ಜಪಾನ್‍ನಲ್ಲಿ ಜಲಪ್ರಳಯ : ಕೊಚ್ಚಿಹೋದ ಮನೆ, ಕಾರ್ಖಾನೆ, 60ಕ್ಕೂ ಹೆಚ್ಚು ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಟೋಕಿಯೋ, ಜು.8- ಭಾರೀ ಮಳೆ ಕಾರಣ ಜಪಾನ್‍ನ ಹಲವು ಕಡೆ ಪ್ರವಾಹ ಉಂಟಾಗಿದ್ದು, ಲಕ್ಷಾಂತರ ಮಂದಿ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ದ್ವೀಪರಾಷ್ಟ್ರದ ಹಲವು ಕಡೆ ಇರುವ ನದಿಗಳು ಉಕ್ಕಿ ಹರಿಯುತ್ತಿದ್ದು, ಮನೆಗಳು, ಕಾರ್ಖಾನೆಗಳು ಕೊಚ್ಚಿಹೋಗಿವೆ.

ಮಧ್ಯ ಜಪಾನ್‍ನ ನಗಾನೊ ಮತ್ತು ಗಿಫು ಪ್ರದೇಶ ಸಂಪೂರ್ಣ ನೀರಿನಿಂದ ಮುಳುಗಿದ್ದು, ರಾಷ್ಟ್ರೀಯ ಹೆದ್ದಾರಿ ಕೂಡ ಸಂಪೂರ್ಣ ನಾಶಗೊಂಡಿದೆ.  ಅಲ್ಲಿಗೆ ತಲುಪಲು ಪರಿಹಾರ ಸಿಬ್ಬಂದಿ ಹರಸಾಹಸ ಪಡುತ್ತಿದ್ದು, ಈವರೆಗೆ ಸುಮಾರು 60ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

ಕುಮಾಮೋಟೋ ಪ್ರದೇಶದಲ್ಲಿ ಅತ್ಯಂತ ಹೆಚ್ಚು ಹಾನಿ ಸಂಭವಿಸಿದೆ ಎಂದು ಅಲ್ಲಿನ ಸುದ್ದಿಮಾಧ್ಯಮ ವರದಿ ಮಾಡಿದೆ. ಸುಮಾರು 4 ಲಕ್ಷಕ್ಕೂ ಹೆಚ್ಚು ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚನೆ ನೀಡಲಾಗಿದ್ದು, ಪ್ರಮುಖ ನಗರಗಳ ಪಕ್ಕದಲ್ಲೇ ಹರಿಯುವ ನದಿಗಳು ಸೇತುವೆ, ರಸ್ತೆಗಳ ಮೇಲೆ ಹರಿಯುತ್ತಿವೆ ಎಂದು ದೃಶ್ಯ ಮಾಧ್ಯಮ ಹಲವು ಚಿತ್ರಗಳನ್ನು ತೋರಿಸಿವೆ.

ಸೇನಾಪಡೆ, ತುರ್ತು ಪರಿಹಾರ ಸಿಬ್ಬಂದಿಗಳು ಹಾಗೂ ಸ್ವಯಂ ಸೇವಾ ಸಿಬ್ಬಂದಿಗಳು ಪರಿಹಾರ ಕಾರ್ಯದಲ್ಲಿ ತೊಡಗಿದ್ದು, ಬೇಸಿಗೆ ಸಮೀಪಿಸುತ್ತಿರುವ ಸಂದರ್ಭದಲ್ಲಿಯೇ ಭಾರೀ ಮಳೆ ಅವಾಂತರ ಸೃಷ್ಟಿಸಿದೆ.

ಕಳೆದ 2018ರಲ್ಲಿ ಇದೇ ರೀತಿ ಪ್ರವಾಹ ಸಂದರ್ಭದಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Facebook Comments