ರಾಜ್ಯದಲ್ಲಿ ಜನತಾ ಪರಿವಾರದ ನಾಯಕರ ದರ್ಬಾರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.28- ರಾಜ್ಯದಲ್ಲಿ ಜನತಾ ಪರಿವಾರ ಈಗ ಅಧಿಕಾರದಲ್ಲಿ ಇಲ್ಲದೆ ಇರಬಹುದು. ಆದರೆ ವಿಧಾನಸಭೆಯ ನಾಯಕ ಮತ್ತು ಪ್ರತಿಪಕ್ಷದ ನಾಯಕರು ಸೇರಿ ಎಲ್ಲರೂ ಜನತಾ ಪರಿವಾರದ ಮೂಲದವರೇ ಆಗಿರುವುದು ವಿಶೇಷ.  ಅನಿರೀಕ್ಷಿತ ಬೆಳವಣಿಗೆಯಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ, ಮುಖ್ಯಮಂತ್ರಿ ಹುದ್ದೆಗೇರಿದ ಬಸವರಾಜ ಬೊಮ್ಮಾಯಿ ಅವರು ಮೂಲತಃ ಜನತಾ ಪರಿವಾರದ ನಾಯಕರು. ಜನತಾದಳದಲ್ಲಿ ಗುರುತಿಸಿಕೊಂಡಿದ್ದವರು.

2008ರಲ್ಲಿ ಬಿಜೆಪಿಗೆ ಸೇರ್ಪಡೆಯಾಗಿ ಶಿಗ್ಗಾವ್ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದವರು. ಅವರ ತಂದೆ ಎಸ್.ಆರ್.ಬೊಮ್ಮಾಯಿ ಜನತಾಪರಿವಾರದಿಂದಲೇ ಮುಖ್ಯಮಂತ್ರಿಯಾಗಿದ್ದರು. ಕೇಂದ್ರ ಸಚಿವರಾಗಿಯೂ ಕೆಲಸ ಮಾಡಿದ್ದರು. ಅವರ ಪುತ್ರ ಬಸವರಾಜ ಬೊಮ್ಮಾಯಿ ಈಗ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರು ಮತ್ತು ರಾಜ್ಯದ ಮುಖ್ಯಮಂತ್ರಿ ಕೂಡ ಆಗಿದ್ದಾರೆ.

ಇನ್ನೂ ಜನತಾದಳದಲ್ಲಿ ಬೆಳೆದು ಬಂದಿದ್ದ ಸಿದ್ದರಾಮಯ್ಯ 2006ರಲ್ಲಿ ಕಾಂಗ್ರೆಸ್‍ಗೆ ಬಂದರು. 2013ರಲ್ಲಿ ಮುಖ್ಯಮಂತ್ರಿಯಾಗಿದ್ದರು. ಈಗ ಪ್ರತಿಪಕ್ಷದ ನಾಯಕರಾಗಿದ್ದಾರೆ. ಮತ್ತೊಂದು ಪ್ರತಿಪಕ್ಷವಾಗಿರುವ ಜನತಾದಳಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನಾಯಕರು. ಅಲ್ಲಿಗೆ ವಿಧಾನಸಭೆಯಲ್ಲಿ ಜನತಾಪರಿವಾರದ ಮೂಲ ನಾಯಕರೇ ಅಧಿಪತಿಗಳಾಗಿದ್ದಾರೆ. ಆಡಳಿತ, ವಿರೋಧ ಪಕ್ಷ ಸೇರಿ ಎಲ್ಲಾ ಕೇಂದ್ರ ಸ್ಥಾನದಲ್ಲೂ ಜನತಾ ಪರಿವಾರದ ನಾಯಕರಿಗೆ ಅವಕಾಶಗಳು ಸಿಕ್ಕಿವೆ. ಎಲ್ಲರೂ ಒಂದಲ್ಲಾ ಒಂದು ರೀತಿ ದೇವೇಗೌಡರ ರಾಜಕೀಯ ಗರಡಿಯಲ್ಲಿ ಪಳಗಿದವರು ಎಂಬುದು ವಿಶೇಷ.

ಬಿಜೆಪಿ ಆಡಳಿತದಲ್ಲಿದ್ದರೂ ಆ ಪಕ್ಷದ ಮೂಲ ನಾಯಕರು ಮುಖ್ಯಮಂತ್ರಿಗಳಾಗಿಲ್ಲ. ಕಾಂಗ್ರೆಸ್ ಪ್ರತಿಪಕ್ಷದಲ್ಲಿದ್ದರೂ ಜನತಾಪರಿವಾರದ ಮೂಲ ನಾಯಕ ಸಿದ್ದರಾಮಯ್ಯ ಅವರನ್ನು ಅವಲಂಭಿಸುವ ಪರಿಸ್ಥಿತಿ ಬಂದಿದೆ. ಜನತಾಪರಿವಾರದ ಮೂಸೆಯಲ್ಲಿ ಬೆಳೆದು ಬಂದ ನಾಯಕರೇ ಇಂದು ರಾಜ್ಯದ ಅಧಿಕಾರದ ಕೇಂದ್ರ ಸ್ಥಾನದಲ್ಲಿದ್ದಾರೆ. ಸ್ಥಳೀಯವಾಗಿ ಯಶಸ್ವಿಯಾಗಿದ್ದ ಜನತಾ ಪರಿವಾರ ನಾಯಕರ ಪ್ರತಿಷ್ಠೆಯಿಂದ ಹಲವಾರು ಹೋಳುಗಳಾಗಿದೆ. ಆದರೂ ಅಲ್ಲಿಂದ ಬೆಳೆದು ಬಂದ ನಾಯಕರು ತಮ್ಮ ಸಾಮಥ್ರ್ಯವನ್ನು ಪದೇ ಪದೇ ಸಾಬೀತು ಪಡಿಸುತ್ತಿದ್ದಾರೆ.

Facebook Comments