಾವನನ್ನು ನೋಡಲು ಬಳ್ಳಾರಿ ಭೇಟಿಗೆ ಅವಕಾಶ ನೀಡುವಂತೆ ಕೋರಿ ಮಾಜಿ ಸಚಿವ ಮತ್ತು ಗಣಿ ಧಣಿ ಗಾಲಿ ಜನಾರ್ದನರೆಡ್ಡಿ ಸಲ್ಲಿಸಿರುವ ಮನವಿ ನಾಳೆ ಸುಪ್ರೀಂಕೋರ್ಟ್‍ನಲ್ಲಿ ವಿಚಾರಣೆಗೆ ಬರಲಿದೆ.

ತಮ್ಮ ಮಾವನವರು ತೀವ್ರ ಅನಾರೋಗ್ಯದಿಂದ ಬಳ್ಳಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕ (ಐಸಿಯು)ದಲ್ಲಿದ್ದಾರೆ. ಅವರನ್ನು ನೋಡಲು ಬಳ್ಳಾರಿಗೆ ತೆರಳುವುದಕ್ಕಾಗಿ ತಮಗೆ ಅನುಮತಿ ನೀಡಬೇಕೆಂದು ಕೋರಿ ರೆಡ್ಡಿ ಇಂದು ಬೆಳಗ್ಗೆ ಸುಪ್ರೀಂಕೋರ್ಟ್‍ಗೆ ಮನವಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಇಂದೂ ಮಲ್ಹೋತ್ರಾ ಅವರು ಈ ಅರ್ಜಿಯನ್ನು ಪುರಸ್ಕರಿಸಿ ನಾಳೆ (ಶುಕ್ರವಾರ) ವಿಚಾರಣೆ ನಡೆಸುವುದಾಗಿ ತಿಳಿಸಿದರು.

ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಮೂರು ವರ್ಷಗಳ ಕಾರಾಗೃಹ ಶಿಕ್ಷೆ ಅನುಭವಿಸಿರುವ ರೆಡ್ಡಿ, ಪ್ರಸ್ತುತ ಜಾಮೀನಿನ ಮೇಲಿದ್ದಾರೆ.  ಬಳ್ಳಾರಿ ಹಾಗೂ ಆಂಧ್ರ ಪ್ರದೇಶದ ಅನಂತಪುರಂ ಮತ್ತು ಕಡಪಾ ಜಿಲ್ಲೆಗಳಿಗೆ ರೆಡ್ಡಿ ತೆರಳದಂತೆ ಅವರ ಮೇಲೆ ನಿರ್ಬಂಧ ವಿಧಿಸಿ ನ್ಯಾಯಾಂಗ ಆದೇಶ ನೀಡಲಾಗಿದೆ.

ಓಬಳಾಪುರಂ ಮೈನಿಂಗ್ ಕಂಪೆನಿ (ಒಎಂಸಿ) ಹಗರಣಕ್ಕೆ ಸಂಬಂಧಪಟ್ಟಂತೆ ಸೆಪ್ಟೆಂಬರ್ 5, 2011ರಲ್ಲಿ ಸಿಬಿಐ ಜನಾರ್ದನರೆಡ್ಡಿ ಮತ್ತು ಒಎಂಸಿ ವ್ಯವಸ್ಥಾಪಕ ನಿರ್ದೇಶಕ ಜಿ.ವಿ.ಶ್ರೀನಿವಾಸರೆಡ್ಡಿ ಅವರನ್ನು ಬಂಧಿಸಿ ಹೈದರಾಬಾದ್ ಜೈಲಿನಲ್ಲಿರಿಸಿತ್ತು.2015ರಲ್ಲಿ ಅವರಿಗೆ ಸುಪ್ರೀಂಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಆದರೆ, ಸಾಕ್ಷ್ಯಾಧಾರಗಳನ್ನು ತಿರುಚುವ ಸಾಧ್ಯತೆ ಹಿನ್ನೆಲೆಯಲ್ಲಿ ಬಳ್ಳಾರಿಗೆ ತೆರಳದಂತೆ ಅವರಿಗೆ ನಿರ್ಬಂಧ ವಿಧಿಸಲಾಗಿತ್ತು.

Facebook Comments