ಪ್ರವಾಸಿ ನೌಕೆಯಲ್ಲಿದ್ದ ಇನ್ನೂ 39 ಮಂದಿಗೆ ಕೊರೋನಾ ಸೋಂಕು

ಈ ಸುದ್ದಿಯನ್ನು ಶೇರ್ ಮಾಡಿ

ಟೋಕಿಯೋ, ಫೆ.12- ಪ್ರವಾಸಿ ನೌಕೆಯಲ್ಲಿರುವ ವಿಹಾರಾರ್ಥಿಗಳಿಗೆ ತಗುಲಿರುವ ಮಾರಕ ಕೊರೋನಾ ವೈರಸ್ (ಕೊವೆಡ್-19) ಸೋಂಕು ವ್ಯಾಪಿಸುತ್ತಲೇ ಇದೆ.  ಡೈಮಂಡ್ ಪ್ರಿನ್ಸಸ್ ನೌಕೆಯಲ್ಲಿರುವ ಇನ್ನೂ 39 ಜನರಿಗೆ ವೈರಾಣು ಸೋಂಕು ದೃಢಪಟ್ಟಿದ್ದು, ಈ ವಿಹಾರಿ ಹಡಗಿನಲ್ಲಿರುವ ಒಟ್ಟು 174 ಮಂದಿಗೆ ರೋಗ ತಗುಲಿದೆ.

ಇವರಲ್ಲಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದ್ದು, ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿದೆ. ಸಿಂಗಪೂರ್ ಮಾರ್ಗವಾಗಿ ಬಂದ ಈ ನೌಕೆಯಲ್ಲಿ ಹಾಂಕಾಂಗ್ ಪ್ರಜೆಯ ಮೂಲಕ ಹರಡಿದ ವೈರಾಣು ಸೋಂಕು ಹಂತ ಹಂತವಾಗಿ ವ್ಯಾಪಿಸತೊಡಗಿದ್ದು, ಭಾರತದ ಕಾರವಾರದ ಯುವಕ ಕನ್ನಡಿಗ ಅಭಿಷೇಕ್ ಸೇರಿದಂತೆ ಆರಂಭದಲ್ಲಿ 44ಕ್ಕೂ ಹೆಚ್ಚು ಮಂದಿಗೆ ಸೋಂಕು ಕಾಣಿಸಿಕೊಂಡಿತ್ತು.

ವಿಹಾರ ನೌಕೆಯಲ್ಲಿದ್ದ 54 ಮಂದಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಅವರಲ್ಲಿ 39 ಮಂದಿಗೆ ಸೋಂಕು ತಗುಲಿರುವುದು ಪತ್ತೆಯಾಯಿತು. ಇದರೊಂದಿಗೆ ಈ ಸಾಂಕ್ರಾಮಿಕ ರೋಗದಿಂದ ನರಳುತ್ತಿರುವವರ ಸಂಖ್ಯೆ 174ಕ್ಕೆ ಏರಿದೆ. ಸದ್ಯಕ್ಕೆ ಹಡಗು ಜಪಾನ್ ಕರಾವಳಿ ಪ್ರದೇಶದಿಂದ ದೂರದಲ್ಲಿ ಲಂಗರು ಹಾಕಿ ತಟಸ್ಥವಾಗಿದೆ.

Facebook Comments