ಜನ ಬಲದ ಮುಂದೆ  ಹಣ ಬಲದ ಆಟ ನಡೆಯಲ್ಲ: ಜಯಮಾಲಾ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.2- ಜನ ಬಲದ ಮುಂದೆ ಹಣ ಬಲದ ಆಟ ನಡೆಯೋದಿಲ್ಲ. ಮಹಾಲಕ್ಷ್ಮಿ ಬಡಾವಣೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ಶಿವರಾಜ್ ಗೆಲುವು ಸಾಧಿಸಲಿದ್ದಾರೆ ಎಂದು ಮಾಜಿ ಸಚಿವೆ ಜಯಮಾಲಾ ಭವಿಷ್ಯ ನುಡಿದರು.  ಕ್ಷೇತ್ರದ ವೃಷಭಾವತಿನಗರ ವಾರ್ಡ್‍ನ ವಿವಿಧ ಪ್ರದೇಶಗಳಲ್ಲಿ ರೋಡ್ ಶೋ ನಡೆಸಿ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.

17 ಜನ ಶಾಸಕರು ಬಿಜೆಪಿಯಿಂದ ಹಣ ಪಡೆದು ರಾಜೀನಾಮೆ ನೀಡಿದ್ದಾರೆ.ಆ ಹಣ ಬಲದಿಂದ ಮತ್ತೆ ನಾವು ಗೆಲ್ಲುತ್ತೇವೆ ಎಂಬ ಭ್ರಮೆಯಲ್ಲಿದ್ದಾರೆ. ಆದರೆ ಇದನ್ನೆಲ್ಲ ಗಂಭೀರವಾಗಿ ಗಮನಿಸುತ್ತಿರುವ ಮತದಾರರ ಅನರ್ಹರಿಗೆ ತಕ್ಕ ಪಾಠ ಕಲಿಸಲು ನಿರ್ಧರಿಸಿದ್ದಾರೆ ಎಂದು ಹೇಳಿದರು.  ಜಾತಿ ಜಾತಿಗಳ ನಡುವೆ ಕೋಮುಸಾಮರಸ್ಯ ಹಾಳು ಮಾಡಿ ವಾಮಮಾರ್ಗದಿಂದ ಅಧಿಕಾರ ಹಿಡಿಯುವುದು ಬಿಜೆಪಿಯ ಅಜೆಂಡ, 2ನೇ ಅವಧಿಗೆ ಅಧಿಕಾರ ಹಿಡಿಯಲು ಕೇಂದ್ರ ಸರ್ಕಾರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ಸಾಧನೆ ಶೂನ್ಯ ಎಂದು ಅವರು ಲೇವಡಿ ಮಾಡಿದರು.

ಮೋದಿ ಮಾತಿಗೆ ಮರುಳಾಗಿ ಬಿಜೆಪಿಗೆ ಮತ ಚಲಾಯಿಸಿದ ಮತದಾರರಿಗೆ ಇಂದು ಸತ್ಯದ ಅರಿವಾಗಿದೆ. ಕುಸಿಯುತ್ತಿರುವ ಆರ್ಥಿಕತೆಯಿಂದ ನೊಂದಿರುವವರು ಇನ್ನೆಂದೂ ಬಿಜೆಪಿಗೆ ಮತ ಹಾಕುವುದಿಲ್ಲ ಎಂದರು. ಕಾಂಗ್ರೆಸ್ ಅಭ್ಯರ್ಥಿ ಶಿವರಾಜ್ ಮಾತನಾಡಿ, ಕಳೆದ 10 ವರ್ಷಗಳಲ್ಲಿ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರಕ್ಕೆ ಎಷ್ಟು ಅನುದಾನ ಬಿಡುಗಡೆಯಾಗಿದೆ ಎಂಬ ಅಂಕಿಅಂಶ ಬಿಡುಗಡೆ ಮಾಡಿದರೆ ಅನರ್ಹ ಶಾಸಕರ ನಿಜಬಣ್ಣ ಬಯಲಾಗಲಿದೆ. ಮತದಾರರಿಗೆ ಸುಳ್ಳು ಹೇಳಿ ಯಾಮಾರಿಸಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಮ್ಮಿಶ್ರ ಸರ್ಕಾರದ ಆಡಳಿತಾವಧಿಯಲ್ಲಿ ಮಹಾಲಕ್ಷ್ಮಿ ಬಡಾವಣೆಯ ವಿಧಾನಸಭಾ ಕ್ಷೇತ್ರಕ್ಕೆ 400 ಕೋಟಿಗೂ ಅಧಿಕ ಅನುದಾನ ಬಿಡುಗಡೆಯಾಗಿದೆ. ಆದರೂ ಅನರ್ಹ ಶಾಸಕರು ಕ್ಷೇತ್ರದ ಅಭಿವೃದ್ಧಿಗಾಗಿ ಪಕ್ಷಾಂತರ ಮಾಡಿ ಬಿಜೆಪಿ ಸೇರಿ ಉಪಚುನಾವಣೆ ಎದುರಿಸುತ್ತಿದ್ದೇನೆ ಎಂದು ಹೇಳಿಕೆ ನೀಡುತ್ತಿರುವುದು ಹಾಸ್ಯಾಸ್ಪದ ಎಂದು ಶಿವರಾಜ್ ಲೇವಡಿ ಮಾಡಿದರು.

ತತ್ವ ಸಿದ್ದಾಂತದ ಜೊತೆಗೆ ತಮ್ಮನ್ನು ಬಿಜೆಪಿ ಪಕ್ಷಕ್ಕೆ ಮಾರಿಕೊಂಡಿರುವ ಅನರ್ಹ ಶಾಸಕರಿಗೆ ತಕ್ಕ ಪಾಠ ಕಲಿಸಲು ಮತದಾರರ ತೀರ್ಮಾನಿಸಿದ್ದು, ಡಿ.9ರ ಫಲಿತಾಂಶದ ನಂತರ ಜನತಾ ನ್ಯಾಯಾಲಯ ಸೂಕ್ತ ಉತ್ತರ ನೀಡಲಿದೆ ಎಂದರು. ಮಾಜಿ ಮೇಯರ್ ಜಿ.ಪದ್ಮಾವತಿ, ಬಿಬಿಎಂಪಿ ಸದಸ್ಯರಾದ ರೂಪಾ ಲಿಂಗೇಶ್ವರ್, ಚಂದ್ರಕಲಾ ಗಿರೀಶ್ ಮತ್ತಿತರ ಕಾಂಗ್ರೆಸ್ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.

Facebook Comments