ಜಾರಕಿಹೊಳಿ ಬ್ರದರ್ಸ್ ಬೈ ಎಲೆಕ್ಷನ್ ಫೈಟ್..! ಲಖನ್‍ಗೆ ಟಿಕೆಟ್ ಕೊಡಿಸಲು ಸತೀಶ್ ಲಾಬಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.17-ಒಂದೆಡೆ ಬೆಳಗಾವಿಯಲ್ಲಿ ಪ್ರವಾಹ ಬಂದು ಸಂತ್ರಸ್ತರು ಸಂಕಷ್ಟಕ್ಕೀಡಾಗಿದ್ದರೆ ಮತ್ತೊಂದೆಡೆ ಜಾರಕಿಹೊಳಿ ಸಹೋದರರು ಉಪಚುನಾವಣೆಯ ತಯಾರಿ ನಡೆಸುತ್ತಿದ್ದಾರೆ. ಮುಂಬರುವ ಉಪಚುನಾವಣೆ ಗೋಕಾಕ್ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಗೋಕಾಕ್‍ನ ಉಪಚುನಾವಣೆಗೆ ಕಾಂಗ್ರೆಸ್‍ನಿಂದ ಲಖನ್ ಜಾರಕಿಹೊಳಿಯನ್ನು ಕಣಕ್ಕಿಳಿಸಲು ಸೋದರ ಸತೀಶ್ ಜಾರಕಿಹೊಳಿ ಲಾಬಿ ಶುರುವಿಟ್ಟುಕೊಂಡಿದ್ದಾರೆ.

ಲಖನ್‍ಗೆ ಟಿಕೆಟ್ ಕೊಡಿಸಲು ಈಗಾಗಲೇ ದೆಹಲಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು ಅವರು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿದುಬಂದಿದೆ. ಯುವ ಮುಖಂಡ ಲಖನ್‍ಗೆ ಟಿಕೆಟ್ ನೀಡಿದರೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸುಲಭವಾಗುತ್ತದೆ. ಇತ್ತೀಚೆಗೆ ಸಂಭವಿಸಿದ ಪ್ರವಾಹ ಪರಿಸ್ಥಿತಿಯನ್ನು ಲಖನ್ ಉತ್ತಮವಾಗಿ ನಿಭಾಯಿಸಿದ್ದಾರೆ. ಜನರೊಂದಿಗೆ ಇದ್ದು ಕೆಲಸ ಮಾಡಿದ್ದಾರೆ. ಅವರಿಗೆ ಟಿಕೆಟ್ ಕೊಟ್ಟರೆ ಗೆಲುವು ನಿಶ್ಚಿತ ಎಂದು ಹೈಕಮಾಂಡ್‍ಗೆ ಸತೀಶ್ ಮನವರಿಕೆ ಮಾಡಿಕೊಟ್ಟಿದ್ದಾರೆ.

ಸಮ್ಮಿಶ್ರ ಸರ್ಕಾರವನ್ನು ಉರುಳಿಸಿದ ಕಾಂಗ್ರೆಸ್ ಪಕ್ಷಕ್ಕೆ ಕಂಟಕವಾಗಿರುವ ರಮೇಶ್ ಜಾರಕಿಹೊಳಿಗೆ ಬುದ್ಧಿ ಕಲಿಸಲು ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಹೈಕಮಾಂಡ್ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಲಖನ್ ಅವರೇ ಸೂಕ್ತ ಎಂದು ಸತೀಶ್ ಜಾರಕಿಹೊಳಿಯವರು ತಿಳಿಸಿದ್ದಾರೆ.  ಈ ಹಿಂದೆ ಕೂಡ ಸಿದ್ದರಾಮಯ್ಯನವರು ಲಖನ್ ಅವರ ಹೆಸರನ್ನು ಪ್ರಸ್ತಾಪಿಸಿದ್ದರು. ಈಗ ಲಖನ್ ಅವರಿಗೆ ಟಿಕೆಟ್ ದೊರೆತರೆ ಸೋದರರ ನಡುವೆ ಜಿದ್ದಾಜಿದ್ದಿನ ಕಾಳಗ ಉಂಟಾಗಲಿದೆ.

Facebook Comments