ನಾಳೆಯಿಂದ ಜಯದೇವ ಮೇಲ್ಸೇತುವೆ ನೆಲಸಮ, ವಾಹನ ಸವಾರರಿಗೆ ಅಡಚಣೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.15- ಮೆಟ್ರೋ ಕಾಮಗಾರಿಗಾಗಿ ನಗರದಲ್ಲಿ ಇದೇ ಮೊದಲ ಬಾರಿಗೆ ಮೇಲ್ಸೇತುವೆಯೊಂದನ್ನು ನೆಲಸಮಗೊಳಿಸಲಾಗುತ್ತಿದೆ.ಮೆಟ್ರೋ ಕಾಮಗಾರಿಗಾಗಿ 12 ವರ್ಷಗಳ ಹಿಂದಿನ ಜಯದೇವ ಮೇಲ್ಸೇತುವೆ ನೆಲಸಮ ಕಾರ್ಯಾಚರಣೆಯನ್ನು ನಾಳೆಯಿಂದ ನಡೆಸಲಾಗುತ್ತಿದೆ.

ಏಷ್ಯಾದಲ್ಲೇ ಅತಿ ಹೆಚ್ಚು ವಾಹನ ಸಂದಣಿ ಪ್ರದೇಶವೆಂಬ ಖ್ಯಾತಿಗೆ ಒಳಗಾಗಿರುವ ದಕ್ಷಿಣ ಭಾಗದಲ್ಲಿ ಜಯದೇವ ಮೇಲ್ಸೇತುವೆಯನ್ನು ನೆಲಸಮಗೊಳಿಸಿದರೆ ನಾಳೆಯಿಂದ ಆ ಭಾಗದಲ್ಲಿ ಮತ್ತಷ್ಟು ವಾಹನ ದಟ್ಟಣೆ ಹೆಚ್ಚಾಗಲಿದೆ. ಮೇಲ್ಸೇತುವೆ ನೆಲಸಮ ಗೊಳಿಸಲು ಕನಿಷ್ಟ ಮೂರು ತಿಂಗಳ ಕಾಲಾವಕಾಶ ಬೇಕಾಗಿದ್ದು, ನಾಳೆಯಿಂದ ಈ ಭಾಗದ ರಸ್ತೆಗಳಲ್ಲಿ ಸಂಚರಿಸುವುದು ದುಸ್ತರವಾಗಲಿದೆ.

ಕಾಮಗಾರಿ ನಡೆಸುವ ಸಂದರ್ಭದಲ್ಲಿ ವಾಹನ ದಟ್ಟಣೆ ಹೆಚ್ಚಾಗಬಾರದು ಎಂಬ ಉದ್ದೇಶದಿಂದ ನೆಲಸಮ ಕಾರ್ಯಾಚರಣೆಯನ್ನು ರಾತ್ರಿ ವೇಳೆ ನಡೆಸಲು ತೀರ್ಮಾನಿಸಲಾಗಿದೆ.
ಮೇಲ್ಸೇತುವೆ ನೆಲಸಮ ಗೊಳಿಸಿದರೆ ವಾಹನದಟ್ಟಣೆ ತಪ್ಪಿಸಲು ಅಸಾಧ್ಯವಾಗುತ್ತದೆ. ಹೀಗಾಗಿ ಸೇತುವೆ ನೆಲಸಮಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಸಂಚಾರಿ ಪೊಲೀಸರು ಪಟ್ಟು ಹಿಡಿದಿದ್ದರು. ಆದರೆ, ಇದೀಗ ಅನಿವಾರ್ಯವಾಗಿ ಮೇಲ್ಸೇತುವೆ ನೆಲಸಮಕ್ಕೆ ಅವಕಾಶ ಕಲ್ಪಿಸಿಕೊಡಲೇಬೇಕಾಗಿದೆ.

ವಾಹನದಟ್ಟಣೆ ತಪ್ಪಿಸಲು ನಾಳೆಯಿಂದ ಪರ್ಯಾಯ ರಸ್ತೆ ವ್ಯವಸ್ಥೆ ಮಾಡಲಾಗಿದ್ದು, ಕಾಮಗಾರಿ ನಡೆಯುವ ಪ್ರದೇಶದಲ್ಲಿ ಕೇವಲ ಬಿಎಂಟಿಸಿ ಬಸ್, ಆ್ಯಂಬುಲೆನ್ಸ್ ಹಾಗೂ ದ್ವಿಚಕ್ರ ವಾಹನಗಳ ಸಂಚಾರಕ್ಕೆ ಮಾತ್ರ ಅನುವು ಮಾಡಿಕೊಡುತ್ತಿದೆ. ಇನ್ನಿತರ ವಾಹನಗಳನ್ನು ಪರ್ಯಾಯ ರಸ್ತೆಗಳಲ್ಲಿ ಸಂಚರಿಸುವಂತೆ ರೂಟ್‍ಮ್ಯಾಪ್ ಸಿದ್ಧಪಡಿಸಲಾಗಿದೆ. ಜಯದೇವ ವೃತ್ತದಿಂದ ಬನ್ನೇರುಘಟ್ಟ ರಸ್ತೆಯ ಸಂಚಾರಕ್ಕೆ ಅಷ್ಟು ಅಡಚಣೆಯಾಗದಿದ್ದರೂ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೂ ಮಾರೇನಹಳ್ಳಿ ಮುಖ್ಯರಸ್ತೆಯ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗುತ್ತಿದೆ.

ಮೆಟ್ರೋ ಮೊದಲ ಹಂತದ ಕಾಮಗಾರಿ ಆರಂಭಗೊಂಡಾಗಿನಿಂದಲೂ ಇದುವರೆಗೂ ಯಾವುದೇ ಮೇಲ್ಸೇತುವೆಯನ್ನು ನೆಲಸಮಗೊಳಿಸದೆ ಪರ್ಯಾಯ ಮಾರ್ಗದಲ್ಲಿ ಮೆಟ್ರೋ ಲೈನ್ ಅಳವಡಿಸಲಾಗಿತ್ತು.ಆದರೆ, ಜಯದೇವ ಮೇಲ್ಸೇತುವೆ ಸಮೀಪ ಮೆಟ್ರೋ ನಿಲ್ದಾಣ ಸ್ಥಾಪಿಸಲು ಸ್ಥಳದ ಅವಶ್ಯಕತೆಯಿತ್ತು. ಜಯದೇವ ಹೃದ್ರೋಗ ಆಸ್ಪತ್ರೆ ಆವರಣದಲ್ಲಿ ನಿಲ್ದಾಣ ಸ್ಥಾಪನೆಗೆ ಅವಕಾಶ ನಿರಾಕರಿಸಿದ್ದರಿಂದ ಅನಿವಾರ್ಯವಾಗಿ ಮೇಲ್ಸೇತುವೆ ನೆಲಸಮಗೊಳಿಸಿ ನಿಲ್ದಾಣ ಸ್ಥಾಪಿಸಬೇಕಾಗಿದೆ.

ಕಳೆದ 2017ರಲ್ಲೇ ಜಯದೇವ ಮೇಲ್ಸೇತುವೆ ನೆಲಸಮ ಗೊಳಿಸುವಂತೆ ಬಿಎಂಆರ್‍ಸಿಎಲ್ ಮನವಿ ಸಲ್ಲಿಸು ತ್ತಲೇ ಬಂದಿತ್ತು. ಆದರೆ, ಇದಕ್ಕೆ ವ್ಯಾಪಕ ಪ್ರತಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ಮುಂದೂಡುತ್ತಲೇ ಬರಲಾಗಿತ್ತು.

ಇದೀಗ ಮೇಲ್ಸೇತುವೆ ನೆಲಸಮಕ್ಕೆ ಅನುಮತಿ ದೊರೆತಿದ್ದು, ನಾಳೆಯಿಂದಲೇ ಕಾಮಗಾರಿ ಆರಂಭವಾಗಲಿದ್ದು, ಬಿಟಿಎಂ ಲೇಔಟ್, ಬನ್ನೇರುಘಟ್ಟ ರಸ್ತೆ, ಸೆಂಟ್ರಲ್ ಸಿಲ್ಕ್‍ಬೋರ್ಡ್ ಮಾರ್ಗಗಳಲ್ಲಿ ಸಾಕಷ್ಟು ವಾಹನದಟ್ಟಣೆ ಹೆಚ್ಚಾಗಲಿದ್ದು, ಸವಾರರು ಈ ಭಾಗದಲ್ಲಿ ಸಂಚರಿಸಬೇಕಾದರೆ ಹೈರಾಣಾಗ ಬೇಕಾಗುತ್ತದೆ.

Facebook Comments

Sri Raghav

Admin